ಇನ್ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಕಡ್ಡಾಯವಲ್ಲ: ನಿಯಮ ತೆಗೆದುಹಾಕಿದ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಲಕ್ಷ ಕುಟುಂಬಗಳಿಗೆ ಇದು ಅನುಕೂಲವಾಗಲಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಕತ್ತಲೆ ಭಾಗ್ಯದ ಕಾನೂನನ್ನು ಜಾರಿಗೆ ಬಂದಿದ್ದು, ನಮ್ಮ ಸರಕಾರ ಅದನ್ನು ಬದಲಾಯಿಸಿದೆ.

ಇನ್ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಕಡ್ಡಾಯವಲ್ಲ: ನಿಯಮ ತೆಗೆದುಹಾಕಿದ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ
ಇಂಧನ ಸಚಿವ ವಿ. ಸುನೀಲ್ ಕುಮಾರ
Updated By: ಗಂಗಾಧರ​ ಬ. ಸಾಬೋಜಿ

Updated on: Jul 02, 2022 | 3:10 PM

ಬೆಂಗಳೂರು: ವಿದ್ಯುತ್ ಸಂಪರ್ಕ ಪಡೆಯಲು ಓಸಿ ನಿಯಮವನ್ನು ಕೆಇಆರ್​ಸಿ (KREC) ತೆಗೆದು ಹಾಕಿದ್ದು, ಇನ್ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಕಡ್ಡಾಯವಲ್ಲ. ಉದ್ಯಮ, ವಾಣಿಜ್ಯ ಮಳಿಗೆ, ವಾಸದ ಮನೆಗೆ ಒಸಿ ಅಗತ್ಯವಿತ್ತು. ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳಿಂದ ಒಸಿ ಪಡೆಯಬೇಕಾಗಿತ್ತು. ಒಸಿ ಇದ್ದವರಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಸಿಎಂ ಅನುಮೋದನೆಯೊಂದಿಗೆ ಸರ್ಕಾರ ಮನವಿ ಸಲ್ಲಿಸಿದ್ದು, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ನಿಯಮ ತೆಗೆದುಹಾಕಿದೆ. ಈ ಕುರಿತಾಗಿ ಇಂಧನ ಸಚಿವ ವಿ. ಸುನೀಲ್ ಕುಮಾರ ಟ್ವೀಟ್​ ಮಾಡಿದ್ದು, ಕಟ್ಟಡಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ (ಓಸಿ) ಇಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಣೆ ಇನ್ನು ಸಾಧ್ಯವಿಲ್ಲ. ಕಾಂಗ್ರೆಸ್ ಕಾಲದ ಈ “ಕತ್ತಲೆಭಾಗ್ಯದ” ನಿಯಮವನ್ನು ಕೊನೆಗೂ ನಿವಾರಿಸಿದ್ದೇವೆ. ನಿಯಮ ಬದಲಾಯಿಸಿ KREC ಹೊರಡಿಸಿದ್ದ ಆದೇಶ ಇಂದಿನಿಂದಲೇ ರಾಜ್ಯಪತ್ರದ ಮೂಲಕ ಜಾರಿಗೆ ಬರುತ್ತಿದೆ. ಸರ್ವರಿಗೂ ಬೆಳಕು ಎಂಬ ನಮ್ಮ ಧ್ಯೇಯವಾಕ್ಯಕ್ಕೆ ಇನ್ನು ಯಾವುದೇ ಅಡ್ಡಿ ಇಲ್ಲ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜಕೀಯ ಮುಖಂಡರು ನಾಲಗೆ ಮೇಲೆ ಹಿಡಿತವಿಟ್ಟುಕೊಳ್ಳದಿದ್ದರೆ ಏನೆಲ್ಲ ಅನಾಹುತಗಳು!

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಲಕ್ಷ ಕುಟುಂಬಗಳಿಗೆ ಇದು ಅನುಕೂಲವಾಗಲಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಕತ್ತಲೆ ಭಾಗ್ಯದ ಕಾನೂನನ್ನು ಜಾರಿಗೆ ಬಂದಿದ್ದು, ನಮ್ಮ ಸರಕಾರ ಅದನ್ನು ಬದಲಾಯಿಸಿದೆ. ಎಲ್ಲರ ಮನೆಯಲ್ಲೂ ಬೆಳಕು ಮೂಡಲಿದೆ ಎಂದು ಇಂಧನ, ಕನ್ನಡ ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಟ್ವಿಟ್ ಮೂಲಕ ಹೊಸ ಆದೇಶದ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಸಮಸ್ಯೆ ಬೆಂಗಳೂರಿನ ನಾಗರಿಕರನ್ನು ಕಾಡುತ್ತಿದ್ದು, ಬಿಬಿಎಂಪಿ ಹಾಗೂ ಇಂಧನ ಇಲಾಖೆಯ ಈ ಧೋರಣೆ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿಯ ಬೆಂಗಳೂರು ಶಾಸಕರು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ನಿಯಮ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಧ್ಯತೆಯನ್ನು ಪರಿಶೀಲನೆಗೆ ಕ್ರಮ ಕೈಗೊಳ್ಳುವಂತೆ ಸುನೀಲ್ ಕುಮಾರ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜತೆ ಚರ್ಚೆ ನಡೆಸಿದ್ದರು. ನಂತರ ಕೆಇಆರ್ ಸಿಗೆ ಪತ್ರ ಬರೆಯಲಾಗಿತ್ತು. ಈ ಬಗ್ಗೆ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಆಯೋಗ ಹೊರಡಿಸಿದ ಆದೇಶ ಈಗ ರಾಜ್ಯಪತ್ರದ ಮೂಲಕ ಅಧಿಕೃತಗೊಂಡಿದೆ. ಇನ್ನುಮುಂದೆ ಗುರುತಿನ ಚೀಟಿ ಹಾಗೂ ಸ್ವತ್ತಿನ ಹಕ್ಕುಪತ್ರ ಇದ್ದರೆ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ.

ಇದನ್ನೂ ಓದಿ: ಮೊಹಮ್ಮದ್ ಜುಬೇರ್ ಅವರ ಜಾಮೀನು ಅರ್ಜಿ ತಿರಸ್ಕರ,14 ದಿನಗಳ ನ್ಯಾಯಾಂಗ ಬಂಧನ ನೀಡಿದ ಕೋರ್ಟ್