ಬೆಂಗಳೂರು, ಜನವರಿ 21: ಬೆಂಗಳೂರಿನ ಹೆಬ್ಬಾಳದ ಬಳಿ ಮೆಟ್ರೋ ಬಹುಮಾದರಿ ಸಾರಿಗೆ ಕೇಂದ್ರ ಸ್ಥಾಪಿಸಲು ಬಿಎಂಆರ್ಸಿಎಲ್ ಉದ್ದೇಶಿಸಿದ್ದು, ಜಾಗ ನೀಡಿಕೆ ವಿಳಂಬವಾಗುತ್ತಿರುವುದನ್ನು ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಅದೇ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದು ಪಂಚತಾರಾ ಹೋಟೆಲ್, ಮಾಲ್ ಮತ್ತು ರೆಸಾರ್ಟ್ ಸೇರಿದಂತೆ ಪ್ರೀಮಿಯಂ ಟೌನ್ಶಿಪ್ ನಿರ್ಮಾಣಕ್ಕೆ ಮುಂದಾಗಿರುವುದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ರಿಯಲ್ ಎಸ್ಟೇಟ್ ಲಾಬಿಯ ಒತ್ತಡಕ್ಕೆ ಸರ್ಕಾರ ಮಣಿಯಬಾರದು ಎಂದು ಆಗ್ರಹಿಸಿದ್ದಾರೆ.
ಸಂಚಾರ ದಟ್ಟಣೆಯಿಂದ ನಲುಗುತ್ತಿರುವ ಅಸಂಖ್ಯ ಜನಸಾಮಾನ್ಯರ ಬಳಕೆಗೆ ನಮ್ಮ ಮೆಟ್ರೋ ಸೇವೆ ಮೌಲ್ಯಾತೀತವಾದದ್ದಾಗಿದ್ದು, ನಮ್ಮ ಮೆಟ್ರೋ ಸಂಸ್ಥೆಯ ಬೇಡಿಕೆಗಳನ್ನು ಪುರಸ್ಕರಿಸುವುದು ಬೆಂಗಳೂರು ನಗರದ ಹಿತದೃಷ್ಟಿಯಿಂದ ಸರ್ಕಾರದ ಮೊದಲ ಆದ್ಯತೆಯಾಗಬೇಕಾದ ಅನಿವಾರ್ಯತೆ ಇದೆ. ನಿಮಗೆ ತಿಳಿದಿರುವಂತೆ, ನಮ್ಮ ಮೆಟ್ರೋ ಸಂಸ್ಥೆಯು ತನ್ನ ಸಾರ್ವಜನಿಕ ಸಾರಿಗೆ ಅಗತ್ಯಗಳಿಗಾಗಿ ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಇಷ್ಟು ವಿಶಾಲವಾದ ಭೂಮಿಯನ್ನು ಪಡೆಯುವುದು ಅಸಾಧ್ಯ ಎಂದು ಪತ್ರದಲ್ಲಿ ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.
‘ನಾನು ಅರಿತಂತೆ ಬಿಎಂಆರ್ಸಿಎಲ್ ಸಂಸ್ಥೆ ಮಾರ್ಚ್ 2024 ರಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನದಲ್ಲಿರುವ ಹೆಬ್ಬಾಳದಲ್ಲಿನ 45-ಎಕರೆ ಭೂಮಿಯನ್ನು ತನ್ನ ಸುಪರ್ದಿಗೆ ಕೋರಿದೆ. ಭೂಮಾಲೀಕರಿಗೆ ಪಾವತಿಸಲು ಮಂಡಳಿ ನಿಗದಿಪಡಿಸಿದ ಬೆಲೆಯನ್ನು ಪಾವತಿಸಲು ಕೂಡಾ ಬಿಎಂಆರ್ಸಿಎಲ್ ಸಿದ್ಧವಾಗಿದೆ. ಆದರೆ ಈ ಭೂಮಿಯನ್ನು ಬಿಎಂಆರ್ಸಿಎಲ್ಗೆ ವರ್ಗಾಯಿಸಲು ನಗರಾಭಿವೃದ್ಧಿ ಮತ್ತು ಕೈಗಾರಿಕೆ ಇಲಾಖೆಗಳು ತಮ್ಮದೇ ಆದ ಕಾರಣಗಳಿಗೆ ವಿಳಂಬ ಮಾಡುತ್ತಿವೆ ಎನ್ನುವುದು ಅನವಶ್ಯಕ ಸಂದೇಹವನ್ನು ಸೃಷ್ಟಿಸುತ್ತಿದೆ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ನಿರ್ಣಾಯಕ ಮೂಲಸೌಕರ್ಯ ಯೋಜನೆಗಳ ಕುರಿತಾದ ನಿರ್ಧಾರಗಳನ್ನು ಯಾವುದೇ ಸರ್ಕಾರಗಳು ವಿಳಂಬ ಮಾಡಬಾರದು. ಜೊತೆಗೆ ಈ ಪ್ರಕರಣವು ಇನ್ನಷ್ಟು ಹೆಚ್ಚೇ ಸೂಕ್ಷವೆಂದು ನನ್ನ ಪ್ರಾಮಾಣಿಕ ಅನಿಸಿಕೆ’ ಎಂದು ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.
‘ಬೆಂಗಳೂರು ಮೆಟ್ರೋ ಸಂಸ್ಥೆ ಹೆಬ್ಬಾಳದಲ್ಲಿ ಅತ್ಯಾಧುನಿಕವಾದ ಬಹು-ಮಾದರಿ ಸಾರಿಗೆ ಕೇಂದ್ರ, ಬಹು-ಹಂತದ ಕಾರ್ ಪಾರ್ಕಿಂಗ್, ಆಧುನಿಕ ಡಿಪೋ ಮತ್ತಿತರ ಮೂಲಸೌಕರ್ಯಗಳನ್ನು ಯೋಜಿಸಿದೆ. ನೀಲಿ, ಕಿತ್ತಳೆ ಮತ್ತು ಕೆಂಪು ಮಾರ್ಗಗಳಲ್ಲಿನ ಮೂರು ಮೆಟ್ರೋ ನಿಲ್ದಾಣಗಳನ್ನು ಸಹ ಈ ಸ್ಥಳದಲ್ಲಿ ನಿರ್ಮಿಸಲು ಪ್ರಸ್ತಾಪಿಸುತ್ತಿದೆ. ನಿಮಗೆ (ಸಿದ್ದರಾಮಯ್ಯನವರನ್ನು ಉದ್ದೇಶಿಸಿ) ತಿಳಿದಿರುವಂತೆ, ಕೇಂದ್ರ ಸರ್ಕಾರವು ನಮ್ಮ ಮೆಟ್ರೋ ಯೋಜನೆಗಳಿಗೆ ಸಕಾಲಕ್ಕೆ ತನ್ನ ನೆರವನ್ನು ವಿಸ್ತರಿಸಲು ಎಂದಿಗೂ ಒಂದು ಹೆಜ್ಜೆ ಮುಂದಿದೆ. ಭೂಸ್ವಾಧೀನದ ವಿಳಂಬವು ಸಮಯ ಮತ್ತು ವೆಚ್ಚದ ಮಿತಿಮೀರುವಿಕೆಗೆ ಕಾರಣವಾಗುತ್ತದೆ. ಕೇಂದ್ರದ ಸಕಾಲಿಕ ಅನುದಾನ ಬಿಡುಗಡೆಗೆ ಮತ್ತು ಮೆಟ್ರೋ ಸೇವೆಗಳ ವಿಸ್ತರಣೆಗೆ ಬಹುದೊಡ್ಡ ತೊಡಕಾಗುತ್ತದೆ’ ಎಂದು ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.
ರಾಜ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾದ ಎಂಬಿ ಪಾಟೀಲ್ ಅವರು ತುಸು ಆಸಕ್ತಿ ವಹಿಸಿ ಅವರಿಗೆ ಇರುವ ಜವಾಬ್ದಾರಿಯಂತೆ ನಗರದ ಈ ಮೂಲಭೂತ ಸೌಲಭ್ಯ ಒದಗಿಸುವುದಕ್ಕಾಗಿ ಚುರುಕು ಮುಟ್ಟಿಸಬೇಕು. ಈ ಎಲ್ಲ ಅಂಶಗಳನ್ನು ತಾವು ಗಂಭೀರವಾಗಿ ಗಮನಿಸಬೇಕು. ಯಾವುದೇ ರಿಯಲ್ ಎಸ್ಟೇಟ್ ಲಾಬಿಯ ಒತ್ತಡಕ್ಕೆ ತಮ್ಮ ಸರ್ಕಾರವು ಮಣಿಯಬಾರದು ಮತ್ತು ಅಂತಹ ಎಲ್ಲಾ ಪ್ರಯತ್ನಗಳನ್ನು ಮೊಗ್ಗಿನಲ್ಲೇ ಚಿವುಟಿ ಹಾಕಬೇಕೆಂದು ನಾನು ಆಗ್ರಹಪೂರ್ವಕವಾಗಿ ತಮ್ಮಲ್ಲಿ ವಿನಂತಿಸುತ್ತೇನೆ. ಇಲ್ಲಿ ಖಾಸಗಿ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಬೇಕಿದ್ದು ಈ ನಿಟ್ಟಿನ ನಿಮ್ಮ ನಿರ್ಧಾರ ಅತ್ಯಂತ ನಿರ್ಣಾಯಕವಾದದ್ದಾಗಲಿದೆ ಎನ್ನುವ ಅಂಶವನ್ನು ಸಹ ನಿಮಗೆ ನೆನಪಿಸಬಯಸುತ್ತೇನೆ ಎಂದು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಯುವಕರಿಗೆ ಸಿಹಿ ಸುದ್ದಿ: ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಐಕ್ಯಾಟ್ 3ನೇ ಕೇಂದ್ರ
ಈ ಮಹತ್ವದ ಮೂಲಸೌಕರ್ಯ ಯೋಜನೆಗಾಗಿ ಕೆಐಎಡಿಬಿಗೆ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟಿರುವ ಭೂಮಾಲೀಕರಿಗೆ ತಕ್ಷಣವೇ ಪರಿಹಾರವನ್ನು ಕೂಡಾ ಬಿಡುಗಡೆ ಮಾಡಲು ವಿನಂತಿ. ಭೂ ಮಾಲೀಕರಿಗೆ ಸಂತೋಷವಾಗುವ ರೀತಿಯಲ್ಲಿ ಪರಿಹಾರವನ್ನು ನಿಗದಿಪಡಿಸಲು ನನ್ನದೊಂದು ಆಗ್ರಹವನ್ನು ನಿಮಗೆ ಈ ಮೂಲಕ ಸಲ್ಲಿಸುತ್ತಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ