
ಬೆಂಗಳೂರು, ಸೆಪ್ಟೆಂಬರ್ 29: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಶುರುವಾದ ಮಳೆ ಇಡೀ ರಾತ್ರಿ ಗುಡುಗು ಸಹಿತ ಧಾರಾಕಾರ ಸುರಿದಿದೆ. ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಶಾಂತಿನಗರ, ವಿಜಯನಗರ, ಕೆಂಗೇರಿ, ದೀಪಾಂಜಲಿನಗರ, ರಾಜಾಜಿನಗರ ಸೇರಿದಂತೆ ನಗರದ ಬಹುತೇಕ ಕಡೆ ಭಾರಿ ಮಳೆ ಸುರಿದಿದೆ. ಅಂಜನಾಪುರ, ಗೊಟ್ಟಿಗೆರೆ, ಅವಳಹಳ್ಳಿ, ಸೌಧಾಮಿನಿ, ಬನಶಂಕರಿ, ಕೋಣನಕುಂಟೆ, ಆರ್‌ಬಿಐ ಲೇಔಟ್, ಕುಮಾರಸ್ವಾಮಿ ಲೇಔಟ್, ರಿಚ್‌ಮಂಡ್ ಸರ್ಕಲ್, ಎಂ.ಜಿ. ರಸ್ತೆ, ನಂದಿನಿ ಲೇಔಟ್, ಶೇಷಾದ್ರಿಪುರಂ ಹಾಗೂ ಮಲ್ಲೇಶ್ವರಂನಲ್ಲೂ ಮಳೆಯಾಗಿದೆ. ತಡರಾತ್ರಿ ಸುರಿದ ಭಾರಿ ಮಳೆಯಿಂದ ನಗರದ ಹಲವು ರಸ್ತೆಗಳು ಕೆರೆಯಂತಾಗಿವೆ.
ಬನಶಂಕರಿ, ಗಿರಿನಗರ, ಮಡಿವಾಳ, ಕೋಣನಕುಂಟೆ, ಆರ್‌ಬಿಐ ಲೇಔಟ್, ಕುಮಾರಸ್ವಾಮಿ ಲೇಔಟ್ ಪ್ರದೇಶಗಳಲ್ಲೂ ಮಳೆ ಸುರಿದಿದೆ. ಭಾರಿ ಮಳೆ ಹಾಗೂ ರಸ್ತೆಗಳಲ್ಲಿ ನೀರು ನಿಂತ ಕಾರಣ ಸಂಚಾರವೂ ದುಸ್ತರವಾಗಿದೆ. ಮಳೆ ನೀರು ನಿಂತಿರುವ ಹಿನ್ನೆಲೆಯಲ್ಲಿ ಹಲವು ಕಡೆ ವಾಹನ ಸಂಚಾರ ನಿಧಾನಗತಿಯಲ್ಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದು, ಏರಿಯಾ ವಿವರವನ್ನೂ ಎಕ್ಸ್ ತಾಣದ ಮೂಲಕ ಹಂಚಿಕೊಂಡಿದ್ದಾರೆ.
ಕಾರ್ತಿಕನಗರದ ಬಳಿ ಮಳೆ ನೀರು ನಿಂತಿರುವುದರಿಂದ ಕಾಡುಬೀಸನಹಳ್ಳಿ ಕಡೆಗೆ ಸಂಚಾರ ನಿಧಾನಗತಿಯಲ್ಲಿದೆ. ವೆಂಕಟಾಲ ಬಳಿ ನೀರು ನಿಂತಿರುವುದರಿಂದ ನಗರದ ಕಡೆಗೆ ಹೋಗುವ ಮಾರ್ಗದಲ್ಲೂ ನಿಧಾನಗತಿಯ ಸಂಚಾರವಿದೆ. ಶ್ರೀನಿವಾಗಿಲು ಬಳಿ ಮಳೆ ನೀರು ನಿಂತಿರುವುದರಿಂದ ಏರ್‌ವ್ಯೂ ಕಡೆಗೆ ಹೋಗುವ ಮಾರ್ಗದ ಎರಡೂ ಬದಿಗಳಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದೆ. ಥಣಿಸಂದ್ರದಲ್ಲಿ ನಾಗವಾರದ ಕಡೆಗೆ ಹೋಗುವ ಮಾರ್ಗದಲ್ಲೂ ಎರಡೂ ಬದಿಗಳಲ್ಲಿ ಸಂಚಾರ ನಿಧಾನವಾಗಿದೆ.
“ಸಂಚಾರ ಸಲಹೆ”
ಶ್ರೀನಿವಾಗಿಲು ಬಳಿ ಮಳೆ ನೀರು ನಿಂತಿರುವುದರಿಂದ ಏರ್‌ವ್ಯೂ ಕಡೆಗೆ ಹೋಗುವ ಮಾರ್ಗದಲ್ಲಿ ಎರಡೂ ಬದಿಗಳಲ್ಲಿ ನಿಧಾನಗತಿಯ ಸಂಚಾರವಿರುತ್ತದೆ.
“Traffic advisory”
Due to waterlogging near Srinivagilu towards Airview both sides having slow-moving traffic. pic.twitter.com/H5Ah7jfTkT— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) September 28, 2026
ಬಾಲಗೇರಿ ವೃತ್ತದ ಬಳಿ ನೀರು ನಿಂತಿರುವುದರಿಂದ ಕಾಡುಬೀಸನಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ವಡ್ಡರಪಾಳ್ಯ ಜಂಕ್ಷನ್ ಬಳಿ ಗೆದ್ದಲಹಳ್ಳಿ ಕಡೆಗೆ ಹೋಗುವ ಮಾರ್ಗದ ಎರಡೂ ಬದಿಗಳಲ್ಲೂ ನಿಧಾನಗತಿಯ ಸಂಚಾರವಿದೆ.
ವಿದ್ಯಾಶಿಲ್ಪದ ಬಳಿ ಮಳೆ ನೀರು ನಿಂತಿರುವುದರಿಂದ ಕಾಫಿ ಡೇ ಕಡೆಗೆ ಹೋಗುವ ಮಾರ್ಗದಲ್ಲೂ ವಾಹನ ಸಂಚಾರ ನಿಧಾನಗತಿಯಲ್ಲಿದೆ. ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಮಲ್ಲೇಶ್ವರಂನಲ್ಲಿ ಬೃಹತ್ ಮರ ರಸ್ತೆಗೆ ಉರುಳಿಬಿದ್ದಿದ್ದರಿಂದ ಎರಡು ಕಾರುಗಳು ಜಖಂ ಆಗಿವೆ. ವೈಟ್‌ಫೀಲ್ಡ್ ಮತ್ತು ಮಾರತ್ತಹಳ್ಳಿ ಸೇರಿದಂತೆ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಯಿಂದಾಗಿ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಬಳಿ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸರಿಯಾಗಿ ಕಾಣದೆ ಅಪಘಾತ ಸಂಭವಿಸಿದೆ. ಈಚರ್ ಲಾರಿಯೊಂದು 108 ಆಂಬ್ಯುಲೆನ್ಸ್ಗೆ ಡಿಕ್ಕಿಯಾಗಿದೆ. ಚಿಕ್ಕಬಾಣಾವಾರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆದ್ದಾರಿ ರಸ್ತೆಯಿಂದ ಎರಡು ವಾಹನಗಳನ್ನು ತೆರವು ಮಾಡಿಸಿದ್ದಾರೆ.
ರಾತ್ರಿ ಸುರಿದ ಮಳೆಗೆ ಮಂತ್ರಿ ಮಾಲ್ ಮುಂದಿನ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿದೆ. ಪ್ರತಿ ಬಾರಿ ಸಣ್ಣ ಪ್ರಮಾಣದ ಮಳೆಯಾದಾಗಲೂ ಇಲ್ಲಿ ನೀರು ನಿಂತು ಸಮಸ್ಯೆಯಾಗುತ್ತದೆ. ವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಸವಾರರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪವಿದೆ. ಮಳೆ ಬಂದರೆ ಈ ಜಾಗದಲ್ಲಿ ಸುಮಾರು ಅರ್ಧ ಅಡಿಯಷ್ಟು ನೀರು ನಿಲ್ಲುತ್ತದೆ. ಸದ್ಯ ಜಲಾವೃತಗೊಂಡ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:48 am, Tue, 29 September 26