ವಿದೇಶಕ್ಕೆ ತೆರಳಲು ಮಾಜಿ ಸಚಿವ ರೋಷನ್ ಬೇಗ್‌ಗೆ ಷರತ್ತುಬದ್ಧ ಅನುಮತಿ ನೀಡಿದ ಕೋರ್ಟ್
ಐಎಂಎ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ವಿದೇಶಕ್ಕೆ ತೆರಳಲು ವಿಶೇಷ ನ್ಯಾಯಾಲಯ ಎಚ್ಚರಿಕೆಯೊಂದಿಗೆ ಅನುಮತಿ ಕೊಟ್ಟಿದೆ.
ಬೆಂಗಳೂರು: ಐಎಂಎ ಸಂಸ್ಥೆಯಿಂದ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ (IMA Case) ಸಿಲುಕೊಂಡಿರುವ ಮಾಜಿ ಸಚಿವ ರೋಷನ್ ಬೇಗ್‌ಗೆ (Roshan Baig) ವಿದೇಶಕ್ಕೆ ತೆರಳಲು ವಿಶೇಷ ಕೋರ್ಟ್ ಅನುಮತಿ ನೀಡಿದೆ. ನವೆಂಬರ್ 15ರಿಂದ 15 ದಿನಗಳ ವರೆಗೆ ಇರಾನ್‌ನ ಮಶಾದ್‌ಗೆ ತೆರಳಲು ನ್ಯಾಯಾಲಯ ಷರತ್ತುಬದ್ಧ ಅನುಮತಿ ಕೊಟ್ಟಿದೆ.
ಐಎಂಎ ಸಂಸ್ಥೆಯಿಂದ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ನಿಂದ ರೋಷನ್ ಬೇಗ್ ಜಾಮೀನು ಪಡೆದುಕೊಂಡಿದ್ದರು. ಆ ವೇಳೆ ಅನುಮತಿ ಇಲ್ಲದೇ ವಿದೇಶಕ್ಕೆ ಹೋಗದಂತೆ ಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅವರು ಇರಾನ್‌ನ ಮಶಾದ್‌ಗೆ ತೆರಳಲು ಅನುಮತಿ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು. ರೋಷನ್ ಬೇಗ್ ಮನವಿ ಪುರಸ್ಕರಿಸಿರುವ ವಿಶೇಷ ನ್ಯಾಯಾಲಯ ನವೆಂಬರ್ 15ರಿಂದ 15 ದಿನಗಳ ಪ್ರವಾಸಕ್ಕೆ ತೆರಳಲು ಅನುಮತಿ ಕೊಟ್ಟಿದೆ.
ವಿಮಾನ ಬೋರ್ಡಿಂಗ್ ಪಾಸ್ ಹಾಜರುಪಡಿಸಬೇಕು. ಮೊಬೈಲ್ ಸಂಖ್ಯೆ, ಪ್ರಯಾಣದ ವಿವರ ಸಲ್ಲಿಸಬೇಕು. ಹಿಂತಿರುಗಿದ ಬಳಿಕ ಪಾಸ್ ಪೋರ್ಟ್ ಮರಳಿಸಲು ಸೂಚನೆ ನೀಡಿದೆ. ಒಂದು ವೇಳೆ ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿ ಜನಪ್ರತಿನಿಧಿಗಳ ಕೋರ್ಟ್‌ನ ನ್ಯಾ.ಬಿ.ಜಯಂತ ಕುಮಾರ್ ಆದೇಶ ಹೊರಡಿಸಿದ್ದಾರೆ.
400 ಕೋಟಿ ರೂ. ಪಡೆದಿದ್ದ ಆರೋಪ
ರೋಷನ್ ಬೇಗ್ ಐಎಂಎ ಕಂಪನಿಯಿಂದ ಸುಮಾರು 400 ಕೋಟಿ ರೂಪಾಯಿ ಪಡೆದಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಿಬಿಐ ಅಧಿಕಾರಿಗಳೂ ಸಹ ತನಿಖೆ ನಡೆಸಿದ್ದರು. ಅಕ್ರಮ ಹಣದಿಂದ ಕುಟುಂಬಸ್ಥರ ಹೆಸರಲ್ಲಿ ಆಸ್ತಿ ಸಂಪಾದನೆ ಮಾಡಿರುವ ಆರೋಪವೂ ಕೇಳಿ ಬಂದಿದೆ.
ರಾಜ್ಯ ಸರ್ಕಾರ ಕೇವಲ 16 ಕೋಟಿ ಆಸ್ತಿಯನ್ನು ಮಾತ್ರ ಜಪ್ತಿ ಮಾಡಿತ್ತು. ಉಳಿದ ಹಣ ಅಕ್ರಮವಾಗಿ ಹೂಡಿಕೆ ಮಾಡಿರುವ ಆರೋಪ ಹಿನ್ನೆಲೆ, ಇಡಿ ಅಧಿಕಾರಿಗಳು ರೋಷನ್ ಬೇಗ್ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Sat, 29 October 22