ಮೃತ ಇನ್ಸ್​ಪೆಕ್ಟರ್​ ನಂದೀಶ್​ ಸಸ್ಪೆಂಡ್​ ಆಗಿದ್ಯಾಕೆ? ಸೂಕ್ತ ಕಾರಣ ಬಿಚ್ಚಿಟ್ಟ ಗೃಹ ಸಚಿವ ಆರಗ ಜ್ಞಾನೇಂದ್ರ

| Updated By: ರಮೇಶ್ ಬಿ. ಜವಳಗೇರಾ

Updated on: Oct 29, 2022 | 3:53 PM

ಬೆಂಗಳೂರಿನ ಕೆ.ಆರ್.ಪುರಂ ಇನ್ಸ್​ಪೆಕ್ಟರ್ ನಂದೀಶ್ ಹೃದಯಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಆದ್ರೆ, ಅವರು ಸಾಯುವುದಕ್ಕೂ ಮುನ್ನ ಯಾಕೆ ಅಮಾನತ್ತುಗೊಂಡಿದ್ದರು? ಯಾವ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿತ್ತು? ಎನ್ನುವ ಬಗ್ಗೆ ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಕಾರಣ ಕೊಟ್ಟಿದ್ದಾರೆ.

ಮೃತ ಇನ್ಸ್​ಪೆಕ್ಟರ್​ ನಂದೀಶ್​ ಸಸ್ಪೆಂಡ್​ ಆಗಿದ್ಯಾಕೆ? ಸೂಕ್ತ ಕಾರಣ ಬಿಚ್ಚಿಟ್ಟ ಗೃಹ ಸಚಿವ ಆರಗ ಜ್ಞಾನೇಂದ್ರ
Arga Jnanendra And nandish
Follow us on

ಬೆಂಗಳೂರು: ಇತ್ತಿಚೇಗಷ್ಟೇ ಅಮಾನತುಗೊಂಡಿದ್ದ ಬೆಂಗಳೂರಿನ ಕೆ.ಆರ್.ಪುರಂ ಇನ್ಸ್​ಪೆಕ್ಟರ್ ನಂದೀಶ್ ಹೃದಯಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಆದ್ರೆ, ಇದೀಗ ನಂದೀಶ್ ಅವರನ್ನು ಯಾವ ಕಾರಣಕ್ಕೆ ಸಸ್ಪೆಂಡ್ ಮಾಡಲಾಗಿತ್ತು ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ಹಲರು ಹಲವು ರೀತಿಗಳಲ್ಲಿ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಕ್ಷುಲ್ಲಕ ಕಾರಣಕ್ಕೆ ನಂದೀಶ್ ಅವರನ್ನು ಅಮಾನತ್ತು ಮಾಡಿ ಮಾನಸಿಕವಾಗಿ ಹಿಂಸಿಸಿದ್ದಾರೆ ಎನ್ನುವ ಆರೋಪಗಳನ್ನು ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ನಂದೀಶ್ ಅಮಾನತ್ತು ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಸೂಕ್ತ ಕಾರಣವನ್ನೂ ಸಹ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಅಕ್ಟೋಬರ್ 29) ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಪಿಐ ನಂದೀಶ್​ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಮಾಹಿತಿ ಇದೆ. ಈಗ ಯಾವ್ಯಾವುದಕ್ಕೋ ಲಿಂಕ್​ ಮಾಡಿ ಮಾತಾಡುವುದು ಸರಿಯಲ್ಲ. ಕ್ಯಾಬರೆ, ಇಸ್ಪೀಟ್​ ಕ್ಲಬ್, ಕ್ಯಾಸಿನೋ ಬಂದಾಗಬೇಕೆಂದು ಸೂಚನೆ ನೀಡಲಾಗಿತ್ತು. ಕೆಲವು ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಓಪನ್​ ಮಾಡುವ ಕೆಲಸ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆ ಬಂದ್​ ಆಗಬೇಕೆಂದು ಸೂಚನೆ ನೀಡಲಾಗಿತ್ತು. ಅಕ್ರಮ ನಡೆಯುತ್ತಿದ್ರೆ ಸ್ಥಳೀಯ ಅಧಿಕಾರಿ ಹೊಣೆಮಾಡುವಂತೆ ಹೇಳಿದ್ದೆ. ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿಯಲ್ಲಿ ಸೂಡಾನ್​ ದೇಶದ 20 ಪ್ರಜೆಗಳು ಭಾಗವಹಿಸಿದ್ದರು. ಸಿಸಿಬಿ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಕಮಿಷನರ್,​ ನಂದೀಶ್ ಅವರನ್ನು​ ಅಮಾನತು ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ನನಗೆ ಮಾಹಿತಿ ನೀಡಿದ್ರು ಎಂದು ಸ್ಪಷ್ಟಪಡಿಸಿದರು.

ಮೃತ ಇನ್ಸ್​ಪೆಕ್ಟರ್​ ನಂದೀಶ್​ರನ್ನ ಟಾರ್ಗೆಟ್ ಮಾಡಿದ್ರಾ ಬೆಂಗಳೂರಿನ ಪ್ರಭಾವಿ ಸಚಿವ?

ಸೂಚನೆ ಕೊಟ್ಟಿದ್ದರೂ ಅಲ್ಲಿ ರೇವ್ ಪಾರ್ಟಿ ನಡೆಸಲಾಗ್ತಿತ್ತು. ಪಾರ್ಟಿಯಲ್ಲಿ ಸುಮಾರು 20 ಜನ ಸೂಡಾನ್ ಪ್ರಜೆಗಳಿದ್ದರು. ಸುಮಾರು 30ರಷ್ಟು ಹೆಣ್ಣು ಮಕ್ಕಳು ಕೂಡ ಇದ್ದರು. ಹೀಗಾಗಿ ಸಿಸಿಬಿ ರೈಡ್ ಮಾಡಿತ್ತು, ಅದರ ಹಿನ್ನೆಲೆಯಲ್ಲಿ ಕಮಿಷನರ್ ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ ಎಂದು ನಂದೀಶ್ ಸಸ್ಪೆಂಡ್​ ಸಮರ್ಥಿಸಿಕೊಂಡರು.

ಇದಕ್ಕೂ ಅವರ ಸಾವಿಗೂ ಯಾವುದೇ ರೀತಿಯ ಸಂಬಂಧ ಇದೆಯೋ ನನಗೆ ತಿಳಿದಿಲ್ಲ. ನಂದೀಶ್ ಅವರಿಗೆ ಚಿಕ್ಕ ಮಕ್ಕಳಿದ್ದಾರೆ, ಅವರ ಸಾವು ನನಗೂ ಬೇಸರ ತಂದಿದೆ. ಅನವಶ್ಯಕವಾಗಿ ಅಪಪ್ರಚಾರ ಮಾಡಬಾರದು. ಸತ್ಯ ಏನು ಅನ್ನೋದನ್ನು ತಿಳಿದುಕೊಳ್ಳಬೇಕು ಇಡೀ ಪ್ರಕರಣದ ವಿಚಾರಣೆ ಆಗಲಿದ್ದು, ಹಿರಿಯ ಅಧಿಕಾರಿಗಳ ಸ್ಷಷ್ಟನೆ ನೀಡುವಂತೆ ಕಮಿಷನರ್ ಗೆ ಸೂಚಿಸುತ್ತೇನೆ ಎಂದು ಹೇಳಿದರು.

ಎಂಟಿಬಿ ನಾಗರಾಜ್ ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂಬುದನ್ನು ಅವರನ್ನು ಕರೆದು ನಾನು ಮಾತನಾಡುತ್ತೇನೆ.
ನಾನು ಹೋಂ ಮಿನಿಸ್ಟ.ರ್ ಯಾವುದೇ ಅಪವಾದಗಳು ಬಾರದೇ ಇದ್ದ ಹಾಗೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ.
ನಮ್ಮ ಪೊಲೀಸ್ ಅಧಿಕಾರಿಗಳು ಟ್ರಾನ್ಸ್​ಫರ್​ಗೆ ದುಡ್ಡು ಕೊಟ್ಟು ಬಂದು ಬಳಿಕ ಹಣ ದುಡಿಯೋಕೆ ಹೋದರೆ ಇಡೀ ವ್ಯವಸ್ಥೆ ಗಬ್ಬೆದ್ದು ಹೋಗಲಿದೆ .ಹೀಗಾಗಿ ಬಿಗಿಯಾಗಿ ನಿಂತು ನಾನು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

Published On - 3:53 pm, Sat, 29 October 22