ಕರ್ನಾಟಕದಲ್ಲಿ ಮುಂದುವರಿದ ಧಾರಾಕಾರ ಮಳೆ: ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಜನಜೀವನ ಅಸ್ತವ್ಯಸ್ತ
ದೈನಂದಿನ ಕೆಲಸ ಮುಗಿಸಿ ತೆರಳುತ್ತಿದ್ದವರು ಸಕಾಲಕ್ಕೆ ಮನೆ ತಲುಪಲು ಸಾಧ್ಯವಾಗಲಿಲ್ಲ. ಅಲ್ಲಲ್ಲಿ ಫ್ಲೈ ಓವರ್ ಕೆಳಗೆ ಆಶ್ರಯ ಪಡೆದರು.
ಬೆಂಗಳೂರು: ನಗರ ಸೇರಿದಂತೆ ರಾಜ್ಯದ ಹಲವೆಡೆ ಮಂಗಳವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಬೆಂಗಳೂರಿನ ಯಶವಂತಪುರ, ರಾಜಾಜಿನಗರ, ಸದಾಶಿವನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಿಂದಾಗಿ ರಸ್ತೆ ಮೇಲೆ ನೀರು ಹರಿಯಿತು. ದೈನಂದಿನ ಕೆಲಸ ಮುಗಿಸಿ ತೆರಳುತ್ತಿದ್ದವರು ಸಕಾಲಕ್ಕೆ ಮನೆ ತಲುಪಲು ಸಾಧ್ಯವಾಗಲಿಲ್ಲ. ಅಲ್ಲಲ್ಲಿ ಫ್ಲೈ ಓವರ್ ಕೆಳಗೆ ಆಶ್ರಯ ಪಡೆದರು.
ಮಳೆಯಿಂದಾಗಿ ಧಾರವಾಡ ಜಿಲ್ಲೆ ಅಳ್ನಾವರದಲ್ಲಿ ರೈಲ್ವೆ ಒಳ ಸೇತುವೆ ಜಲಾವೃತವಾಗಿ ಜನರು ಪರದಾಡುವಂತಾಯಿತು. ಅಳ್ನಾವರ-ಹಳಿಯಾಳ ಮಧ್ಯೆ ವಾಹನ ಸಂಚಾರ ಬಂದ್ ಆಗಿದೆ. ಅಳ್ನಾವರ ಸಂತೆಗೆ ಬಂದಿದ್ದವರು ಮರಳಿ ಗ್ರಾಮಗಳಿಗೆ ತೆರಳಲು ಸಾಧ್ಯವಾಗದೆ ಪರದಾಡುವಂತಾಯಿತು.
ರಾಮನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕಣ್ವ ನದಿ ಸೇತುವೆ ಮೇಲೆ ನೀರು ಹರಿಯುತ್ತಿದೆ. 20 ವರ್ಷಗಳ ನಂತರ ನದಿ ತುಂಬಿ ಸೇತುವೆ ಮೇಲೆ ಹರಿದಿದೆ. ಚನ್ನಪಟ್ಟಣ ತಾಲೂಕಿನ ಕೊಂಡಾಪುರಾ ಗ್ರಾಮದಲ್ಲಿ ನದಿ ಮೈದುಂಬಿ, ಸೇತುವೆ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರು ಪೂಜೆ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಕಳಸ, ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ತಾಲೂಕಿನಲ್ಲಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಕಾಫಿ-ಅಡಿಕೆ ಬೆಳೆಗಳು ಕೊಚ್ಚಿ ಹೋಗುತ್ತಿದೆ. ಮೆಣಸು ಬೆಳೆ ಒಣಗಿಸಲಾಗದೆ ರೈತರು ಪರದಾಡುತ್ತಿದ್ದಾರೆ.
ಭಾರಿ ಮಳೆಯಿಂದಾಗಿ ರಾಯಚೂರು ಎಪಿಎಂಸಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಎಪಿಎಂಸಿಯಲ್ಲಿದ್ದ ಭತ್ತದ ರಾಶಿ ನೀರಿನಿಂದ ಹಾಳಾಗಿದೆ.
ಇದನ್ನೂ ಓದಿ: ತುಮಕೂರು ಜಿಲ್ಲೆಯಾದ್ಯಂತ ಭಾರಿ ಮಳೆ, ದೇವರಾಯದುರ್ಗ ಬೆಟ್ಟದ ಬಂಡೆಗಳು ಜಾರಿ ರಸ್ತೆಗೆ ಬಂದಿವೆ ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ನಿಲ್ಲಲ್ಲ, ಬಿಬಿಎಮ್ಪಿ ಎಚ್ಚೆತ್ತುಕೊಳ್ಳಲ್ಲ, ನಗರ ನಿವಾಸಿಗಳ ಸಂಕಷ್ಟ ತೀರಲ್ಲ!