ಹಲಾಲ್ VS ಜಟ್ಕಾ ಕಟ್: ಕರ್ನಾಟಕದಲ್ಲಿ ಮುಂದುವರಿದ ವಿವಾದ, ಹಲವೆಡೆ ಕರಪಪತ್ರ ಹಂಚಿಕೆ ಫಲಕ ತೆರವು

ಹಲಾಲ್ ಕಟ್ ವಿಧಾನ ಸುರಕ್ಷಿತ ಮತ್ತು ಆರೋಗ್ಯಕರ ಎಂದು ಮುಸ್ಲಿಂ ಸಂಘಟನೆಗಳು ಸಮರ್ಥಿಸಿಕೊಂಡಿವೆ. ಇದು ಇಸ್ಲಾಂ ಧಾರ್ಮಿಕ ವಿಧಿ, ಹಿಂದೂಗಳಿಗೆ ಅನಗತ್ಯ ಎಂದು ಹಿಂದುತ್ವವಾದಿ ಸಂಘಟನೆಗಳು ತಮ್ಮ ಪ್ರತಿಪಾದನೆಯನ್ನು ಮುಂದುವರಿಸಿವೆ.

ಹಲಾಲ್ VS ಜಟ್ಕಾ ಕಟ್: ಕರ್ನಾಟಕದಲ್ಲಿ ಮುಂದುವರಿದ ವಿವಾದ, ಹಲವೆಡೆ ಕರಪಪತ್ರ ಹಂಚಿಕೆ ಫಲಕ ತೆರವು
ಬೆಂಗಳೂರಿನ ದೊನ್ನೆ ಬಿರಿಯಾನಿ ಹೊಟೆಲ್ ಮೇಲಿನ ಹಲಾಲ್ ಕಟ್ ಫಲಕ ತೆರವುಗೊಳಿಸಲಾಯಿತು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 31, 2022 | 1:13 PM

ಬೆಂಗಳೂರು: ಕರ್ನಾಟಕದಲ್ಲಿ ಯುಗಾದಿ ವರ್ಷತೊಡಕಿನ ಹಿನ್ನೆಲೆಯಲ್ಲಿ ಆರಂಭವಾಗಿರುವ ಹಲಾಲ್ ಮತ್ತು ಜಟ್ಕಾ ಕಟ್ (Halal VS Jatka Cut) ಮಾಂಸ ಸೇವನೆಯ ವಿವಾದ ಗುರುವಾರವೂ ಮುಂದುವರಿದಿದೆ. ಹಲಾಲ್ ಕಟ್ ವಿಧಾನ ಸುರಕ್ಷಿತ ಮತ್ತು ಆರೋಗ್ಯಕರ ಎಂದು ಮುಸ್ಲಿಂ ಸಂಘಟನೆಗಳು ಸಮರ್ಥಿಸಿಕೊಂಡಿವೆ. ಇದು ಇಸ್ಲಾಂ ಧಾರ್ಮಿಕ ವಿಧಿ, ಹಿಂದೂಗಳಿಗೆ ಅನಗತ್ಯ ಎಂದು ಹಿಂದುತ್ವವಾದಿ ಸಂಘಟನೆಗಳು ತಮ್ಮ ಪ್ರತಿಪಾದನೆಯನ್ನು ಮುಂದುವರಿಸಿವೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್​ಎಸ್​ಎಫ್ ಮುಖಂಡ ಸಿದ್ದೀಖ್ ಮುಂಟುಗೋಳಿ, ಪ್ರಾಣಿ ಕತ್ತು ಕುಯ್ದು ರಕ್ತವು ಒಂದೇ ಸಮನೆ ಹರಿದುಹೋಗಲು ಬಿಡುವುದು ಹಲಾಲ್ ಎನಿಸಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಪ್ರಾಣಿಗಳ ದೇಹದಿಂದ ರಕ್ತ ಸಂಪೂರ್ಣ ಹೊರಗೆ ಬರುತ್ತದೆ, ಹೆಪ್ಪುಗಟ್ಟುವುದಿಲ್ಲ. ಪ್ರಾಣಿದೇಹದಲ್ಲಿ ರಕ್ತ ಹೆಪ್ಪುಗಟ್ಟಿದ ಮಾಂಸವು ತಿನ್ನಲು ಯೋಗ್ಯವಲ್ಲ. ಅದರಿಂದ ಹಲವು ಬಗೆಯ ಕಾಯಿಲೆಗಳು ಉಲ್ಭಣಿಸುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಲಾಲ್ ಕುರಿತು ವ್ಯಾಪಕವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಹಲಾಲ್ ಎಂದರೆ ಕೇವಲ ಪ್ರಾಣಿವಧೆ ಮಾಡಿ ಮಾಂಸ ಪಡೆಯುವ ವಿಧಾನವಲ್ಲ. ಇಸ್ಲಾಂನ ಪ್ರಮುಖ ವಿಚಾರಗಳ ಪೈಕಿ ಹಲಾಲ್ ಕೂಡ ಒಂದು. ಹಲಾಲ್ ಎಂದರೆ ಸರಿಯಾದ ಮಾದರಿಯಲ್ಲಿರುವುದು ಎಂದರ್ಥ. ಇಸ್ಲಾಂ ಧರ್ಮಶಾಸ್ತ್ರದ ಪ್ರಕಾರ ಹೇಳಿರುವ ಹಾಗೆ ಜೀವನ ರೂಪಿಸಿಕೊಳ್ಳುವುದು ಹಲಾಲ್ ಎನಿಸಿಕೊಳ್ಳುತ್ತದೆ. ಅದನ್ನು ಕೇವಲ ಮಾಂಸಹಾರಕ್ಕೆ ಮಾತ್ರ ಸೀಮಿತಗೊಳುವುದು ತಪ್ಪಾಗುತ್ತದೆ. ಕದ್ದು ತಂದಿರುವ ಯಾವುದೇ ವಸ್ತು ಹಲಾಲ್ ಎನಿಸಿಕೊಳ್ಳುವುದಿಲ್ಲ. ಅಂಥವು ಹರಾಮ್ ಎನಿಸಿಕೊಳ್ಳುತ್ತವೆ ಎಂದರು.

ಸರಿಯಾದ ದಾರಿಯಲ್ಲಿ ಅಗತ್ಯವಿರುವ ವಸ್ತುಗಳನ್ನು ಪಡೆದುಕೊಳ್ಳುವುದು ಹಲಾಲ್ ಆಗುತ್ತದೆ. ಪ್ರಾಣಿವಧೆ ವೇಳೆ ಹಲಾಲ್ ಮಾಡುವುದು ಒಂದು ಪದ್ಧತಿಯಷ್ಟೇ. ಹಲಾಲ್ ಕಟ್ ಎಂದರೆ ಹರಿತವಾದ ಚಾಕುವಿನಿಂದ ಪ್ರಾಣಿಯ ಕತ್ತನ್ನು ಒಂದೇ ಸಮನೆ ಕೊಯ್ಯುವುದು. ಕ್ರಮಬದ್ಧವಾಗಿ ಪ್ರಾಣಿವಧೆ ಮಾಡುವುದನ್ನು ಹಲಾಲ್ ಎಂದು ಕರೆಯಲಾಗಿದೆ. ಹಲಾಲ್ ಮಾಡುವಾಗ ಬಿಸ್ಲಿಲ್ಲಾ ಎಂದು ಹೇಳುತ್ತಾರೆ. ಅದರಲ್ಲಿ ಅಪಾರ್ಥಮಾಡಿಕೊಳ್ಳುವಂಥದ್ದು ಏನೂ ಇಲ್ಲ ಎಂದು ಅಭಿಪ್ರಾಯಪಟ್ಟರು.

ಹಲಾಲ್ ಕಟ್ ಫಲಕ ತೆರವು

ಜಟ್ಕಾ ಕಟ್ ಪರವಾಗಿ ಅಭಿಯಾನ ನಡೆಸುತ್ತಿರುವ ಕಾರ್ಯಕರ್ತರು ಬೆಂಗಳೂರಿನ ಕೋರಮಂಗಲ, ಜೆ.ಪಿ.ನಗರದಲ್ಲಿ ಗುರುವಾರ ಹಲವೆಡೆ ಹಲಾಲ್ ಕಟ್ ಫಲಕಗಳನ್ನು ತೆರವುಗೊಳಿಸಿದರು. ಕೋರಮಂಗಲದ ಅರಮನೆ ದೊನ್ನೆ ಬಿರಿಯಾನಿ ಹೋಟಲ್ ಮತ್ತು ಜೆ.ಪಿ.ನಗರದ ಅಲ್ಟ್ರಾ ಬಿರಿಯಾನಿ ಪಾರಡೈಸ್ ಹೋಟಲ್ ಮೇಲಿದ್ದ ಫಲಕಗಲನ್ನು ಬಜರಂಗದಳ ಕಾರ್ಯಕರ್ತರು ತೆರವುಗೊಳಿಸಿದರು. ರಾಜ್ಯದಲ್ಲಿ ಏ.2ರಂದು ಬಜರಂಗದಳ ಕಾರ್ಯಕರ್ತರು ಹಲಾಲ್ ಕಟ್ ಬಾಯ್ಕಾಟ್ ಅಭಿಯಾನ ನಡೆಸಲಿದ್ದಾರೆ. ಬೆಂಗಳೂರಿನ ಸಿದ್ದಾಪುರದಲ್ಲಿಯೂ ಈ ಸಂಬಂಧ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ.

ಯುಗಾದಿ ಹಬ್ಬದ ದಿನದಂದು ದೊಡ್ಡ ಮಟ್ಟದಲ್ಲಿ ಹಲಾಲ್ ಬಾಯ್ಕಾಟ್ ಅಭಿಯಾನ ನಡೆಸಲು ಹಿಂದೂ ಸಂಘಟನೆಗಳು ತಯಾರಿ ಮಾಡಿಕೊಳ್ಳುತ್ತಿವೆ. ಯುಗಾದಿ ಹೊಸ್ತೊಡ್ಕು ವೇಳೆ ಹಲಾಲ್ ಮಾಡಿರುವ ಚಿಕನ್, ಮಟನ್ ಖರೀದಿಸಬೇಡಿ ಎಂದು ಬಜರಂಗದಳ ಅಭಿಯಾನ ನಡೆಸುತ್ತಿದೆ. ಲಾಲ್​ಬಾಗ್​ನಲ್ಲಿರುವ ಸಿದ್ಧಾಪುರದಿಂದ ಬೃಹತ್ ಅಭಿಯಾನ ನಡೆಯಲಿದೆ. ಇದಕ್ಕಾಗಿ ಬಜರಂಗದಳ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ.

ಜಟ್ಕಾ ಕಟ್ ಅಭಿಯಾನ ವಿಸ್ತರಣೆಗೆ ನಿರ್ಧಾರ

ರಾಜ್ಯಾದ್ಯಂತ ಜಟ್ಕಾ ಕಟ್ ಅಭಿಯಾನ ವಿಸ್ತರಿಸಲು ಹಿಂದವೀ ಮಟನ್ ಮಾರ್ಟ್ ಮಾಲೀಕ ಮುನೇಗೌಡ ತೀರ್ಮಾನ ಮಾಡಿದ್ದಾರೆ. ನಮ್ಮ ಜಟ್ಕಾ ಕಟ್​ಗೆ ಜನರ ಬೆಂಬಲ ಸಿಗುತ್ತಿದೆ. ಉತ್ಸಾಹಿ ಯುವಕರು ಜಟ್ಕಾ ಕಟ್​ ಕಲಿಯಲು ಮುಂದೆ ಬರುತ್ತಿದ್ದಾರೆ. ಅವರಿಗೆ ಜಟ್ಕಾ ಕಟ್ ಮಾಡುವ ಬಗ್ಗೆ ಮತ್ತು ಮಾಂಸ ಶುಚಿ ಮಾಡುವ ಬಗ್ಗೆ ತರಬೇತಿ ನೀಡಲು ಶುರು ಮಾಡುತ್ತೇನೆ. ರಾಜ್ಯದ ಇತರ ಜಿಲ್ಲೆಗಳಿಂದಲೂ ಈ ಬಗ್ಗೆ ನಮಗೆ ಕರೆ ಬರುತ್ತಿದೆ. ನಮ್ಮ ಜಟ್ಕಾ ಕಟ್ ವಿಧಾನ ವೈಜ್ಞಾನಿಕವಾಗಿದೆ ಹಾಗೂ ಪುರಾತನ ಧಾರ್ಮಿಕ ಹಿನ್ನಲೆ ಹೊಂದಿದೆ. ಜಟ್ಕಾ ಕಟ್​ ಮಾಡುವಾಗ ವಧೆಯಾಗುವ ಪ್ರಾಣಿಗೆ ಯಾವುದೇ ಹಿಂಸೆ ಆಗುವುದಿಲ್ಲ. ಆದರೆ ಹಲಾಲ್ ಹಾಗಲ್ಲ. ಆ ವಿಧಾನದಲ್ಲಿ ನರ ಕತ್ತರಿಸಿ ಪ್ರಾಣಿಗಳನ್ನು ಸಾಯಿಸುತ್ತಾರೆ. ಪ್ರಾಣಿ ಬದುಕಬೇಕೆಂದು ಒದ್ದಾಡುತ್ತೆ.

ಇದು ಅವೈಜ್ಞಾನಿಕ ವಿಧಾನ ಎಂದು ಹಲವು ಮುಂದುವರಿದ ದೇಶಗಳು ಹಲಾಲ್ ಕಟ್ ನಿರ್ಬಂಧಿಸಿವೆ. ಸದ್ಯ ನಮ್ಮ ಜಟ್ಕಾ ಕಟ್​ಗೆ ಆನ್​ಲೈನ್​ನಲ್ಲಿ ಹೆಚ್ಚು ಪ್ರಚಾರ ಸಿಗುತ್ತಿದೆ. ಮೀಮೋ ಆನ್​ಲೈನ್​ ಪೋರ್ಟಲ್​ನಲ್ಲಿ ಸಾಕಷ್ಟು ಜನರು ಜಟ್ಕಾ ಕಟ್ ಕೊಳ್ಳುತ್ತಿದ್ದಾರೆ. ನಮ್ಮ ಸ್ನೇಹಿತರು ಮನೆಮನೆಗೆ ಜಟ್ಕಾ ಕಟ್ ಮಾಂಸ ತಲುಪಿಸುತ್ತಿದ್ದಾರೆ. ನಾವೂ ಸಹ ಹೊಸ್ತೊಡಕು ಹಬ್ಬಕ್ಕೆ ಡೋರ್ ಡಿಲಿವರಿ ಕೊಡುತ್ತೇವೆ. ಬೆಂಗಳೂರಿನ ಯಾವುದೇ ಭಾಗದ ಜನ ಜಟ್ಕಾ ಕಟ್ ಮಾಂಸ ಬಯಸಿದ್ರೆ ಮನೆಗೆ ತಲುಪಿಸುತ್ತೇವೆ. ಇದು ನಮ್ಮ ಮೂಲ ಉದ್ದೇಶ. ಈಗಾಗಲೇ ಬೆಂಗಳೂರಿನಲ್ಲಿ 6 ಹಿಂದವೀ ಜಟ್ಕಾ ಕಟ್ ಮಾಂಸ ಮಳಿಗೆಗಳಿವೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಟ್ಕಾ ಕಟ್ ಅಭಿಯಾನದ ಬಗ್ಗೆ ಹಿಂದವೀ ಮಟನ್ ಮಾರ್ಟ್ ಮಾಲೀಕ ಮುನೇಗೌಡ ಹೇಳಿದರು.

ಅಕ್ರಮ ಕಸಾಯಿಖಾನೆಗಳ ಮೇಲೆ ಪೊಲೀಸ್ ದಾಳಿ

ಕಲಬುರಗಿ: ನಗರದ ಅಕ್ರಮ ಕಸಾಯಿಖಾನೆಗಳ ಮೇಲೆ‌ ಪೊಲೀಸರು, ಪಾಲಿಕೆ ಸಿಬ್ಬಂದಿ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದರು. ಮೋಮಿವಪುರ್, ರೋಜಾ ಬಡಾವಣೆಯಲ್ಲಿದ್ದ ಅಕ್ರಮ ಕಸಾಯಿಖಾನೆಗಳ ಮೇಲೆ ಪೊಲೀಸರು ದಾಳಿ ನಡೆಸಿ, 9 ಗೋವುಗಳನ್ನು ರಕ್ಷಿಸಿದರು. ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ 9 ಜಿವಂತ ಗೋವುಗಳನ್ನು ರಕ್ಷಿಸಲಾಯಿತು. ಗೋವಿನಚರ್ಮ, ಗೋವಿನ ಹೊಟ್ಟೆಯಲ್ಲಿನ ವಿವಿಧ ಅಂಗಗಳು ಪತ್ತೆಯಾಗಿವೆ.

ಮುಸ್ಲಿಂ ವರ್ತಕರಿಗೆ ಅವಕಾಶ ನೀಡದಂತೆ ಮನವಿ

ಉಡುಪಿ: ಕುಂದಾಪುರ ತಾಲ್ಲೂಕಿನ ಅಸೋಡು ನಂದಿಕೇಶ್ವರ ದೇಗುಲ ವ್ಯಾಪ್ತಿಯಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ದೇಗುಲ ಆಡಳಿತ ಮಂಡಳಿಗೆ ಹಿಂದೂಪರ ಸಂಘಟನೆಗಳು ಮನವಿ ಸಲ್ಲಿಸಿವೆ. ದೇಗುಲ ಪರಿಸರದಲ್ಲಿ ಹಿಂದೂಗಳು ಕೇಸರಿ ಬಾವುಟ ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾವು ತರೋದೇ ಹಲಾಲ್ ಕಟ್ ಮಾಂಸ ಅನ್ನುತ್ತಾರೆ ಗೌಡಾಸ್ ಹೋಟೆಲ್ ಮಾಲೀಕ ನಂಜಪ್ಪ!!

ಇದನ್ನೂ ಓದಿ: ಬೆಂಗಳೂರಿನ ಈ ಗೌಡಾಸ್ ಹೋಟೆಲ್ ನಲ್ಲಿ ಹಲಾಲ್ ಕಟ್ ಮಾಂಸಕ್ಕೆ ಆಸ್ಪದವೇ ಇಲ್ಲ ಅನ್ನುತ್ತಾರೆ ಗ್ರಾಹಕರು