Hijab: ಹಿಜಾಬ್ ಸಂಸ್ಕೃತಿಗೆ ಸಂಬಂಧಿಸಿದ್ದೇ ವಿನಾ ಧರ್ಮಕ್ಕಲ್ಲ: ಹೈಕೋರ್ಟ್ ಆದೇಶದಲ್ಲಿನ 10 ಮುಖ್ಯ ಅಂಶಗಳು
ಸುದೀರ್ಘ ತೀರ್ಪಿನಲ್ಲಿ ಹೈಕೋರ್ಟ್ ಹಲವು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ. ತೀರ್ಪಿನಲ್ಲಿ ಉಲ್ಲೇಖವಾಗಿರುವ 10 ಪ್ರಮುಖ ಅಂಶಗಳಿವು.
ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈಕೋರ್ಟ್ (Karnataka High Court on Hijab) ಮಂಗಳವಾರ ತೀರ್ಪು ನೀಡಿದೆ. ‘ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ’ ಎನ್ನುವುದು ಹೈಕೋರ್ಟ್ ತೀರ್ಪಿನ ಮುಖ್ಯ ಅಂಶ. ಇದರ ಜೊತೆಗೆ ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಿಕ್ಷಣ ಸಂಸ್ಥೆಗಳಿಗೆ ಇದೆ. ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಕಾನೂನುಬದ್ಧವಾಗಿದೆ ಎಂದು ಹೈಕೋರ್ಟ್ ಹೇಳಿತ್ತು. 129 ಪುಟಗಳ ಈ ಸುದೀರ್ಘ ತೀರ್ಪಿನಲ್ಲಿ ಹೈಕೋರ್ಟ್ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ. ಕರ್ನಾಟಕ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ನ್ಯಾಯಪೀಠದಲ್ಲಿದ್ದರು. ಹೈಕೋರ್ಟ್ ಆದೇಶವು ಹೈಕೋರ್ಟ್ನ ವೆಬ್ಸೈಟ್ನಲ್ಲಿ ಶೀಘ್ರದಲ್ಲಿಯೇ ಸಾರ್ವಜನಿಕವಾಗಿ ಲಭ್ಯವಾಗಲಿದೆ. ತೀರ್ಪಿನಲ್ಲಿ ಉಲ್ಲೇಖವಾಗಿರುವ 10 ಪ್ರಮುಖ ಅಂಶಗಳಿವು.
- ಹಿಜಾಬ್ ಎಂಬ ಸಂಕೀರ್ಣ ಪರಿಕಲ್ಪನೆ: ಸಾಂಸ್ಥಿಕ ನಡವಳಿಕೆಗಳ ತಜ್ಞೆ ಸಾರಾ ಸ್ಲಿನಿಂಗರ್ ‘ವೀಲ್ಡ್ ವುಮೆನ್: ಹಿಜಾಬ್, ರಿಲಿಜನ್ ಅಂಡ್ ಕಲ್ಚರ್ ಪ್ರಾಕ್ಟೀಸ್’ (VEILED WOMEN: HIJAB, RELIGION, AND CULTURAL PRACTICE-2013) ಸಂಶೋಧನಾ ಪ್ರಬಂಧದ ಸಾಲುಗಳ ಮೂಲಕ ಆದೇಶದ ಮೊದಲ ಸಾಲು ಆರಂಭವಾಗಿದೆ. ‘ಹಿಜಾಬ್ನ ಇತಿಹಾಸ ತುಂಬಾ ಸಂಕೀರ್ಣವಾಗಿದೆ. ಕಾಲಾಂತರದಲ್ಲಿ ವಿವಿಧ ಧರ್ಮ ಮತ್ತು ಸಾಂಸ್ಕೃತಿಕ ಪ್ರಭಾವಗಳನ್ನು ಒಳಗೊಂಡಿದೆ. ಹಿಜಾಬ್ ಧರಿಸುವುದು ಸರಳ ಎಂದು ಹೇಳಲಾಗುತ್ತದೆ. ಆದರೆ ಧಾರ್ಮಿಕ ನಂಬಿಕೆಯನ್ನು ಒಪ್ಪುವ ಮತ್ತು ಒಪ್ಪದಿರುವುದನ್ನು ಎತ್ತಿ ತೋರಿಸುವುದೂ ಸೇರಿದಂತೆ ಹಲವು ಸಂಕೀರ್ಣ ಅಂಶಗಳನ್ನು ಇದು ಒಳಗೊಂಡಿದೆ’ ಎಂಬ ಸಾಲುಗಳನ್ನು ಹೈಕೋರ್ಟ್ ಉಲ್ಲೇಖಿಸಿದೆ.
- ನ್ಯಾಯಾಲಯ ಪರಿಗಣಿಸಿದ ಅಂಶಗಳು: ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವೇ? ಇದು ಸಾಂವಿಧಾನಿಕ ಹಕ್ಕು ಆಗುತ್ತದೆಯೇ? ಸಮವಸ್ತ್ರ ಕಡ್ಡಾಯಗೊಳಿಸುವುದು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗುತ್ತದೆಯೇ? ಕರ್ನಾಟಕದ ಸರ್ಕಾರದ ಆದೇಶವು (ಸಮವಸ್ತ್ರ ಕಡ್ಡಾಯ) ಸಂವಿಧಾನದ ಆಶಯಗಳಿಗೆ ಅನುಗುಣವಾಗಿದೆಯೇ ಎನ್ನುವ ಅಂಶಗಳನ್ನು ನ್ಯಾಯಾಲಯ ಪರಿಶೀಲನೆಗೆ ಪರಿಗಣಿಸಿತ್ತು.
- ಸಾಮಾಜಿಕ ಮತ್ತು ಧಾರ್ಮಿಕ ಬದುಕು: ಧಾರ್ಮಿಕ ಬದುಕನ್ನು ಸಾಮಾಜಿಕ ಬದುಕಿನಿಂದ ಪ್ರತ್ಯೇಕಿಸಲು ಆಗುವುದಿಲ್ಲ ಎನ್ನುವ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರ ಮಾತನ್ನು ಹೈಕೋರ್ಟ್ ಉಲ್ಲೇಖಿಸಿದೆ. ಭಾರತ ಮತ್ತು ಅಮೆರಿಕ ಸಂವಿಧಾನಗಳು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ತಳೆದಿರುವ ನಿಲುವುಗಳನ್ನೂ ನ್ಯಾಯಮೂರ್ತಿಗಳು ಪರಿಶೀಲಿಸಿದ್ದಾರೆ.
- ಅಂಬೇಡ್ಕರ್ ಭಾಷಣದ ಉಲ್ಲೇಖ: ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಾಗುತ್ತದೆಯೇ ಎಂಬ ವಿಚಾರವನ್ನೂ ಹೈಕೋರ್ಟ್ ಪರಿಶೀಲಿಸಿದೆ. ಅತ್ಯಗತ್ಯ ಧಾರ್ಮಿಕ ಆಚರಣೆ ಎಂದರೆ ಏನು ಎಂದು ವಿವರಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾಷಣವನ್ನು ಕೋರ್ಟ್ ಉಲ್ಲೇಖಿಸಿದೆ. ‘ಭಾರತದಲ್ಲಿ ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ಧರ್ಮ ಆವರಿಸಿಕೊಂಡಿದೆ. ಹೀಗಾಗಿ ಧರ್ಮದ ವ್ಯಾಖ್ಯಾನವನ್ನು ಸೀಮಿತಗೊಳಿಸುವ ಅಗತ್ಯವಿದೆ. ಎಲ್ಲ ನಂಬಿಕೆ ಮತ್ತು ರಿವಾಜುಗಳನ್ನು ಧರ್ಮದ ಅತ್ಯಗತ್ಯ ಭಾಗ ಎನ್ನಬೇಕಿಲ್ಲ’ ಎಂದು ಅಂಬೇಡ್ಕರ್ ಅವರು ಹೇಳಿದ್ದರು. ಅಂಬೇಡ್ಕರ್ ಅವರ ಈ ಹೇಳಿಕೆಯನ್ನು ಹಿಜಾಬ್ ಧರಿಸುವುದು ಅತ್ಯಗತ್ಯವೇ ಎಂಬ ಪ್ರಶ್ನೆ ಪರಿಶೀಲಿಸುವಾಗ ನ್ಯಾಯಾಲಯ ಉಲ್ಲೇಖಿಸಿತು.
- ಸಾಂವಿಧಾನಿಕ ಮೌಲ್ಯ ಮತ್ತು ಧಾರ್ಮಿಕ ಆಚರಣೆ: ಅತ್ಯಗತ್ಯ ಧಾರ್ಮಿಕ ಆಚರಣೆಗಳು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿಯೇ ಇರಬೇಕು. ಕಾನೂನು ಎನ್ನುವುದು ಬಿಳಿ ಹಾಳೆಯ ಮೇಲಿರುವ ಕಪ್ಪು ಶಾಯಿ ಅಲ್ಲ ಎಂದಿರುವ ಹೈಕೋರ್ಟ್, ಯಾವುದೇ ವ್ಯಕ್ತಿ ಧಾರ್ಮಿಕ ಹಕ್ಕಿನ ಆಧಾರದಲ್ಲಿ ಏನನ್ನಾದರೂ ಕೋರುವಾಗ ತಾನು ಕೋರುತ್ತಿರುವ ಅಂಶ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಇದೆ ಎಂಬುದನ್ನು ಸಾಬೀತುಪಡಿಸಬೇಕು. ಹಿಜಾಬ್ ಧರಿಸುವುದು ಸಾಂವಿಧಾನಿಕ ಮೌಲ್ಯಕ್ಕೆ ಅನುಗುಣವಾಗಿಲ್ಲ.
- ಕುರಾನ್ ಆಧಾರ: ಇಸ್ಲಾಮಿಕ್ ಕಾನೂನುಗಳಿಗೆ ಪವಿತ್ರ ಕುರಾನ್ ಅನ್ನು ಮಾತ್ರ ಮೂಲ ಆಧಾರವಾಗಿ ಪರಿಗಣಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುತ್ತಾರೆ ಎಂದಿರುವ ಹೈಕೋರ್ಟ್, ಹಿಜಾಬ್ ಬಗ್ಗೆ ಕುರಾನ್ನಲ್ಲಿ ಉಲ್ಲೇಖವಿಲ್ಲ ಎಂದು ಸ್ಪಷ್ಟಪಡಿಸಿದೆ (This word as such is not employed in Quran). ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದು ಕುರಾನ್ ಎಲ್ಲಿಯೂ ಷರತ್ತು ಹಾಕಿಲ್ಲ ಎಂದು ಹೈಕೋರ್ಟ್ ಹೇಳಿದೆ.
- ಸಾಂಸ್ಕೃತಿಕ ಕಾರಣಗಳು: ಹಿಜಾಬ್ ಧರಿಸಲು ನಿರ್ದಿಷ್ಟ ಧಾರ್ಮಿಕ ಕಾರಣಗಳು ಇಲ್ಲ. ವಸ್ತ್ರಧಾರಣೆಗೆ ಸಹಜವಾಗಿಯೇ ಸಾಂಸ್ಕೃತಿಕ ಕಾರಣಗಳು ಇರುತ್ತವೆ. ಮಹಿಳೆಯರನ್ನು ಹತ್ತಿಕ್ಕುವ ಹಲವು ಬೆಳವಣಿಗೆಗಳು ಇತಿಹಾಸದಲ್ಲಿ ನಡೆದಿವೆ. ಇಸ್ಲಾಂ ಹುಟ್ಟಿದ ಸಂದರ್ಭವೂ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ. ಮುಗ್ಧ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಪವಿತ್ರ ಕುರಾನ್ ಹಲವು ಕ್ರಮಗಳನ್ನು ಸೂಚಿಸಿದೆ. ಹಿಜಾಬ್ ಎನ್ನುವುದು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳ ಕಾರಣದಿಂದ ಬೆಳೆದು ಬಂದ ಆಚರಣೆ. ಧಾರ್ಮಿಕವಾಗಿ ಇದನ್ನು ಅತ್ಯಗತ್ಯ ಆಚರಣೆ ಎನ್ನಲು ಆಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
- ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯ: ಅರ್ಜಿ ಸಲ್ಲಿಸಿದ ಮಹಿಳೆಯರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳದೇ ಇದನ್ನು ಸಂವಿಧಾನದ 25ನೇ ವಿಧಿಯ ಅನ್ವಯ (ಧರ್ಮ ಮತ್ತು ಆಚರಣೆಯ ಸ್ವಾತಂತ್ರ್ಯ) ಪರಿಶೀಲಿಸಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್, ಆತ್ಮಸಾಕ್ಷಿ (Conscience) ಎನ್ನುವುದು ತೀರಾ ವೈಯಕ್ತಿಕವಾದ ಅಂಶ. ಹಿಜಾಬ್ ಧರಿಸುವುದು ಆತ್ಮಸಾಕ್ಷಿ ಅಥವಾ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಸಾಬೀತು ಪಡಿಸಲು ಅಂಬೇಡ್ಕರ್ ಅವರ ಮಾತಿನ ಆಧಾರದಂತೆ ಅದು ಧರ್ಮದ ಅತ್ಯಗತ್ಯ ಆಚರಣೆ ಎಂಬುದನ್ನು ನಿರೂಪಿಸಬೇಕಾಗುತ್ತದೆ ಎಂದು ಹೇಳಿತು.
- ಸಮವಸ್ತ್ರ ವಿಧಿಸುವ ಅಧಿಕಾರ: ಒಂದು ನಿರ್ದಿಷ್ಟ ವಯೋಮಾನದವರೆಗೆ ಎಲ್ಲರಿಗೂ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ. ಇದರೊಂದಿಗೆ ಸಮವಸ್ತ್ರಕ್ಕೆ ಶಿಫಾರಸು ಮಾಡುವ ಅಧಿಕಾರವೂ ಸರ್ಕಾರಕ್ಕೆ ದತ್ತವಾಗಿದೆ. ಅನಗತ್ಯ ಕಟ್ಟಲೆಗಳನ್ನು ಮಕ್ಕಳ ಮೇಲೆ ಹೇರುವಂತಿಲ್ಲ. ನಮ್ಮ ದೇಶದ ಎಲ್ಲ ಮಕ್ಕಳಿಗೂ ಸಂವಿಧಾನಾತ್ಮಕವಾಗಿ ಹಕ್ಕುಗಳಿವೆ. ಹಾಗೆಂದು ಶಾಲೆಗಳು ಶಿಫಾರಸು ಮಾಡುವ ಸಮವಸ್ತ್ರಗಳು ಧಾರ್ಮಿಕ ತಾಟಸ್ತ್ಯ ಮತ್ತು ಸರ್ವರಿಗೂ ಅನ್ವಯವಾಗುವ (religion-neutral and universally applicable) ರೀತಿಯಲ್ಲಿ ಇದ್ದಾಗ ಅದರಿಂದ ಯಾವುದೇ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ. ಶಾಲಾ ಸಮವಸ್ತ್ರಗಳು ಮಕ್ಕಳಲ್ಲಿ ಭ್ರಾತೃತ್ವ ಮತ್ತು ಸೌಹಾರ್ದ ಮನಸ್ಥಿತಿಯನ್ನು ಬೆಳೆಸುತ್ತವೆ.
- ಸರ್ಕಾರದ ಆದೇಶ ಸಂವಿಧಾನಬದ್ಧ: ಸಮವಸ್ತ್ರ ಸಂಹಿತೆಯನ್ನು ಎಲ್ಲ ಮಕ್ಕಳೂ ಪಾಲಿಸಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ವಿಧಿಸುವ ಈ ನಿರ್ಬಂಧವು ಸಂವಿಧಾನಾತ್ಮಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಾಡಿರುವ ಆದೇಶ ಕಾನೂನುಬದ್ಧವಾಗಿದೆ.
Published On - 1:28 pm, Tue, 15 March 22