AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರೇಬಿಕ್ ಶಾಲೆಗಳಿಂದ ಶಿಕ್ಷಣ ಇಲಾಖೆ ಸೂಚನೆ ಉಲ್ಲಂಘನೆ: ಸಮಗ್ರ ವರದಿ ಸಲ್ಲಿಸಲು ಶಿಕ್ಷಣ ಸಚಿವ ಬಿಸಿ ನಾಗೇಶ್ ಸೂಚನೆ

ಶಿಕ್ಷಣವು ಎಲ್ಲ ಮಕ್ಕಳ ಹಕ್ಕಾಗಿದೆ. ಧರ್ಮದ ಕಾರಣಕ್ಕೆ ಯಾವುದೇ ಮಗು ಉತ್ತಮ ಶಿಕ್ಷಣದಿಂದ ವಂಚಿತವಾಗಬಾರದು’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಅರೇಬಿಕ್ ಶಾಲೆಗಳಿಂದ ಶಿಕ್ಷಣ ಇಲಾಖೆ ಸೂಚನೆ ಉಲ್ಲಂಘನೆ: ಸಮಗ್ರ ವರದಿ ಸಲ್ಲಿಸಲು ಶಿಕ್ಷಣ ಸಚಿವ ಬಿಸಿ ನಾಗೇಶ್ ಸೂಚನೆ
ಅರೇಬಿಕ್ ಶಾಲೆ (ಪ್ರಾತಿನಿಧಿಕ ಚಿತ್ರ). ಬಿ.ಸಿ.ನಾಗೇಶ್ (ಬಲಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 28, 2022 | 10:47 AM

Share

ಬೆಂಗಳೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 200 ಅರೇಬಿಕ್ ಶಾಲೆಗಳ (ಮದರಸಾ) ಸ್ಥಿತಿಗತಿ ಹಾಗೂ ಕಾರ್ಯನಿರ್ವಹಣೆ ಕುರಿತು ಶೀಘ್ರ ವರದಿ ಸಲ್ಲಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚಿಸಿದ್ದಾರೆ. ಈ ಕುರಿತು ಮಡಿಕೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ಅರೇಬಿಕ್ ಶಾಲೆಗಳನ್ನು ನಿಯಮಗಳಿಗೆ ಅನುಸಾರವಾಗಿ ನಡೆಸುತ್ತಿಲ್ಲ. ಭಾಷೆ ಮತ್ತು ವಿಜ್ಞಾನದ ಕಲಿಕೆಯೂ ಸಮರ್ಪಕ ರೀತಿಯಲ್ಲಿ ಇಲ್ಲ. ಈ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮಗ್ರವಾಗಿ ಪರಿಶೀಲಿಸುವಂತೆ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಅವರು ಹೇಳಿದರು.

‘ಮದರಸಾಗಳಲ್ಲಿ ಕೆಲವೇ ಶಾಲೆಗಳು ಇಲಾಖೆಗಳು ಸೂಚಿಸಿರುವ ಪಠ್ಯಕ್ರಮ ಅನುಸರಿಸುತ್ತಿವೆ. ಆದರೆ ಬಹುತೇಕ ಶಾಲೆಗಳು ಶಿಕ್ಷಣ ಇಲಾಖೆ ಸೂಚನೆಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಮಗ್ರ ಪರಿಶೀಲನೆಯ ನಂತರ ವಾಸ್ತವ ಚಿತ್ರಣ ಏನೆಂದು ಸ್ಪಷ್ಟವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು. ‘ಕರ್ನಾಟಕದಲ್ಲಿ 106 ಅನುದಾನಿತ ಹಾಗೂ 80 ಅನುದಾನರಹಿತ ಅರೇಬಿಕ್ ಶಾಲೆಗಳಿವೆ. ಈ ಶಾಲೆಗಳಲ್ಲಿ ಎಷ್ಟರಮಟ್ಟಿಗೆ ಇಲಾಖೆಯ ಸೂಚನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎನ್ನುವುದನ್ನು ಸಮೀಕ್ಷೆಯ ವೇಳೆ ಪರಿಶೀಲಿಸಲಾಗುವುದು’ ಎಂದು ಅವರು ವಿವರಿಸಿದರು.

‘ಕರ್ನಾಟಕದ ಹಲವು ಅರೇಬಿಕ್‌ ಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್​ನಂಥ ಭಾಷೆಗಳು ಹಾಗೂ ಗಣಿತ-ವಿಜ್ಞಾನದ ಬೋಧನೆ-ಕಲಿಕೆ ಸಮರ್ಪಕ ರೀತಿಯಲ್ಲಿ ಇಲ್ಲ ಎಂಬ ಅನುಮಾನವನ್ನು ಹಲವು ವ್ಯಕ್ತಪಡಿಸಿದ್ದಾರೆ. ಅರೇಬಿಕ್ ಶಾಲೆಗಳಿಗೆ ಪ್ರತಿವರ್ಷ ಸುಮಾರು 27 ಸಾವಿರ ಮಕ್ಕಳು ದಾಖಲಾಗುತ್ತಾರೆ. ದಾಖಲೆಗಳಲ್ಲಿ ಕಾಣಿಸುವ ಈ ದಾಖಲಾತಿ ಸಂಖ್ಯೆಗೂ, ವಾಸ್ತವವಾಗಿ ಶಾಲೆಗಳಿಗೆ ಹಾಜರಾಗುವ ಮಕ್ಕಳ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ. ಶಿಕ್ಷಣವು ಎಲ್ಲ ಮಕ್ಕಳ ಹಕ್ಕಾಗಿದೆ. ಧರ್ಮದ ಕಾರಣಕ್ಕೆ ಯಾವುದೇ ಮಗು ಉತ್ತಮ ಶಿಕ್ಷಣದಿಂದ ವಂಚಿತವಾಗಬಾರದು’ ಎಂದು ಅವರು ತಮ್ಮ ನಿಲುವು ಸ್ಪಷ್ಟಪಡಿಸಿದರು.

‘ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯದ ಕಾರಣ ಮದರಸಾಗಳಲ್ಲಿ ಓದಿದ ಮಕ್ಕಳು ಇತರ ಶಾಲೆಗಳಲ್ಲಿ ಓದಿದ ಮಕ್ಕಳೊಂದಿಗೆ ಶೈಕ್ಷಣಿಕವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಪ್ರಾಥಮಿಕ ಸಮೀಕ್ಷೆಯ ವೇಳೆ ಲಭ್ಯವಾದ ಮಾಹಿತಿಯನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.

Published On - 10:47 am, Fri, 28 October 22