ಪ್ರಧಾನಿ ನರೇಂದ್ರ ಮೋದಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
ಮೋದಿ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮಾಡಿದರು.
ಬೆಂಗಳೂರು: ಪ್ರಧಾನಿ ಮೋದಿ ಜನರಿಗೆ ಹೇಳಿದ್ದ ಭರವಸೆಗಳನ್ನ ಈಡೇರಿಸಿಲ್ಲ. ಮೋದಿ (Narendra Modi) ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದೇ ವೇಳೆ ವರುಷ ಎಂಟು ಅವಾಂತರ ನೂರೆಂಟು ಎಂಬ ಪುಸ್ತಕ ಬಿಡುಗಡೆ ಮಾಡಿದರು. ನರೇಂದ್ರ ಮೋದಿ, ಗುಜರಾತ್ ಸಿಎಂ ಆಗಿ 12 ವರ್ಷ, ಪ್ರಧಾನಿಯಾಗಿ 8 ವರ್ಷ ಒಟ್ಟು 20 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಪ್ರಧಾನಿಯಾಗುವ ಮುನ್ನ ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಮೋದಿ ಪ್ರಧಾನಿಯಾದ ನಂತರ ಯಾವುದೇ ಭರವಸೆ ಈಡೇರಿಸಲಿಲ್ಲ. 2014ರ ಲೋಕಸಭಾ ಚುನಾವಣೆ ವೇಳೆ 83.4 ಕೋಟಿ ಮತದಾರರಿದ್ದರು. 17 ಕೋಟಿ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ದೇಶದ ಜನರ ಗಮನ ಬೇರೆಡೆ ಸೆಳೆಯುವಲ್ಲಿ ಯಶಸ್ವಿಯಾದರು. ಕಪ್ಪು ಹಣ, ನಿರುದ್ಯೋಗ, ಬೆಲೆ ಏರಿಕೆ ವಿಚಾರ ಡೈವರ್ಟ್ ಮಾಡಿದರು. ಪುಲ್ವಾಮಾ, ಬಾಲಾಕೋಟ್ ದಾಳಿ ವಿಚಾರ ಮುಂದಿಟ್ಟರು. 2019ರಲ್ಲಿ ಲೋಕಸಭಾ ಚುನಾವಣೆ ವೇಳೆ 94 ಕೋಟಿ ಮತದಾರರಿದ್ದರು. 22.09 ಕೋಟಿ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ಮತ್ತೆ ಅಧಿಕಾರಕ್ಕೆ ಬಂದಾಗಲೂ ಜನಸಾಮಾನ್ಯರ ಕೆಲಸ ಮಾಡಲಿಲ್ಲ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಇದನ್ನೂ ಓದಿ; Test Cricket Records: ಟೆಸ್ಟ್ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?
ಕೇಂದ್ರದಿಂದ ರಾಜ್ಯಕ್ಕೆ 1,29,766 ಕೋಟಿ ನೀಡಿದ್ದಾಗಿ ಜಾಹೀರಾತು ನೀಡಲಾಗಿದೆ. ರಾಜ್ಯದಿಂದ ಸಂಗ್ರಹವಾಗಿರುವ ತೆರಿಗೆ 19 ಲಕ್ಷ ಕೋಟಿ ರೂಪಾಯಿ. ವಾಣಿಜ್ಯ ತೆರಿಗೆ, ಆದಾಯ ತೆರಿಗೆ, ಜಿಎಸ್ಟಿ ಸೇರಿ 19 ಲಕ್ಷ ಕೋಟಿ. ಕಳೆದ ಹಣಕಾಸು ವರ್ಷದಲ್ಲಿ 3 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. 19 ಲಕ್ಷ ಕೋಟಿ ತೆರಿಗೆ ಕಟ್ಟಿರುವ ರಾಜ್ಯಕ್ಕೆ ಇವರು ಭಿಕ್ಷೆ ನೀಡಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಅನ್ಯಾಯದ ಬಗ್ಗೆ ಚಕಾರವೆತ್ತಲಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಮಾತಾಡಲಿಲ್ಲ. ನೋಟ್ ಬ್ಯಾನ್ನಿಂದ ಭಯೋತ್ಪಾದನೆ, ಕಪ್ಪು ಹಣ ನಿಯಂತ್ರಿಸುತ್ತೇವೆ. ರಾತ್ರೋರಾತ್ರಿ ನೋಟ್ಬ್ಯಾನ್ ಮಾಡಿ ಉದ್ದುದ್ದ ಭಾಷಣ ಮಾಡಿದರು ಎಂದು ಹೇಳಿದರು.
ಖೋಟಾನೋಟು ಎಷ್ಟಿದೆ ಎಂದು ಪ್ರಧಾನಿ ಮೋದಿ ಬಾಯಿಬಿಡುತ್ತಿಲ್ಲ
ಖೋಟಾನೋಟು ಎಷ್ಟಿದೆ ಎಂದು ಪ್ರಧಾನಿ ಮೋದಿ ಬಾಯಿಬಿಡುತ್ತಿಲ್ಲ. ನೋಟ್ಬ್ಯಾನ್ನಿಂದ ಎಂಎಸ್ಎಂಇ ಮೇಲೆ ಭಾರಿ ಪರಿಣಾಮ ಬೀರಿದೆ. ಎಷ್ಟೋ ಸಣ್ಣ ಕೈಗಾರಿಕೆಗಳು ಮುಚ್ಚಿಹೋದವು, ಉದ್ಯೋಗ ನಷ್ಟವಾಗಿದೆ. ಮೋದಿ ಆಡಳಿತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ಸರ್ಕಾರಿ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟಮಾಡಿದ್ದಾರೆ. ಇದರಿಂದ ಉದ್ಯೋಗ ಸಿಗದೆ ವಿದ್ಯಾವಂತರು ಬೀದಿಪಾಲಾಗಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲಿದ್ದರೆ ಮಾತ್ರ ಉದ್ಯೋಗ ಸೃಷ್ಟಿಯಾಗುತ್ತದೆ. ಖಾಸಗಿಯವರಿಗೆ ಮಾರಿದರೆ ಎಲ್ಲಿಂದ ಉದ್ಯೋಗ ಸೃಷ್ಟಿಸುತ್ತಾರೆ. ಸರ್ಕಾರಿ ಸಂಸ್ಥೆ ಖಾಸಗಿಯವರಿಗೆ ಮಾರಿದರೆ ಮೀಸಲಾತಿ ಹೋಗುತ್ತೆ. ಇದರಿಂದ ಎಸ್ಸಿ, ಎಸ್ಟಿ, ಒಬಿಸಿಯವರಿಗೆ ಅನ್ಯಾಯವಾಗಿದೆ. ಬಿಇ, ಬಿಟೆಕ್ ಮಾಡಿದವರೂ ಕೆಲಸ ಸಿಗದೆ ಬೀದಿಗೆ ಬಂದಿದ್ದಾರೆ. ಉದ್ಯೋಗ ಕೇಳಿದರೆ ಪಕೋಡ ಮಾರಿ ಎಂದು ಮೋದಿ ಹೇಳುತ್ತಾರೆ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮಾಡಿದರು.
ರೈತರ ಆದಾಯದ ಬದಲು ಸಾಲ ದ್ವಿಗುಣವಾಗಿದೆ
ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಮೋದಿ ಆಡಳಿತದಲ್ಲಿ ರೈತರ ಆದಾಯದ ಬದಲು ಸಾಲ ದ್ವಿಗುಣವಾಗಿದೆ. ಕೊರೊನಾ ಸಂದರ್ಭದಲ್ಲಿ ರೈತರಿಗೆ ಮಾರಕವಾದ ಕಾಯ್ದೆ ತಂದರು. ಒಂದೂವರೆ ವರ್ಷ ರೈತರ ನಿರಂತರ ಹೋರಾಟಕ್ಕೆ ಮಣಿದು 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದಾರೆ. 1974ರಿಂದ 2014ರವರೆಗೆ 53.11 ಲಕ್ಷ ಕೋಟಿ ರೂ. ಸಾಲವಿತ್ತು. ಮೋದಿ ಕಳೆದ 8 ವರ್ಷಗಳಲ್ಲಿ 102 ಲಕ್ಷ ಕೋಟಿ ಸಾಲಮಾಡಿದ್ದಾರೆ. ಒಟ್ಟಾರೆ ದೇಶದ ಸಾಲದ ಮೊತ್ತ 155 ಲಕ್ಷ ಕೋಟಿ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹಾಳಾಗಲು ಮೋದಿ ಆಡಳಿತವೇ ಕಾರಣ. ಕಾರ್ಪೊರೇಟ್ ಟ್ಯಾಕ್ಸ್ ಇಳಿಕೆ ಮಾಡಿದ್ದರಿಂದ ಸಾಲ ಹೊರೆ ಹೆಚ್ಚಳವಾಗಿದೆ. ಮೋದಿ ಆಡಳಿತದಲ್ಲಿ ಕಾರ್ಪೊರೇಟ್ ಬಾಡಿ ಆದಾಯ 23 ಲಕ್ಷ ಕೋಟಿ ಇದ್ದ ಆದಾಯ ಏಕಾಏಕಿ 53 ಲಕ್ಷಕ್ಕೆ ಏರಿದೆ. ಕಾರ್ಪೊರೇಟ್ ಟ್ಯಾಕ್ಸ್ ಶೇ.30ರಿಂದ ಶೇ.22ಕ್ಕೆ ಇಳಿಕೆ ಮಾಡಿದ್ದರು. ಮೋದಿ ನೇತೃತ್ವದ ಸರ್ಕಾರ ಕಾರ್ಪೊರೇಟ್ ಟ್ಯಾಕ್ಸ್ ಇಳಿಕೆ ಮಾಡಿತ್ತು ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು: ಸಮುದ್ರದಲ್ಲಿ ಮುಳುಗಿದ್ದ ವಿದೇಶಿ ಸರಕು ಸಾಗಣೆ ಹಡಗಿನಿಂದ ತೈಲ ಸೋರಿಕೆ!
Published On - 1:29 pm, Sat, 2 July 22