ಮೊಹಮ್ಮದ್ ಜುಬೇರ್ ಜಾಮೀನು ಅರ್ಜಿ ತಿರಸ್ಕೃತ,14 ದಿನಗಳ ನ್ಯಾಯಾಂಗ ಬಂಧನ ಆದೇಶಿಸಿದ ಕೋರ್ಟ್
ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ, 14 ದಿನಗಳ ನ್ಯಾಯಾಂಗ ಬಂಧನವನ್ನು ನೀಡಿದೆ.
ಆಲ್ಟ್ ನ್ಯೂಸ್ (Alt News) ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammed Zubair) ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯವು (Delhi court) ಶನಿವಾರ ತಿರಸ್ಕರಿಸಿದೆ. ಹಿಂದೂ ದೇವತೆಯ ವಿರುದ್ಧ ಅವರು 2018 ರಲ್ಲಿ ಪೋಸ್ಟ್ ಮಾಡಿದ “ಆಕ್ಷೇಪಾರ್ಹ ಟ್ವೀಟ್” ಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ಪೊಲೀಸ್ ಮನವಿಯನ್ನು ಸ್ವೀಕರಿಸಿ ಈ ಆದೇಶ ನೀಡಿದ್ದಾರೆ. ಜುಬೇರ್ ಅವರ ಐದು ದಿನಗಳ ಕಸ್ಟಡಿಯಲ್ ವಿಚಾರಣೆಯ ಅವಧಿ ಮುಗಿದ ನಂತರ ಪೊಲೀಸರು ಅವರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಜುಬೇರ್ ಅವರ ಕಸ್ಟಡಿಯಲ್ ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಪೊಲೀಸ್ ಅರ್ಜಿಯ ನಂತರ, ಜುಬೇರ್ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ಪತ್ರಕರ್ತ ಮೊಹಮ್ಮದ್ ಜುಬೇರ್ ಅವರು ಪಾಕಿಸ್ತಾನ ಮತ್ತು ಇತರ ದೇಶಗಳಿಂದ ಪೇಮೆಂಟ್ ಗೇಟ್‌ವೇ ರೇಜರ್‌ಪೇ ಮೂಲಕ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ಜಾಮೀನು ಅರ್ಜಿಯನ್ನು ದೆಹಲಿಯ ನ್ಯಾಯಾಲಯದಲ್ಲಿ ಶನಿವಾರ ವಿಚಾರಣೆ ನಡೆಸಲಾಯಿತು. ದೆಹಲಿ ಪೊಲೀಸರು 33ರ ಹರೆಯದ ಜುಬೇರ್ ವಿರುದ್ಧ ಹೊಸ ಆರೋಪಗಳನ್ನು ಸೇರಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಅಪರಾಧದ ಪಿತೂರಿ) ಮತ್ತು 201 (ಸಾಕ್ಷ್ಯದ ನಾಶ), ಎಫ್‌ಸಿಆರ್‌ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ಉಲ್ಲಂಘಿಸಿ ಜುಬೇರ್ ವಿದೇಶಿ ಹಣವನ್ನು ಸ್ವೀಕರಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ 2018ರ ಟ್ವೀಟ್ಗೆ ಸಂಬಂಧಿಸಿದಂತೆ ಜುಬೇರ್ ಅವರನ್ನು ಸೋಮವಾರ ದೆಹಲಿ ಪೊಲೀಸರು ಬಂಧಿಸಿದ್ದರು.
Published On - 2:58 pm, Sat, 2 July 22