Bengaluru-Mysore Traffic: ಬೆಂಗಳೂರು-ಮೈಸೂರು ನಡುವೆ ಸಂಚರಿಸುವವರಿಗೆ ಬದಲಿ ಮಾರ್ಗ ಬಳಸಲು ಸೂಚನೆ
ಇತ್ತೀಚೆಗೆ ಸುರಿದಿದ್ದ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಲವು ಸಮಸ್ಯೆಗಳಾಗಿದ್ದವು.
ರಾಮನಗರ: ಜಿಲ್ಲೆಯಲ್ಲಿ ಭಾನುವಾರ (ಸೆಪ್ಟೆಂಬರ್ 4) ಭಾರೀ ಮಳೆಯಾಗುವ ಮುನ್ಸೂಚನೆಯಿರುವ (Rain Predictions) ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ (Bengaluru-Mysore) ಸಂಚರಿಸುವ ಪ್ರಯಾಣಿಕರು ಬದಲಿ ಮಾರ್ಗದಲ್ಲಿ ಸಂಚರಿಸುವುದು ಒಳ್ಳೆಯದು ಎಂದು ಪೊಲೀಸರು ಸಲಹೆ ಮಾಡಿದ್ದಾರೆ. ರಾಮನಗರದ ಬದಲಿಗೆ ಬೆಂಗಳೂರು-ಕನಕಪುರ ಅಥವಾ ಬೆಂಗಳೂರು-ಕುಣಿಗಲ್ ಮಾರ್ಗವಾಗಿ ಮೈಸೂರು ತಲುಪುವಂತೆ ಪೊಲೀಸರು ಸಲಹೆ ಮಾಡಿದ್ದಾರೆ. ಸ್ವಲ್ಪ ಮಳೆ ಸುರಿದರೂ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಒಂದು ವೇಳೆ ಮಳೆ ಪ್ರಮಾಣ ಹೆಚ್ಚಾದರೆ ಹೆದ್ದಾರಿಯಲ್ಲಿ ಪ್ರವಾಹದಂತೆ ನೀರು ನುಗ್ಗುತ್ತದೆ. ಹೀಗಾಗಿಯೇ ಬದಲಿ ಮಾರ್ಗದ ಮೂಲಕ ಸಂಚರಿಸುವುದು ಒಳಿತು ಎಂದು ಪೊಲೀಸರು ಕಿವಿಮಾತು ಹೇಳಿದ್ದಾರೆ. ಇತ್ತೀಚೆಗೆ ಸುರಿದಿದ್ದ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಲವು ಸಮಸ್ಯೆಗಳಾಗಿದ್ದವು. ಸಂಚಾರವನ್ನೇ ನಿರ್ಬಂಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಆಗಸ್ಟ್ 30ರಂದು ಭಾರೀ ಮಳೆ ಸುರಿದ್ದಿದ್ದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ವಿವಿಧೆಡೆ ಕೆರೆಗಳು ತುಂಬಿ, ಕೋರಿ ನೀರು ಹೆದ್ದಾರಿಯ ಮೇಲೆ ಹರಿದು ಬಂದಿತ್ತು. ಕುಂಬಳಗೋಡು ಸಮೀಪದ ಭಕ್ಷಿ ಕೆರೆಯ ನೀರು ನುಗ್ಗಿದ್ದ ಕಾರಣ ಟ್ರೂಪ್ ಲೈನ್, ಗೌಸಿಯಾ ನಗರ, ಅರ್ಕೇಶ್ವರ ಕಾಲೋನಿಯ ನೂರಾರು ಮನೆಗಳು ಜಲಾವೃತಗೊಂಡಿವೆ. ಪರಿಣಾಮ ಮನೆಯಲ್ಲಿ ಇದ್ದ ವಸ್ತುಗಳು ಎಲ್ಲವೂ ನೀರಿನಲ್ಲಿ ಹೋಗಿವೆ. ಬಟ್ಟೆ, ದಿನಸಿ ಪದಾರ್ಥಗಳು ಇಲ್ಲದೇ ಮಹಿಳೆಯರು, ಮಕ್ಕಳು ಪರದಾಡುವಂತಾಯಿತು. ಮನೆಗಳಿಗೆ ನೀರು ನುಗ್ಗಿದ ಕಾರಣ ಜನರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದರು.
ಬೆಂಗಳೂರಿನಲ್ಲಿ ಧಾರಾಕಾರ ಮಳೆ
ಬೆಂಗಳೂರು ನಗರದ ಹಲವೆಡೆ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆಯವರೆಗೆ ಧಾರಾಕಾರ ಮಳೆ ಸುರಿದಿದೆ. ಭಾರೀ ಮಳೆಯಿಂದಾಗಿ ನಗರದ ತಗ್ಗುಪ್ರದೇಶದ ರಸ್ತೆಗಳು ಜಲಾವೃತಗೊಂಡಿದ್ದು, ರಸ್ತೆಗಳು ನದಿಗಳಂತಾದವು. ವಾಹನ ಸವಾರರು ಮನೆಗಳನ್ನು ತಲುಪಲು ಪರದಾಡಬೇಕಾಯಿತು. ನೀರು ನುಗ್ಗಿದ ಎಂಜಿನ್ ಸ್ಥಗಿತಗೊಂಡ ವಾಹನಗಳನ್ನು ತಳ್ಳುತ್ತಾ ಮನೆ ತಲುಪಲು ಜನರು ಪರದಾಡಬೇಕಾಯಿತು.
Published On - 7:08 am, Sun, 4 September 22