ಬೆಂಗಳೂರು: ಹಿಜಾಬ್ ತೀರ್ಪು ಹೊರ ಬೀಳುತ್ತಿದ್ದಂತೆ ಕೆಲ ಮುಸ್ಲಿಂ ವರ್ತಕರು ತೀರ್ಪನ್ನು ವಿರೋಧಿಸಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದರು. ಕರ್ನಾಟಕ ಬಂದ್ಗೆ ಕರೆ ನೀಡಿದ್ದರು. ಹೀಗಾಗಿ ಹಿಂದೂ ಸಂಘಟನೆಗಳು ಮುಸ್ಲಿಮರಿಗೆ ಹಿಂದೂ ಧಾರ್ಮಿಕ ಹಬ್ಬ, ಜಾತ್ರೆಗಳಲ್ಲಿ ಅಂಗಡಿಗಳನ್ನು ಇಡಲು ಅವಕಾಶ ನೀಡದಿರಲು ಮುಂದಾಗಿದ್ದಾರೆ. ಈಗಾಗಲೇ ಶಿವಮೊಗ್ಗ, ಮಂಗಳೂರು ಸೇರಿದಂತೆ ಅನೇಕ ಕಡೆ ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ಇಡಲು ಅವಕಾಶ ನಿರಾಕರಿಸಲಾಗಿದೆ. ಸದ್ಯ ಈಗ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಹಿಂದೂ ದೇವಸ್ಥಾನಗಳ ಜಾಗದಲ್ಲಿ ಹಿಂದೂಯೇತರರಿಗೆ ಅಂಗಡಿ- ಮುಗ್ಗಟ್ಟುಗಳನ್ನು ಹಾಕಲು ಅವಕಾಶ ನೀಡದಂತೆ ಕ್ರಮ ಜರುಗಿಸುವಂತೆ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ, ರೋಹಿಣಿ ಸಿಂಧೂರಿ ಅವರಿಗೆ ಮನವಿ ಮಾಡಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಂದು(ಮಾರ್ಚ್ 24) ಕರ್ನಾಟಕ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ಅಂಗಡಿ-ಮುಗ್ಗಟ್ಟು ಹಾಕಲು ಅವಕಾಶ ನೀಡಬಾರದು ಎಂದು ಮನವಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಇವರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ, ಅಯ್ಯಪ್ಪ ಸೇವಾ ಸಮಾಜ ಉಪಅಧ್ಯಕ್ಷರಾದ ಎನ್ ಜಯರಾಮ, ಶ್ರೀ ಗುರುಪ್ರಸಾದ, ನ್ಯಾ. ಶುಭಾ ನಾಯ್ಕ, ಪವನ ಕುಮಾರ ಮುಂತಾದವರು ಉಪಸ್ಥಿತರಿದ್ದರು. ಮನವಿಯಲ್ಲಿ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಹಿಂದೂ ದೇವಸ್ಥಾನಗಳ ಜಾಗದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಾಯಿದೆ 2002 ಕ್ಕೆ ವಿರುದ್ಧವಾಗಿ ಹಿಂದೂಯೇತರರು ಅಂಗಡಿ ಮುಗ್ಗಟ್ಟನ್ನು ಹಾಕಿ, ಕಾನೂನು ಬಾಹಿರ ವ್ಯವಹಾರವನ್ನು ಮಾಡುತ್ತಿರುವುದು ರಾಜ್ಯದ ಹಲವು ಕಡೆಗಳಲ್ಲಿ ಗಮನಕ್ಕೆ ಬರುತ್ತಿದೆ. ಬೆಂಗಳೂರಿನ ಪ್ರಮುಖ ಸ್ಥಳ ಮ್ಯಾಜೆಸ್ಟಿಕ್ ನ ಉಪ್ಪಾರಪೇಟೆಯ ಶ್ರೀ. ಆಂಜನೇಯ ದೇವಸ್ಥಾನದ ಜಾಗದಲ್ಲಿ 1978 ರಿಂದ 8 ಹಿಂದೂಯೇತರರು ಚಪ್ಪಲಿ ಅಂಗಡಿ ಮುಗ್ಗಟ್ಟು ತೆರೆದಿದ್ದಾರೆ.
2014 ಕ್ಕೆ ಅವರ ಗುತ್ತಿಗೆ ಅವದಿಯು ಮುಗಿದಿರುವಾಗಲೂ ಅನಧಿಕೃತವಾಗಿ ಇನ್ನೂ ಸಹ ಅವರು ವ್ಯಾಪಾರ ನಡೆಸುತ್ತಿದ್ದಾರೆ. ಇದು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಅಧಿನಿಯಮ 2002 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕಾಯಿದೆಯ ಕಲಂ 29(8)(12) ರ ಪ್ರಕಾರ ಹಿಂದೂ ದೇವಸ್ಥಾನದ ಸಮೀಪದ ಜಮೀನು, ಕಟ್ಟಡ, ನಿವೇಶನಗಳು ಸೇರಿ ಯಾವುದೇ ಸ್ವತ್ತುನ್ನು ಹಿಂದೂಯೇತರರಿಗೆ ನೀಡಬಾರದು ಎಂದು ಸ್ಪಷ್ಟವಾಗಿ ಉಲ್ಲೇಖ ಇದ್ದರೂ ಸಹ ಕಳೆದ ೪೦ ವರ್ಷಗಳಿಂದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಹಲವು ದೇವಸ್ಥಾನಗಳ ಜಾಗದಲ್ಲಿ ಅಂಗಡಿ ಹಾಕುವುದು, ದೇವಸ್ಥಾನಗಳ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಹಿಂದೂಯೇತರರು ಅಂಗಡಿಯನ್ನು ತೆರೆಯುವುದು ಗಮನಕ್ಕೆ ಬರುತ್ತದೆ. ಇದು ಇಲಾಖೆಯ ಅಧಿಕಾರಿಗಳು ದೇವಸ್ಥಾನಗಳ ಜಾಗದ ಸ್ವಂರಕ್ಷಣೆಯ ಬಗ್ಗೆ ಯಾವುದೇ ಕ್ರಮ ಜರುಗಿಸದಿರುವುದು ಅಧಿಕಾರಿಗಳ ಬೇಜವ್ದಾರಿಯನ್ನು ಎತ್ತಿ ತೋರಿಸುತ್ತದೆ.
ಈಗಲಾದರೂ ಇಲಾಖೆಯು ಎಚ್ಚತ್ತುಕೊಂಡು ಹಿಂದೂ ದಾರ್ಮಿಕ ದತ್ತಿ ಇಲಾಖೆಯಲ್ಲಿ ಬರುವ ದೇವಸ್ಥಾನಗಳ ಜಾಗದಲ್ಲಿ ಧಾರ್ಮಿಕ ದತ್ತಿ ಕಾಯಿದೆಗೆ ವಿರುದ್ಧವಾಗಿ ಹಿಂದೂಯೇತರರು ಅಂಗಡಿಯನ್ನು ಹಾಕಿದ್ದರೆ, ಕೂಡಲೇ ತೆಗಿಸಬೇಕು, ತುಂಡು ಗುತ್ತಿಗೆಯನ್ನು ಹಿಂದೂಯೇತರರಿಗೆ ನೀಡಬಾರದು ಎಂದು ತಿದ್ದುಪಡಿ ಮಾಡಬೇಕು ಆಗ್ರಹ ಮಾಡುತ್ತೇವೆ ಮತ್ತು ದೇವಸ್ಥಾನಗಳ ವಾರ್ಷಿಕ ಜಾತ್ರೆಯಲ್ಲಿ ಹಿಂದೂಯೇತರರು ಅಂಗಡಿಯನ್ನು ಹಾಕಲು ಅವಕಾಶ ನೀಡದಂತೆ ವಿಶೇಷ ಆದೇಶ ಹೊರಡಿಸಬೇಕು ಎಂದು ಆಗ್ರಹ ಮಾಡುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 500 ರೂಪಾಯಿ ದಾಟಿದ ‘ಆರ್ಆರ್ಆರ್’ ಟಿಕೆಟ್ ದರ; ಹೀಗಾದ್ರೆ ಹೇಗೆ ಎಂದ ಅಭಿಮಾನಿಗಳು?
ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Published On - 10:25 pm, Thu, 24 March 22