BBMP: ಯಲಹಂಕದಲ್ಲಿ 85 ಕೋಟಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿ ತೆರವುಗೊಳಿಸಿದ ಬಿಬಿಎಂಪಿ
BBMP Anti Encroachment Drive: ಆಸ್ತಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳಿಸಿರುವ ಬಿಬಿಎಂಪಿ ಯಲಹಂಕದಲ್ಲಿ 85 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒತ್ತುವರಿಯನ್ನು ತೆರವುಗೊಳಿಸಿದೆ. ನೂರಾರು ಪೊಲೀಸ್ ಸಿಬ್ಬಂದಿ ಮತ್ತು ಕಾರ್ಮಿಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಮುಂದೆ ಇಂಥ ಕೃತ್ಯಗಳನ್ನೆಸಗದಂತೆ ತಡೆಯಲೂ ಬಿಬಿಎಂಪಿ ಕ್ರಮ ಕೈಗೊಂಡಿದೆ.
ಬೆಂಗಳೂರು, ಫೆಬ್ರವರಿ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲಹಂಕದಲ್ಲಿ (Yelahanka) 2.75 ಎಕರೆ ಪ್ರದೇಶದಲ್ಲಿದ್ದ 85 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿದೆ. ಕಂದಾಯ ಇಲಾಖೆ ಹಾಗೂ ಪೊಲೀಸರ ಸಹಕಾರದೊಂದಿಗೆ ಬಿಬಿಎಂಪಿ ಮಂಗಳವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು. ಬಿಬಿಎಂಪಿ ಹೇಳಿಕೆ ಪ್ರಕಾರ, ಅತಿಕ್ರಮಣದಾರರು ಒತ್ತುವರಿ ಮಾಡಿಕೊಂಡ ಜಾಗದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ವಾಣಿಜ್ಯ ಸಂಸ್ಥೆಗಳನ್ನೂ ನಡೆಸುತ್ತಿದ್ದರು.
140 ಪೊಲೀಸ್ ಸಿಬ್ಬಂದಿ ಮತ್ತು 70 ಕಾರ್ಮಿಕರು ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ನಾಲ್ಕು ಜೆಸಿಬಿಗಳು ಮತ್ತು 12 ಟ್ರ್ಯಾಕ್ಟರ್‌ಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಇನ್ನು ಮುಂದೆ ಯಾವುದೇ ಒತ್ತುವರಿಯಾಗದಂತೆ ಚೈನ್ ಲಿಂಕ್ ಬೇಲಿ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.
ವಾರ್ಷಿಕ 500 ಕೋಟಿ ಗಳಿಕೆಗೆ ಹೊಸ ಜಾಹೀರಾತು ನೀತಿ
ಹೊರಾಂಗಣ ಜಾಹೀರಾತುಗಳನ್ನು ನಿಷೇಧಿಸುವ ಆರು ವರ್ಷಗಳ ಹಿಂದಿನ ಬೈಲಾವನ್ನು ಬದಲಿಸಲು ಬಿಬಿಎಂಪಿ ಮುಂದಾಗಿದೆ. ಇದೀಗ ಹೊಸ ಜಾಹೀರಾತು ನೀತಿಯನ್ನು ರಚಿಸುವುದರೊಂದಿಗೆ ಬೆಂಗಳೂರಿನಲ್ಲಿ ವಾಣಿಜ್ಯ ಜಾಹೀರಾತುಗಳು ಪುನರಾವರ್ತನೆಯಾಗಲಿವೆ. ಕೆಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ಖಾಸಗಿ ಆವರಣದಲ್ಲಿ ಹೊರಾಂಗಣ ಜಾಹೀರಾತುಗಳ ಪರವಾಗಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ ಸುಮಾರು ಒಂದು ವರ್ಷದ ನಂತರ ಈ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.
2018 ರಲ್ಲಿ ಬಿಬಿಎಂಪಿ ಕೌನ್ಸಿಲ್ ಅಂಗೀಕರಿಸಿದ ಐತಿಹಾಸಿಕ ನಿರ್ಣಯವನ್ನು ತಳ್ಳಿಹಾಕುವ ಕರಡು ನೀತಿಯನ್ನು ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ರಾಜ್ಯ ಬಜೆಟ್‌ನಲ್ಲಿ ಆ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.
ಹೊಸ ನೀತಿಯ ಪ್ರಕಾರ, ಬಿಬಿಎಂಪಿಯು ಹೆಚ್ಚಿನ ಬಿಡ್ಡರ್ಗಳಿಗೆ ಜಾಹೀರಾತು ಹಕ್ಕುಗಳನ್ನು ನೀಡುತ್ತದೆ. ರಸ್ತೆ ಅಗಲದ ಆಧಾರದ ಮೇಲೆ ಶುಲ್ಕ ಹಾಗೂ ಹೋರ್ಡಿಂಗ್‌ನ ಗಾತ್ರವನ್ನು ನಿಗದಿಪಡಿಸಲಾಗುತ್ತದೆ. ಫುಟ್‌ಪಾತ್‌ಗಳಲ್ಲಿ ಯಾವುದೇ ಹೋರ್ಡಿಂಗ್ ಅನ್ನು ಅನುಮತಿಸಲಾಗುವುದಿಲ್ಲ. ಆದರೆ ಜಾಹೀರಾತುದಾರರು ಹೋರ್ಡಿಂಗ್‌ಗಳನ್ನು ಸ್ಥಾಪಿಸಲು ಖಾಸಗಿ ಆಸ್ತಿ ಮಾಲೀಕರೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗೆ ಬಂತು AI; ರೋಗದ ಪತ್ತೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋದ ಆರೋಗ್ಯ ಇಲಾಖೆ
ಹೊಸ ಜಾಹೀರಾತು ನೀತಿಯಿಂದ ಬಿಬಿಎಂಪಿಗೆ ವಾರ್ಷಿಕ 500 ಕೋಟಿ ಆದಾಯ ಬರಲಿದೆ ಎಂದು ಹಿರಿಯ ಅಧಿಕಾರಿಗಳು ನಿರೀಕ್ಷಿಸಿದ್ದಾರೆ.
ಅಕ್ರಮ ಒತ್ತುವರಿ ತೆರವು, ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧದ ಕಾರ್ಯಾಚರಣೆಯನ್ನು ಬಿಬಿಎಂಪಿ ಕಳೆದ ಕೆಲವು ದಿನಗಳಿಂದ ಚುರುಕುಗೊಳಿಸಿದೆ. ಇದರೊಂದಿಗೆ ಇದೀಗ ಹೊಸ ಜಾಹೀರಾತು ನೀತಿಯನ್ನೂ ರೂಪಿಸಲು ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ