AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ಇನ್ಸ್​ಪೆಕ್ಟರ್​ ನಂದೀಶ್​ರನ್ನ ಟಾರ್ಗೆಟ್ ಮಾಡಿದ್ರಾ ಬೆಂಗಳೂರಿನ ಪ್ರಭಾವಿ ಸಚಿವ?

ಕ್ಷುಲ್ಲಕ ಕಾರಣಕ್ಕೆ ಇತ್ತಿಚೇಗಷ್ಟೇ ಅಮಾನತಾಗಿ, ಹೃದಯಾಘಾತದಿಂದ ಮೃತಪಟ್ಟ ಇನ್ಸ್ ಪೆಕ್ಟರ್​ನನ್ನು ಟಾರ್ಗೆಟ್ ಮಾಡಿದ್ರಾ ಪ್ರಭಾವಿ ಸಚಿವ? ಇನ್ಸ್ ಪೆಕ್ಟರ್ ನಂದೀಶ್​ರನ್ನು ವ್ಯವಸ್ಥಿತ ಜಾಲದಲ್ಲಿ ಸಿಲುಕಿಸಿ ಅಮಾನತು ಮಾಡಲಾಗಿತ್ತೇ?

ಮೃತ ಇನ್ಸ್​ಪೆಕ್ಟರ್​ ನಂದೀಶ್​ರನ್ನ ಟಾರ್ಗೆಟ್ ಮಾಡಿದ್ರಾ ಬೆಂಗಳೂರಿನ ಪ್ರಭಾವಿ ಸಚಿವ?
inspector Nandish
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Oct 28, 2022 | 7:00 PM

Share

ಬೆಂಗಳೂರು: ಇತ್ತಿಚೇಗಷ್ಟೇ ಅಮಾನತುಗೊಂಡಿದ್ದ ಬೆಂಗಳೂರಿನ ಕೆ.ಆರ್.ಪುರಂ ಇನ್ಸ್ ಪೆಕ್ಟರ್ ನಂದೀಶ್ ಹೃದಯಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಫಿಟ್ ಅಂಡ್ ಫೈನ್​ನಿಂದ ಕೆ.ಆರ್.ಪುರಂ ಠಾಣೆಯಲ್ಲಿ ಆಕ್ಟೀವ್ ಆಗಿ ಕೆಲಸ ಮಾಡ್ತಿದ್ದ ನಂದೀಶ್ ಅಮಾನತು ಪ್ರಕರಣದ ಹಿಂದೆ ಖಾದಿ ಕೈವಾಡವಿದೆಯಾ ಅನ್ನೋ ಗುಮಾನಿ ಕೂಡ ವ್ಯಕ್ತವಾಗುತ್ತಿದೆ. ಈ ಗುಮಾನಿ ಪುಷ್ಟಿ ನೀಡುವಂತೆ ಅಂಶಗಳೇನು ಎನ್ನುವ ಡಿಟೇಲ್ಸ್  ಈ ಕೆಳಗಿನಂತಿದೆ ನೋಡಿ.

ಸಚಿವರ ಮುಲಾಜಿಗೂ ಒಳಗಾಗದೇ ಕೇಸ್ ದಾಖಲಿಸಿದ್ದ ನಂದೀಶ್

ಕಳೆದ ಕೆಲ ದಿ‌ನಗಳ ಹಿಂದೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನ ಸ್ಥಳೀಯರು ಹಿಗ್ಗಾ-ಮುಗ್ಗಾ ಮನಸೋ ಇಚ್ಚೆ ಥಳಿಸಿದ್ರು. ಆ ಬಳಿಕ ಹಲ್ಲೆಗೊಳಗಾದ ವ್ಯಕ್ತಿ ರಾಮಾಮೂರ್ತಿ ಠಾಣಾ ವ್ಯಾಪ್ತಿಯಲ್ಲೇ ಸಾವನ್ನಪ್ಪಿದ್ದನಂತೆ. ಆ ಬಳಿಕ ಅವನ ಮೃತದೇಹವನ್ನು ಕೆ.ಆರ್.ಪುರಂ ಠಾಣಾ ವ್ಯಾಪ್ತಿಗೆ ಒಳಪಡುವ ಪ್ರದೇಶಕ್ಕೆ ತಂದು ಬಿಟ್ಟುಹೋಗಿದ್ದಾರೆ. ವ್ಯಕ್ತಿ ಶವ ಕೆ.ಆರ್.ಪುರಂ ಠಾಣೆ ಪೊಲೀಸರಿಗೆ ಪತ್ತೆಯಾಗಿದ್ದು, ಪೊಲೀಸರು ಇನ್ಸ್ ಪೆಕ್ಟರ್ ನಂದೀಶ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಇನ್ಸ್ ಪೆಕ್ಟರ್ ನಂದೀಶ್ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ.

ಅಮಾನತ್ತಾಗಿದ್ದ ಇನ್ಸ್​ಪೆಕ್ಟರ್ ಹೃದಯಾಘಾತದಿಂದ ಸಾವು

ಈ ವೇಳೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಗ್ಯಾಂಗ್ ನಲ್ಲಿದ್ದ ಓರ್ವ ವ್ಯಕ್ತಿ ಪ್ರಭಾವಿ ಸಚಿವನ ಆಪ್ತನಾಗಿದ್ದು, ಕೇಸ್ ದಾಖಲಿಸದಂತೆ ರಾಜಕೀಯವಾಗಿ ಒತ್ತಡ ಹೇರಿದ್ದಾರೆ‌. ಆದ್ರೆ ಈ ಯಾವ ಒತ್ತಡಗಳಿಗೂ ಬಗ್ಗದ ಇನ್ಸ್ ಪೆಕ್ಟರ್ ಮೃತ ವ್ಯಕ್ತಿ ಮೃತದೇಹ ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು FIR ದಾಖಲಿಸಿ ತನಿಖೆ ಕೈಗೊಳ್ಳಲೆಬೇಕು ಎಂದು ನಿರ್ಧರಿಸಿ ಯಾವ ಮುಲಾಜಿಗೂ ಒಳಗಾಗದೇ ಕೇಸ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ನಂದೀಶ್ ಸಿಲುಕಿಸಲು ವ್ಯೂಹ ರಚಿಸಿದ್ದ ಪ್ರಭಾವಿ ಸಚಿವ?

ಒತ್ತಡ ಹೇರಿದ್ರು ಕೇಸ್ ದಾಖಲಿಸಿದ ಹಿನ್ನೆಲೆ ಇದೇ ಘಟನೆ ಪ್ರಭಾವಿ ಸಚಿವನ ನಿದ್ದೆಗೆಡಿಸಿದೆ, ತನ್ನ ಅಣತಿಯಂತೆ ಕಾರ್ಯನಿರ್ವಹಿಸದ ಪೊಲೀಸ್ ಅಧಿಕಾರಿ ಮೇಲೆ ತನ್ನದೇ ವ್ಯೂಹ ರಚಿಸಿ, ಒಳಸಂಚು ನಡೆಸಲು ಶುರುಮಾಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ಅವಧಿ ಮೀರಿ ವ್ಯಾಪಾರ ವಹಿವಾಟು ನಡೆಸ್ತಿದ್ದ ಪಬ್ ವೊಂದರ ಮೇಲೆ ಸಿಸಿಬಿ ದಾಳಿಯಾಗುವಂತೆ ಮಾಹಿತಿ ನೀಡಿದ್ದಾರೆ. ಸಿಸಿಬಿ ದಾಳಿ ಬಳಿಕ ವರದಿಯನ್ನು ಕೂಡ ನೀಡಲಾಗಿರುವುದು ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸುವಂತೆ ಮಾಡಿದೆ.

ಪೊಲೀಸ್ ಇನ್ಸ್ಪೆಕ್ಟರ್ ಹೃದಯಾಘಾತ ಪ್ರಕರಣ: ಕಾಂಗ್ರೆಸ್​ ನಾಯಕ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ

ಸಾಮಾನ್ಯವಾಗಿ ನಗರದ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ನಿಗದಿತ ಅವಧಿಗಿಂತ ಹೆಚ್ಚಾಗಿ ಬಾರ್ ಮತ್ತು ಕ್ಲಬ್ & ಪಬ್ ಗಳನ್ನ ತೆರೆದಿದ್ದರೆ ವ್ಯಾಪಾರ ವಹಿವಾಟು ನಡೆಸ್ತಿದ್ದರೆ ಹಿರಿಯ ಪೊಲೀಸ್ ಅಧಿಕಾರಿಗಳು ಸಂಬಂಧಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಕರೆಸಿ ಎಚ್ಚರಿಕೆ ಕೊಡುವುದು, ಕಾರಣ ಕೇಳಿ ನೋಟಿಸ್ ಜಾರಿ ಮಾಡೋದು ಮಾಮೂಲಿ. ಆದರಂತೆ ಈ ಪ್ರಕರಣದಲ್ಲೂ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿ ಇದೇ ಮಾದರಿ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಆದ್ರೆ ನಗರ ಪೊಲೀಸ್ ಆಯುಕ್ತರು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಕ್ತಿದೆ. ಇದೇ ಕಾರಣ ನೆಪ ಮಾಡಿಕೊಂಡು ಇನ್ಸ್ ಪೆಕ್ಟರ್ ನಂದೀಶ್ ವಿರುದ್ದ ಅಮಾನತಿನ ಅಸ್ತ್ರ ಬೀಸಿದ್ದಾರೆ. ಸಚಿವನ ಅಣತಿಯಂತೆ ಕೆಲಸ ಮಾಡದಕ್ಕೆ ಟಾರ್ಗೆಟ್?

ಮಹದೇವಪುರ ಠಾಣೆಗೆ ಇನ್ಸ್ ಪೆಕ್ಟರ್ ಆಗಿ ಬರಲು ಯತ್ನಿಸಿದ್ದ ನಂದೀಶ್, ಕೊನೆಗೆ ಬರೋಬ್ಬರಿ 70 ಲಕ್ಷ ಲಂಚ ಕೊಟ್ಟು ಕೆ.ಆರ್.ಪುರಂ ಇನ್ಸ್ ಪೆಕ್ಟರ್ ಹುದ್ದೆ ಪಡೆದುಕೊಂಡಿದ್ದರು. ಆದಾಗ್ಯೂ ಬೆಂಗಳೂರಿನ ಪ್ರಭಾವಿ ಸಚಿವನ ಅಣತಿಯಂತೆ ಕೆಲಸ ಮಾಡದ ಹಿನ್ನಲೆ ಟಾರ್ಗೇಟ್ ಆಗಿದ್ದರು. ಈ ಹಿನ್ನಲೆ ಇದೇ ನೆಪಮಾಡಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತಂದು ಕ್ಷುಲ್ಲಕ ಕಾರಣಕ್ಕೆ ಠಾಣಾಧಿಕಾರಿ ಇನ್ಸ್ ಪೆಕ್ಟರ್ ಅಮಾನತುಮಾಡಿಸಲಾಗಿದೆ ಅನ್ನೋ ಮಾತುಗಳು ಕೇಳಿಬರ್ತಿದೆ. ಪ್ರಭಾವಿ ಸಚಿವನ ಅಣತಿಯಂತೆ ಪೊಲೀಸ್ ಇನ್ಸ್ ಪೆಕ್ಟರ್ ನಡೆದುಕೊಳ್ಳದಿರುವುದು ಮುಂದಿನ ವಿಧಾನಸಭಾ ಎಲೆಕ್ಷನ್ ವೇಳೆಯೂ ಸಚಿವರೊಂದಿಗೆ ಕೈಜೋಡಿಸಿ ಚುನಾವಣಾ ಸಮಯದಲ್ಲಿ ನೆರವಾಗುವ ಸಾಧ್ಯತೆಗಳಿಲ್ಲ ಅನ್ನೋದನ್ನ ಅರಿತ ಬೆಂಗಳೂರಿನ ಆ ಪ್ರಭಾವಿ ಸಚಿವ ವ್ಯೂಹ ರಚಿಸಿ ಕೆ.ಆರ್.ಪುರಂ ಇನ್ಸ್ ಪೆಕ್ಟರ್ ನಂದೀಶ್ ವ್ಯವಸ್ಥಿತ ಜಾಲದಲ್ಲಿ ಸಿಲುಕಿಸಿ ಅಮಾನತು ಮಾಡಿದ್ದಾರೆಂದು ಹೇಳಲಾಗಿದೆ.

ಹಿರಿಯ ಅಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣ: ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಮೃತ ಇನ್ಸ್​ಪೆಕ್ಟರ್​ ನಂದೀಶ್ ಕುಟುಂಬಸ್ಥರ ಆಕ್ರೋಶ!

ಅಮಾನತು ಮಾಡುವಾಗ್ಲೂ ಕೆ.ಆರ್.ಪುರಂ ಇನ್ಸ್ ಪೆಕ್ಟರ್ ನಂದೀಶ್ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರನ್ನ ಇನ್ನಿಲ್ಲದಂತೆ ಮನವಿ ಮಾಡಿ ವಸ್ತುಸ್ಥಿತಿ ಅರ್ಥಮಾಡಿಸುವ ಪ್ರಯತ್ನ ಮಾಡಿದ್ದರು ಏನು ಪ್ರಯೋಜನವಾಗಿಲ್ಲ. ಅದೇನೆ ಇರಲಿ ರಾಜಕಾರಣಿಗಳ ಅಣತಿಯಂತೆ ಕೆಲಸ ನಿರ್ವಹಿಸಬೇಕಾದ ಒತ್ತಡದಲ್ಲಿ ಪೊಲೀಸ್ ಅಧಿಕಾರಿಗಳಿದ್ದು‌‌. ಒಂದು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮೇಲೆ ಹೃದಯಾಘಾತಕ್ಕೀಡಾಗುಷ್ಟು ಒತ್ತಡ ಹೇರುತ್ತಿರುವುದು ಇಡೀ ಪೊಲೀಸ್ ಇಲಾಖೆಯನ್ನ ಕಾರ್ಯನಿರ್ವಹಿಸ್ತಿರುವ ಪೊಲೀಸರ ಆತ್ಮವಿಶ್ವಾಸ ಕುಗ್ಗಿಸುವಂತೆ ಮಾಡ್ತಿರುವುದು ಸುಳ್ಳಲ್ಲ.

ಇನ್ನಾದ್ರೂ ಇಂತಹ ವ್ಯವಸ್ಥಿತ ವ್ಯೂಹದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನ ಸಿಲುಕಿಸಿ ಸಸ್ಪೆಂಡ್ ಮಾಡುವ ಪ್ರವೃತ್ತಿಗೆ ಬ್ರೇಕ್ ಬೀಳುತ್ತಾ…? ನಗರದಲ್ಲಿ ವರ್ಷವೊಂದಕ್ಕೆ ಸೇಲ್ ಗೆ ಇರುವ ಕೋಟಿ-ಕೋಟಿ, ಲಕ್ಷ-ಲಕ್ಷ ಲೆಕ್ಕದಲ್ಲಿ ಹಣಕ್ಕೆ ಬಿಕರಿಗಿರುವ ನಗರದ ಠಾಣೆ ಇನ್ಸ್ ಪೆಕ್ಟರ್ ಹುದ್ದೆಗಳ ಹೀನಾಯ ಸ್ಥಿತಿಗೆ ಇತಿಶ್ರೀ ಹಾಡುವ ದಕ್ಷ ಪೊಲೀಸ್ ವ್ಯವಸ್ಥೆ ರೂಪುಗೊಳ್ಳುತ್ತಾ, ಕಾದುನೋಡಬೇಕಿದೆ.

Published On - 6:59 pm, Fri, 28 October 22