ಸರ್ಕಾರದ ನಿರ್ಧಾರ ತಿರಸ್ಕೃತ: ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕ ಪರಿಗಣಿಸಲು ಹೈಕೋರ್ಟ್ ಆದೇಶ
ರಿಪಿಟರ್ಸ್ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಶೇ.50 ರಷ್ಟು ಅಂಕ ಮತ್ತು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇ.50 ರಷ್ಟು ಅಂಕಗಳನ್ನು ಪರಿಗಣಿಸಿ ಸಿಇಟಿ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸುವಂತೆ ಕೆಇಎಗೆ ಹೈಕೋರ್ಟ್ ಈ ತೀರ್ಪಿನಲ್ಲಿ ತಿಳಿಸಿದೆ.
ಬೆಂಗಳೂರು: ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕ ಪರಿಗಣನೆ ವಿಚಾರಕ್ಕೆ ಸಂಬಂಧಿಸಿ ಹಿಂದಿನಂತೆ ಪಿಯುಸಿ ಅಂಕ ಪರಿಗಣಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕ ಪರಿಗಣಿಸಲ್ಲವೆಂಬ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕ ಪರಿಗಣಿಸಲ್ಲವೆಂದು ರಾಜ್ಯ ಸರ್ಕಾರ ಜುಲೈ 30ರಂದು ಆದೇಶ ಹೊರಡಿಸಿತ್ತು. ಬಳಿಕ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದರು. ಕೊವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯದೇ ಪಿಯು ಉತ್ತೀರ್ಣರಾಗಿದ್ರು. ಹೀಗಾಗಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕವನ್ನು ಕೆಇಎ ಪರಿಗಣಿಸಲಿಲ್ಲ. ಸದ್ಯ ಈಗ ಪಿಯುಸಿ ಅಂಕ ಪರಿಗಣಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
2020-21ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದು, ಸಿಇಟಿ ಪರೀಕ್ಷೆಗೆ ಪುನರಾವರ್ತಿತರಾಗಿರುವ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳ ಸೀಟು ಹಂಚಿಕೆ ಮಾಡುವಾಗ ದ್ವಿತೀಯ ಪಿಯುಸಿಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಸಹ ಪರಿಗಣಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ (2020-21ನೇ) ದ್ವಿತೀಯ ಪಿಯುಸಿಯಲ್ಲಿ ತಾವು ಗಳಿಸಿದ ಅಂಕಗಳನ್ನು ವತ್ತಿಪರ ಕೋರ್ಸ್ಗಳ ಸಿಇಟಿ ಹಂಚಿಕೆಯ ರ್ಯಾಂಕಿಂಗ್ಗೆ ಪರಿಗಣಿಸಬೇಕು ಎಂದು ಕೋರಿ ಹಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ಈ ತೀರ್ಪು ನೀಡಿದೆ. ರಿಪಿಟರ್ಸ್ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಶೇ.50 ರಷ್ಟು ಅಂಕ ಮತ್ತು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇ.50 ರಷ್ಟು ಅಂಕಗಳನ್ನು ಪರಿಗಣಿಸಿ ಸಿಇಟಿ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸುವಂತೆ ಕೆಇಎಗೆ ಹೈಕೋರ್ಟ್ ಈ ತೀರ್ಪಿನಲ್ಲಿ ತಿಳಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಈಗಾಗಲೇ ಸಿಇಟಿ ಪ್ರಕಟಿಸಿದ ರ‍್ಯಾಂಕಿಂಗ್ ಪಟ್ಟಿಯಲ್ಲಿ ಏರುಪೇರಾಗುವ ಎಲ್ಲ ಸಾಧ್ಯತೆಗಳಿವೆ.
Published On - 10:49 pm, Sat, 3 September 22