ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ: ಗೋವಿಂದ, ಗೋವಿಂದ ಜೈಕಾರ

Bengaluru Karaga: ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಂಗಳೂರು ಕರಗ ಶಕ್ತೋತ್ಸವ ಆರಂಭವಾಗಿದೆ. ಚೈತ್ರಮಾಸದ ಚೈತ್ರ ಪೌರ್ಣಿಮೆಯ ಚಂದ್ರನ ಬೆಳಕಿನಲ್ಲಿ ಕರಗ ಉತ್ಸವ ನಡೆಯುತ್ತಿದೆ. ಬೆಂಗಳೂರು ಕರಗವನ್ನು ಕಣ್ತುಂಬಿಕೊಳ್ಳಲು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತರು ಕರಗದ ದರ್ಶನ ಪಡೆಯುತ್ತಿದ್ದಾರೆ. ಬೆಂಗಳೂರು ಕರಗ ಉತ್ಸವ ಸಾಗುವ ಮಾರ್ಗದ ಉದ್ದಕ್ಕೂ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ: ಗೋವಿಂದ, ಗೋವಿಂದ ಜೈಕಾರ
ಬೆಂಗಳೂರು ಕರಗ
Edited By:

Updated on: Apr 13, 2025 | 2:57 AM

ಬೆಂಗಳೂರು, ಏಪ್ರಿಲ್​ 13: ಐತಿಹಾಸಿಕ ಬೆಂಗಳೂರು ಕರಗ (Bengaluru Karaga) ಶಕ್ತೋತ್ಸವ (ಹೂವಿನ ಕರಗ) ಧರ್ಮರಾಯಸ್ವಾಮಿ ದೇವಸ್ಥಾನದಿಂದ (Dharmarayaswamy Temple) ಹೊರಡುವ ಮೂಲಕ ಚಾಲನೆ ದೊರೆಯಿತು. ಅರ್ಚಕ ವಿ. ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗವನ್ನು ಹೊತ್ತಿದ್ದಾರೆ.  ಚೈತ್ರಮಾಸದ ಚೈತ್ರ ಪೌರ್ಣಿಮೆಯ ಚಂದ್ರನ ಬೆಳಕಿನಲ್ಲಿ ಕರಗ ಉತ್ಸವ ನಡೆಯಿತು. ಕರಗದ ಅಕ್ಕ-ಪಕ್ಕದಲ್ಲಿ ವೀರಕುಮಾರರು ಖತ್ತಿ ಹಿಡಿದು ಸಾಗುತ್ತಿದ್ದಾರೆ. ಉತ್ಸವ ಸಾಗುವ ದಾರಿ ಉದ್ದಕ್ಕೂ ಭಕ್ತರು ಗೋವಿಂದ, ಗೋವಿಂದ ಎಂದು ಭಗವಂತನ ನಾಮಸ್ಮರಣೆ ಮಾಡುತ್ತಾ ಭಕ್ತರು ಕರಗಕ್ಕೆ ಮಲ್ಲಿಗೆ ಹೂವು ಅರ್ಪಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರಗ ದರ್ಶನ ಪಡೆದರು.

ಕರಗ ಸಾಗುವ ಮಾರ್ಗ

ತಿಗಳರಪೇಟೆಯ ಧರ್ಮರಾಯಸ್ವಾಮಿ ದೇಗುಲದಿಂದ ಆರಂಭವಾಗುವ ಕರಗ, ದೇವಸ್ಥಾನದ ಹೊರಭಾಗದಲ್ಲಿರುವ ಗಣಪತಿ, ಮುತ್ಯಾಲಮ್ಮ ದೇವಿಗೆ ಪೂಜೆ ಸಲ್ಲಿಸಿ, ಬಳಿಕ ಹಲಸೂರುಪೇಟೆಯ ಆಂಜನೇಯಸ್ವಾಮಿ, ಶ್ರೀರಾಮ ದೇವಾಲಯಕ್ಕೆ ತೆರಳುತ್ತದೆ. ಇಲ್ಲಿಂದ, ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಸ್ಥಾನ ತೆರಳಿ, ನಂತರ, ನಗರ್ತಪೇಟೆಯ ವೇಣುಗೋಪಾಲ ಕೃಷ್ಣಸ್ವಾಮಿ ದೇವಾಲಯವನ್ನು ತಲುಪಿ, ನಗರೇಶ್ವರಸ್ವಾಮಿ ದೇವಾಲಯ, ಸಿದ್ದಣ್ಣಗಲ್ಲಿ ಭೈರೇದೇವರ ದೇಗುಲ ಕಬ್ಬನ್‌ಪೇಟೆ 14ನೇ ಕ್ರಾಸ್​​ನಲ್ಲಿರುವ ಶ್ರೀರಾಮ ಸೇವಾ ಮಂದಿರವನ್ನು ತಲಪುತ್ತದೆ.

ಬಳಿಕ, 15ನೇ ಗಲ್ಲಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನದ ಮೂಲಕ, ಮಕ್ಕಳ ಬಸವಣ್ಣ ಗುಡಿ, ಗಾಣಿಗರಪೇಟೆಯ ಚೆನ್ನರಾಯಸ್ವಾಮಿ ದೇಗುಲ, ಚಾಮುಂಡೇಶ್ವರಿ ದೇವಸ್ಥಾನ, ಅವಿನ್ಯೂ ರಸ್ತೆಯ ಈಶ್ವರ ದೇಗುಲ, ದೊಡ್ಡಪೇಟೆಯ ಕೋಟೆ ಆಂಜನೇಯಸ್ವಾಮಿ ದೇವಾಲಯ, ಕೆ.ಆರ್​.ಮಾರುಕಟ್ಟೆಯ ಉದ್ಭವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ
ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ: ರೋಗ ರುಜಿನ ಹೆಚ್ಚಾಗೋ ಸಾಧ್ಯತೆ, ಎಚ್ಚರ
ಬೆಂಗಳೂರು ಕರಗ: ಸರ್ಕಾರದಿಂದ ಹಣ ಬಿಡುಗಡೆ ವಿಚಾರದಲ್ಲಿ ಗೊಂದಲ
ಈ ರಸ್ತೆಗಳಲ್ಲಿ ಭಾನುವಾರ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಆನೇಕಲ್ ಕರಗ ಗಲಾಟೆ ಬಗೆಹರಿಸಿದ ಹೈಕೋರ್ಟ್: ಮರುಕಳಿಸಲಿರುವ ಗತವೈಭವ

ಬಳಿಕ, ಪೊಲೀಸ್​ ರಸ್ತೆಯ ಮೂಲಕ ಮುರಹರಿಸ್ವಾಮಿ ಮಠ, ಬೀರೇದೇವರ ಗುಡಿ, ಅರಳೇಪೇಟೆ ಮುಖ್ಯರಸ್ತೆ ಮಾರ್ಗವಾಗಿ ಅರಳೇಪೇಟೆಯ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ, ಬಳೇಪೇಟೆಯ ಬಳೇಗರಡಿ ಬಳಿ ಮಸ್ತಾನ್ ಸಾಹೇಬರ ದರ್ಗಾದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ನಿಮಿಷಾಂಬ ದೇವಾಲಯ, ಗಾಂಧಿನಗರದ ಅಣ್ಣಮ್ಮ ದೇವಾಲಯ, ನಂತರ, ಕಿಲಾರಿ ರಸ್ತೆಯಲ್ಲಿರುವ ಚಿಕ್ಕ ಧರ್ಮರಾಯಸ್ವಾಮಿ ದೇವಾಲಯ ತಲಪುತ್ತದೆ.

ಇಲ್ಲಿಂದ, ಯಲಹಂಕ ಗೇಟ್ ಬಳಿಯ ಆಂಜನೇಯಸ್ವಾಮಿ ದೇವಸ್ಥಾನ, ಅವೆನ್ಯೂ ರಸ್ತೆ ಮಾರ್ಗವಾಗಿ ತುಪ್ಪದಾಂಜನೇಯ ಸ್ವಾಮಿ ಗುಡಿ, ರಂಗನಾಥಸ್ವಾಮಿ, ಚೌಡೇಶ್ವರಿ ಗುಡಿ, ಸಿ.ಟಿ.ರಸ್ತೆಯ ಮೂಲಕ ಕುಂಬಾರಪೇಟೆ ಮುಖ್ಯರಸ್ತೆಯನ್ನು ಪ್ರವೇಶಿಸುವ ಕರಗ ಉತ್ಸವ ಗೊಲ್ಲರಪೇಟೆ, ತಿಗಳರಪೇಟೆಯಲ್ಲಿ ತಿಗಳ ಕುಲಬಾಂಧವರ ಮನೆಗಳು, ಭಕ್ತರಿಂದ ಪೂಜೆಯನ್ನು ಸ್ವೀಕರಿಸಿ ಮುಂದುವರಿಯುವ ಕರಗ ಉತ್ಸವ, ನಂತರ ಹಾಲುಬೀದಿ, ಕಬ್ಬನ್‌ಪೇಟೆ ಮೂಲಕ ಸುಣ್ಣಕಲ್‌ ಪೇಟೆ ಮೂಲಕ ಕುಲ ಪುರೋಹಿತರ ಮನೆಗಳಲ್ಲಿ ಪೂಜೆಗಳನ್ನು ಸ್ವೀಕರಿಸಿ, ನರಸಿಂಹ ಜೋಯಿಸ್​ಗಲ್ಲಿ ಮೂಲಕ ಸಾಗಿ, ಕೊನೆಗೆ ನಂತರ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಕರಗ ತಲುಪಲಿದೆ. ನಸುಕಿನ ಜಾವ 2.25ರಿಂದ ಬೆಳಗ್ಗೆ 8ರವರೆಗೆ ಕರಗ ಉತ್ಸವ ನಡೆಯುವ ಸಾಧ್ಯತೆ ಇದೆ.

ಪೊಲೀಸ್ ಬಂದೋಬಸ್ತ್

ಧರ್ಮರಾಯನ ದೇವಸ್ಥಾನ ಸೇರಿದಂತೆ ಕರಗ ಸಾಗುವ ಮಾರ್ಗದ ಉದ್ದಕ್ಕೂ ಪೊಲೀಸ್​ ಬಿಗಿ ಬಂದೋಬಸ್ತ್​​ ಮಾಡಲಾಗಿದೆ. ಕೇಂದ್ರ ವಿಭಾಗ ಡಿಸಿಪಿ ಶೇಖರ್ ನೇತೃತ್ವದಲ್ಲಿ ಏಳು ಜನ ಎಸಿಪಿ, 20 ಮಂದಿ ಇನ್​ಸ್ಪೆಕ್ಟರ್, 39 ಮಂದಿ ಪಿಎಸ್ಐ, 552 ಪೊಲೀಸ್​ ಸಿಬ್ಬಂದಿ ಸೇರಿದಂತೆ 8 ಕೆಎಸ್​ಆರ್​ಪಿ ತುಕಡಿಯನ್ನು ಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ವಿಶ್ವವಿಖ್ಯಾತ ಬೆಂಗಳೂರು ಹಸಿ ಕರಗ ಶಕ್ತ್ಯೋತ್ಸವ: ಭಕ್ತರಿಗೆ ದರ್ಶನ ನೀಡಿದ ದ್ರೌಪದಿ ದೇವಿ

ಬೆಂಗಳೂರು ಕರಗ ಇತಿಹಾಸ

ಬೆಂಗಳೂರು ಕರಗಕ್ಕೆ 8 ಶತಮಾನಗಳ ಇತಿಹಾಸವಿದೆ. ಕರಗಕ್ಕೆ ಕುಂಬ ಎಂಬ ಅರ್ಥವಿದೆ. ಕರಗದ ಒಂದೊಂದು ಅಕ್ಷರ ಒಂದೊಂದು ಸಂಕೇತ ಹೊಂದಿದೆ. ಕ ಎಂದರೆ ಕೈಯಿಂದ ಮುಟ್ಟದೆ, ರ ಎಂದರೆ ರುಂಡದ ಮೇಲೆ ಧರಿಸಿ, ಗ ಎಂದರೆ ಗತಿಸುವುದು ಅಂತ ವಿವರಣೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ