ಪೊಲೀಸ್ ಇನ್ಸ್ಪೆಕ್ಟರ್ ಹೃದಯಾಘಾತ ಪ್ರಕರಣ: ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ
ಇನ್ಸ್ಪೆಕ್ಟರ್ ನಂದೀಶ್ ಸಾವಿನ ಪ್ರಕರಣ ತನಿಖೆ ಆಗಬೇಕು. ಅದು ಒಂದು ಬಾರ್ ವಿಚಾರಕ್ಕೆ ಅಮಾನತು ಮಾಡುವಷ್ಟೇ ನಡೆದಿಲ್ಲ. ಇದರ ಹಿಂದೆ ಇನ್ನೂ ಬೇರೇನೋ ಇದ್ದಂತಿದೆ ಎಂದಿದ್ದಾರೆ ಬಿಕೆ ಹರಿಪ್ರಸಾದ್
ಬೆಂಗಳೂರು: ಪೊಲೀಸ್ ಇನ್ಸ್ಪೆಕ್ಟರ್ ನಂದೀಶ್ ಹೃದಯಾಘಾತಕ್ಕೆ (heart attack) ಬಲಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ (bk hariprasad) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇನ್ಸ್ಪೆಕ್ಟರ್ ನಂದೀಶ್ ಸಾವಿನ ಪ್ರಕರಣ ತನಿಖೆ ಆಗಬೇಕು. ಅದು ಒಂದು ಬಾರ್ ವಿಚಾರಕ್ಕೆ ಅಮಾನತು ಮಾಡುವಷ್ಟೇ ನಡೆದಿಲ್ಲ. ಇದರ ಹಿಂದೆ ಇನ್ನೂ ಬೇರೇನೋ ಇದ್ದಂತಿದೆ ಎಂದು ಗುಮಾನಿಪಟ್ಟಿದ್ದಾರೆ.
ನಾನು ಮೊದಲೇ ಹೇಳಿದ್ದೆ: ಒಂದು ಪೋಸ್ಟಿಂಗ್ ಗೆ 70 ಲಕ್ಷ ರೂಪಾಯಿಯಿಂದ 2 ಕೋಟಿ ತನಕ ಹಣದ ವಿಚಾರ ಇದೆ. ಇದು ಬಿಜೆಪಿಯ ಸಂಸ್ಕೃತಿ. ಇದು ಗಂಭೀರವಾದ ವಿಚಾರವಾಗಿದೆ. ನಂದೀಶ್ ಅಮಾನತಿನ ಹಿಂದೆ ಅಷ್ಟೇ ಇದ್ದಂತೆ ಇಲ್ಲ, ಅದಕ್ಕಿಂತ ಹೆಚ್ಚಿನದು ಬೇರೆನೋ ಇದೆ. ಹೀಗಾಗಿ ಅವರ ಸಾವಿನ ತನಿಖೆ ಆಗಲೇಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಸಸ್ಪೆಂಡ್ ಆಗಿದ್ದ ಬೆಂಗಳೂರಿನ K.R.ಪುರ ಠಾಣೆ ಇನ್ಸ್ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಗುರುವಾರ ಸಾವನ್ನಪ್ಪಿದ್ದಾರೆ. ಇನ್ಸ್ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಕೆ.ಆರ್.ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಂದೀಶ್ ಮೈಸೂರಿನ ಹುಣಸೂರು ಮೂಲದವರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019 ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕಳೆದ ವಾರವಷ್ಟೇ ಇನ್ಸ್ಪೆಕ್ಟರ್ ನಂದೀಶ್ ಸಸ್ಪೆಂಡ್ ಆಗಿದ್ದರು. ಏರಿಯಾದಲ್ಲಿ ಅವಧಿ ಮೀರಿ ಪಬ್ ನಡೆಸಲು ಅವಕಾಶ ನೀಡಿದ್ದಕ್ಕೆ ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶಿಸಿದ್ದರು.
ಬಿಜೆಪಿಯವರು ದಿಕ್ಕಾಪಾಲಾಗಿದ್ದಾರೆ: ಬಿ.ಕೆ. ಹರಿಪ್ರಸಾದ್
ಡಿಕೆ ಶಿವಕುಮಾರ್ ಒಂದು ದಿಕ್ಕು, ಸಿದ್ದರಾಮಯ್ಯ ಇನ್ನೊಂದು ದಿಕ್ಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಹೌದು, ಕಾಂಗ್ರೆಸ್ನಲ್ಲಿ ಎರಡು ದಿಕ್ಕು ಇದೆ ಎಂದು ಒಪ್ಪಿಕೊಳ್ಳೋಣ. ಬಿಜೆಪಿಯವರು ದಿಕ್ಕಾಪಾಲಾಗಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ಕಟಕಿಯಾಡಿದ್ದಾರೆ. ಬಿಜೆಪಿಯ ಒಬ್ಬೊಬ್ಬ ನಾಯಕ ಒಂದೊಂದು ದಿಕ್ಕಿನಲ್ಲಿ ಇದ್ದಾರೆ ಎಂದು ಬೆಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಟಾಂಗ್ ಕೊಟ್ಟಿದ್ದಾರೆ.
Published On - 1:51 pm, Fri, 28 October 22