ರಾಕ್ಲೈನ್ ವೆಂಕಟೇಶ್ ಮಾಲ್ ಬೀಗಮುದ್ರೆ ತೆರವಿಗೆ ಹೈಕೋರ್ಟ್ ಸೂಚನೆ
ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾಲಕತ್ವದ ರಾಕ್ಲೈನ್ ಮಾಲ್ ಬೀಗಮುದ್ರೆ ತೆರವಿಗೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲಿಗೆ ರಾಕ್ಲೈನ್ ವೆಂಕಟೇಶ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಬಿಬಿಎಂಪಿ ಆದೇಶ ಪ್ರಶ್ನಿಸಿ ರಾಕ್ಲೈನ್ ವೆಂಕಟೇಶ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅರ್ಜಿದಾರರಿಗೆ ಅವಕಾಶ ನೀಡಿ ರಿಟ್ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಬೆಂಗಳೂರು, ಫೆಬ್ರವರಿ 19: ಬಿಬಿಎಂಪಿ ಸೀಜ್ ಮಾಡಿದ್ದ ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ (Rockline Venkatesh) ಮಾಲಕತ್ವದ ರಾಕ್ಲೈನ್ ಮಾಲ್ (Rockline Mall) ಬೀಗಮುದ್ರೆ ತೆರವಿಗೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲಿಗೆ ರಾಕ್ಲೈನ್ ವೆಂಕಟೇಶ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತೀಚೆಗೆ ರಾಕ್ಲೈನ್ ಮಾಲ್ಗೆ ಬೀಗ ಹಾಕಿದ್ದರು. ಇದನ್ನು ಪ್ರಶ್ನಿಸಿ ರಾಕ್ಲೈನ್ ವೆಂಕಟೇಶ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಬಿಬಿಎಂಪಿ ಆದೇಶ ಪ್ರಶ್ನಿಸಲು ಪ್ರತ್ಯೇಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ಅರ್ಜಿದಾರರಿಗೆ ಅವಕಾಶ ನೀಡಿ ರಿಟ್ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
11.51 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಟಿ.ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ಮಾಲ್ಗೆ ಅಧಿಕಾರಿಗಳು ಬೀಗ ಹಾಕಿದ್ದರು. 2011 ರಿಂದ 2023ರವರೆಗೆ 11.51 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್ ನೀಡಿಯೂ ಬಾಕಿ ಪಾವತಿಸದ ಹಿನ್ನೆಲೆ ಮಾಲ್ಗೆ ಬೀಗ ಹಾಕಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಕ್ಲೈನ್ ಮಾಲ್ ಮ್ಯಾನೇಜರ್ ಪ್ರಕಾಶ್, ನಮಗೆ ನೋಟಿಸ್ ಕೊಡದೇ ಮಾಲ್ಗೆ ಬೀಗ ಹಾಕಿದ್ದಾರೆ ಎಂದು ಹೇಳಿದ್ದರು.
ರಾಕ್ಲೈನ್ ವೆಂಕಟೇಶ್ ಪುತ್ರ ಯತೀಶ್ ಅಧಿಕಾರಿಗಳಿಗೆ ಆವಾಜ್
ಈ ಬಗ್ಗೆ ರಾಕ್ಲೈನ್ ವೆಂಕಟೇಶ್ ಪುತ್ರ ಯತೀಶ್ ಅಧಿಕಾರಿಗಳಿಗೆ ಆವಾಜ್ ಹಾಕಿದ್ದರು. ಮಾಲ್ ಏನು ನಿಮ್ಮಪ್ಪಂದಾ ಅಂತಾ ಅಧಿಕಾರಿಗಳನ್ನು ನಿಂದಿಸಿದ್ದರು. ಬಾಗಿಲು ಹಾಕು ಅಂತೀಯಾ, ಆದೇಶ ಪ್ರತಿ ಎಲ್ಲಿ ಎಂದು ಕಿರಿಕ್ ತೆಗೆದಿದ್ದರು. ಬಿಬಿಎಂಪಿ ಎಆರ್ಒ ರಮೇಶ್ಗೆ ಹಿಗ್ಗಾಮುಗ್ಗಾ ಆವಾಜ್ ಹಾಕಿದ್ದರು.
ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ: ರಾಕ್ಲೈನ್ ಮಾಲ್ಗೆ ಬೀಗಮುದ್ರೆ ಹಾಕಿದ ಬಿಬಿಎಂಪಿ
ತೆರಿಗೆ ಬಾಕಿ ಉಳಿಸಿದ್ದರಿಂದ ರಾಕ್ಲೈನ್ ಮಾಲ್ಗೆ ಅಧಿಕಾರಿಗಳು ಬೀಗ ಜಡಿದಿದ್ದರು. ಆದರೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ರಾಕ್ಲೈನ್ ಪುತ್ರ ಯತೀಶ್ ಆವಾಜ್ ಹಾಕಿ ದರ್ಪ ಮೆರೆದಿದ್ದರು.
ಇದನ್ನೂ ಓದಿ: ಮಂತ್ರಿ ಮಾಲ್ ವಿರುದ್ಧ ಸಮರ ಸಾರಿದ್ದ ಬಿಬಿಎಂಪಿಗೆ ಕೋರ್ಟ್ನಲ್ಲಿ ಹಿನ್ನಡೆ
ಪ್ರಕರಣ ಸಂಬಂಧ ದಾಸರಹಳ್ಳಿ ವಲಯ ಅಪರ ಆಯುಕ್ತ ಬಾಲಶೇಖರ್ ಮಾತನಾಡಿ, 2011ರಿಂದ 11 ಕೋಟಿ 56 ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. 11 ವರ್ಷದಿಂದ ತೆರಿಗೆ ಕಟ್ಟಿಲ್ಲ. ಒಮ್ಮೆ ಒಂದು ಬಾರಿ 1 ಕೋಟಿ 10 ಲಕ್ಷ ರೂ. ಕಟ್ಟಿದ್ದಾರೆ. 26 ಲಕ್ಷ ರೂ. ಚೆಕ್ ಕೊಟ್ಟಿದ್ದರು. ಈಗ ನೋಟಿಸ್ ಕೊಟ್ಟಿದ್ದೇವೆ ಆದರೂ ಕಟ್ಟಿಲ್ಲ. ಹೀಗಾಗಿ ಸೀಲ್ ಮಾಡಿದ್ದೇವೆ ಎಂದು ಈ ಹಿಂದೆ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:08 pm, Mon, 19 February 24