ಆಸ್ತಿ ತೆರಿಗೆ ಬಾಕಿ: ರಾಕ್​ಲೈನ್​ ಮಾಲ್​ಗೆ ಬೀಗಮುದ್ರೆ ಹಾಕಿದ ಬಿಬಿಎಂಪಿ

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳ ವಿರುದ್ಧ ಪಾಲಿಕ ಕ್ರಮ ಕೈಗೊಳ್ಳುತ್ತಿದೆ. ನೋಟಿಸ್​ ನೀಡಿದರು ತೆರಿಗೆ ಕಟ್ಟದ ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ಬೀಗಮುದ್ರೆ ಹಾಕುತ್ತಿದೆ. ಇದೀಗ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ರಾಕ್​ಲೈನ್​ ಮಾಲ್​​ಗೂ ಬೀಗಮುದ್ರೆ ಹಾಕಿದೆ.

ಆಸ್ತಿ ತೆರಿಗೆ ಬಾಕಿ: ರಾಕ್​ಲೈನ್​ ಮಾಲ್​ಗೆ ಬೀಗಮುದ್ರೆ ಹಾಕಿದ ಬಿಬಿಎಂಪಿ
ರಾಕ್​ಲೈನ್​ ಮಾಲ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 14, 2024 | 11:03 AM

ಬೆಂಗಳೂರು, ಫೆಬ್ರವರಿ 14: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಆಸ್ತಿ ತೆರಿಗೆ (Property Tax) ಬಾಕಿ ಉಳಿಸಿಕೊಂಡಿರುವ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳ ವಿರುದ್ಧ ಪಾಲಿಕ ಕ್ರಮ ಕೈಗೊಳ್ಳುತ್ತಿದೆ. ಬಿಬಿಎಂಪಿ ಇಂದು (ಫೆ.14) ತೆರಿಗೆ ಬಾಕಿ ಉಳಿಸಿಕೊಂಡಿರುವ ರಾಕ್​ಲೈನ್ ಮಾಲ್​ಗೆ (Rockline Mall) ಬೀಗಮುದ್ರೆ ಹಾಕಿದೆ. ನಟ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ (Rockline Venkatesh)​ ಒಡೆತನದ ಟಿ.ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ರಾಕ್​​ಲೈನ್​​ ಮಾಲ್​ 2011 ರಿಂದ 2023ರವರೆಗೆ 11.51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಟಿ ನೋಟಿಸ್ ನೀಡಿತ್ತು. ನೋಟಿಸ್​ ನೀಡಿದರೂ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ದಾಸರಹಳ್ಳಿಯ ಬಿಬಿಎಂಪಿ ಕಂದಾಯ ಅಧಿಕಾರಿಗಳು ಮಾಲ್​​ಗೆ ಬೀಗಮುದ್ರೆ ಹಾಕಿದ್ದಾರೆ.

ಪ್ರಕರಣ ಸಂಬಂಧ ದಾಸರಹಳ್ಳಿ ವಲಯ ಅಪರ ಆಯುಕ್ತ ಬಾಲಶೇಖರ್ ಮಾತನಾಡಿ, 2011ರಿಂದ 11 ಕೋಟಿ 56 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದೆ. 11 ವರ್ಷದಿಂದ ತೆರಿಗೆ ಕಟ್ಟಿಲ್ಲ. ಒಮ್ಮೆ ಒಂದು ಬಾರಿ 1 ಕೋಟಿ 10 ಲಕ್ಷ ರೂ. ಕಟ್ಟಿದ್ದಾರೆ. 26 ಲಕ್ಷ ಚೆಕ್ ಕೊಟ್ಟಿದ್ದಾರೆ. ಈಗ ನೋಟಿಸ್ ಕೊಟ್ಟಿದ್ದೇವೆ ಆದರೂ ಕಟ್ಟಿಲ್ಲ. ಹೀಗಾಗಿ ಇವತ್ತು ಸೀಲ್ ಮಾಡಿದ್ದೇವೆ ಎಂದು ಹೇಳಿದರು.

ರಾಕ್ ಲೈನ್ ಮಾಲ್ ಮ್ಯಾನೇಜರ್ ಪ್ರಕಾಶ್ ಮಾತನಾಡಿ, ಮಂಗಳವಾರ (ಫೆ.13) ರಂದು ರಾತ್ರಿ 9:20 ಗಂಟೆಗೆ ಬಿಬಿಎಂಪಿ ಅಧಿಕಾರಿಗಳು ಬಂದಿದ್ದಾರೆ. ನಮಗೆ ನೋಟಿಸ್ ಕೊಟ್ಟಿಲ್ಲ ಏನಿಲ್ಲ. ಸುಮ್ನೆ ನೋಟಿಸ್ ತೋರಿಸಿ ವಾಪಾಸ್ ಅವರೆ ಇಟ್ಟಿಕೊಂಡಿದ್ದಾರೆ. ಕೇಳಿದರೇ ನಮಗೆ ಒತ್ತಡ ಇದೆ ಮಾಲ್ ಸೀಜ್ ಮಾಡುತ್ತೇವೆ ಅಂತಾರೆ. ಹೈಕೋರ್ಟ್​ನಲ್ಲಿ ಒಂದು ವರ್ಷದ ಹಿಂದೆ ಇತ್ಯಾರ್ಥವಾಗಿದೆ. 2023 ರಲ್ಲಿ ಹೈಕೋರ್ಟ್ ಸೂಚನೆ ಮೇರೆ 1ಕೋಟಿ 56 ಲಕ್ಷ ಬಿಬಿಎಂಪಿಗೆ ಡೆಪಾಸಿಟ್ ಮಾಡಿದ್ದೇವೆ. ಅದಾದ ಬಳಿಕ ಏನಾದರು ತಕರಾರು ಇದ್ದರೆ ಅರ್ಜಿ ಹಾಕಿ ಅಂತ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ಕೊಟ್ಟಿದೆ. ಬಿಬಿಎಂಪಿ ಯಾವುದೇ ತಕರಾರು ಅರ್ಜಿ ಹಾಕಿಲ್ಲ. ಈಗ ಏಕಾ ಏಕಿ ಒತ್ತಡ ಇದೆ ಅಂತ ಸೀಲ್ ಮಾಡಿದ್ದಾರೆ ಎಂದರು.

2023ರ ನವೆಂಬರ್ ಮತ್ತು 2024ರ ಫೆಬ್ರವರಿ ನಡುವೆ 46,318 ಆಸ್ತಿಗಳಿಗೆ ತೆರಿಗೆ ಬಾಕಿ ವಸೂಲಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಬಿಬಿಎಂಪಿ ಕಂದಾಯ ಅಧಿಕಾರಿಗಳು ನಿವೇಶನಗಳನ್ನು ಸೀಲ್ ಮಾಡಿದರೂ ತೆರಿಗೆ ಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದ 7,203 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳವಾರ (ಫೆ.13) ರಂದು ಕಾರುಗಳು ಮತ್ತು ಶಾಲಾ ಬಸ್‌ಗಳಂತಹ ಚರ ಆಸ್ತಿಗಳನ್ನು ಮೊದಲ ಬಾರಿಗೆ ಬಿಬಿಎಂಪಿ ಜಪ್ತಿ ಮಾಡಿತ್ತು. ಬಿಬಿಎಂಪಿಯ ಯಲಹಂಕ ವಿಭಾಗದಲ್ಲಿ ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಮಂತ್ರಿ ಮಾಲ್​ಗೂ ಬೀಗ

2023ರ ಡಿಸೆಂಬರ್​ನಲ್ಲಿ ಬಿಬಿಎಂಪಿ 51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಸ್ಕ್ವೇರ್ ಮಾಲ್​ಗೆ ಬೀಗಮುದ್ರೆ ಹಾಕಿತ್ತು. 2019-20ರ ವರೆಗಿನ ಆಸ್ತಿ ತೆರಿಗೆ ಬಾಕಿಯಿದ್ದ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿತ್ತು. ಮಂತ್ರಿ ಮಾಲ್​​ ಮಾಲಿಕ 2020ರ ಆಗಸ್ಟ್​​​ನಲ್ಲಿ ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಿದ್ದರು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರು ಕೂಡ ಮಾಲ್​ನ ಆಡಳಿತ ಮಂಡಳಿ ತೆರಿಗೆ ಪಾವತಿಸಿರಲಿಲ್ಲ, ಹೀಗಾಗಿ ಕಳೆದ ವರ್ಷ ಬೀಗ ಹಾಕಿತ್ತು.

ಇದನ್ನೂ ಓದಿ: ಯಲಹಂಕದಲ್ಲಿ 85 ಕೋಟಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿ ತೆರವುಗೊಳಿಸಿದ ಬಿಬಿಎಂಪಿ

10,603 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಬೀಗಮುದ್ರೆ

ಕಳೆದ ಆರು ತಿಂಗಳಲ್ಲಿ ಬಿಬಿಎಂಪಿ 10,603 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಸೀಲ್ ಮಾಡಿದೆ. ಆದರೆ, ವಶಪಡಿಸಿಕೊಂಡ ವಾಹನಗಳನ್ನು ಇಡಲು ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಬಿಬಿಎಂಪಿ ಕಾಯ್ದೆಯಡಿ, ಸ್ಥಿರ ಮತ್ತು ಚರಾಸ್ತಿಗಳನ್ನು ವಶಪಡಿಸಿಕೊಳ್ಳಲು ಅವಕಾಶವಿದೆ.

ಇದೇ ಮೊದಲ ಬಾರಿ ಬೃಹತ್ ಕಾರ್ಯಾಚರಣೆ

ಒಟ್ಟು 500 ಕೋಟಿ ರೂ.ಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಸುಸ್ತಿದಾರರ ವಿರುದ್ಧ ಬಿಬಿಎಂಪಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕ್ರಮ ಕೈಗೊಂಡಿದೆ. ಸುಸ್ತಿದಾರರ ಹಿಂದೆ ಹೋಗುವುದರ ಜೊತೆಗೆ, ಸ್ವ-ಮೌಲ್ಯಮಾಪನ ಯೋಜನೆ (ಎಸ್‌ಎಎಸ್) ಅಡಿಯಲ್ಲಿ ಸಲ್ಲಿಸಿದ ದಾಖಲೆಗಳು ಮತ್ತು ಆಸ್ತಿಯನ್ನು ಮರು ಪರಿಶೀಲಿಸಲು ನಾಗರಿಕ ಸಂಸ್ಥೆಯು ಆಸ್ತಿಗಳನ್ನು ಮರುಪರಿಶೀಲಿಸಲು ಪ್ರಾರಂಭಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:58 am, Wed, 14 February 24