ಬೆಂಗಳೂರು: ಸಿಲಿಕಾನ್ ಸಿಟಿ ಸಮಸ್ಯೆಗಳ ಆಗರವಾಗುತ್ತಿದೆ. ಜನ ಜೀವದ ಭಯದಲ್ಲೇ ವಾಹನ ಓಡಿಸುವಂತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಹೆಣ್ಣೂರು ಕ್ರಾಸ್ ಬಳಿ ಮೆಟ್ರೋ ಪಿಲ್ಲರ್ ದುರಂತ ಸಂಭವಿಸಿ ತಾಯಿ-ಮಗ ಮೃತಪಟ್ಟಿದ್ದರು. ಈ ಘಟನೆ ನಡೆದು ಕೇವಲ ಒಂದು ವಾರವಷ್ಟೇ ಆಗಿದೆ. ಈಗ ನಗರದಲ್ಲಿ ಮತ್ತೆ ಇಂತಹ ದುರ್ಘಟನೆಗಳು ಸಂಭವಿಸುವ ಭೀತಿ ಹೆಚ್ಚಿದೆ. ಬೆಂಗಳೂರಿನ ಹೆಣ್ಣೂರು-ಕೊತ್ತನೂರು ಮುಖ್ಯ ರಸ್ತೆಯಲ್ಲಿ ಸಂಪೂರ್ಣವಾಗಿ ರಸ್ತೆಗೆ ವಿದ್ಯುತ್ ಕಂಬ ವಾಲಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಜೀವ ಭಯದಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮಹಾಲಕ್ಷ್ಮೀ ಲೇಔಟ್ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಳಪೆ ಕಾಮಗಾರಿಯಿಂದ ಏಕಾಏಕಿ ರಸ್ತೆ ಕುಸಿದಿದೆ.
ಮೆಟ್ರೋ ಪಿಲ್ಲರ್ ದುರಂತ ಬಳಿಕ ಈಗ ಬೆಸ್ಕಾಂ ಸರದಿ. ರಸ್ತೆಯಲ್ಲಿ ವಿದ್ಯುತ್ ಕಂಬ ಸಂಪೂರ್ಣವಾಗಿ ವಾಲಿದ್ರು ಬೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ವಿದ್ಯುತ್ ಕಂಬ ಸಂಪೂರ್ಣವಾಗಿ ರಸ್ತೆಗೆ ವಾಲಿದೆ. ವಾಲಿರುವ ಕಂಬದ ನಡುವೆಯೇ ವಾಹನ ಸಂಚಾರವಾಗುತ್ತಿದೆ. ಬೆಸ್ಕಾಂ ನಿರ್ಲಕ್ಷ್ಯ ದಿಂದ ವಾಹನ ಸವಾರರಿಗೆ ಜೀವ ಭಯ ಶುರುವಾಗಿದೆ. ಬೆಸ್ಕಾಂ ನಿರ್ಲಕ್ಷ್ಯಕ್ಕೆ ಸ್ಥಳೀಯರು, ವಾಹನ ಸವಾರರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ರಾಡ್ಗಳು ಬಿದ್ದು ತಾಯಿ ಮಗನ ಸಾವು ಪ್ರಕರಣ; ಮುಖ್ಯ ಎಂಜಿನಿಯರ್ ಮೊರೆ ಹೋದ ಖಾಕಿ
ಒಂದು ಕಡೆ ರಸ್ತೆಗೆ ವಿದ್ಯುತ್ ಕಂಬ ವಾಲಿದ್ರೆ ಮತ್ತೊಂದು ಕಡೆ ರಸ್ತೆಗಳೇ ಕುಸಿಯುತ್ತಿವೆ. ಕರ್ನಾಟಕ ಚುನಾವಣೆ ಹೊಸ್ತಿಲಲ್ಲಿದೆ ಎಂದು ಸರ್ಕಾರ ಕಾಮಗಾರಿ ಚುರುಕುಗೊಳಿಸಿದೆ. ಆದ್ರೆ ಅವುಗಳ ಕಳಪೆ ಕಾಮಗಾರಿ ಕೂಡ ಅಷ್ಟೇ ಬೇಗವಾಗಿ ಬಯಲಾಗುತ್ತಿದೆ. ನಗರದ ಮಹಾಲಕ್ಷ್ಮೀ ಲೇಔಟ್ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಳಪೆ ಕಾಮಗಾರಿಯಿಂದ ಏಕಾಏಕಿ ರಸ್ತೆ ಕುಸಿದಿದೆ. ಆದ್ರೆ ಗುಂಡಿ ಬಿದ್ದ ಸ್ಥಳದಲ್ಲಿ ಬಿಬಿಎಂಪಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ 2 ದಿನಗಳ ಹಿಂದೆ ಬಿಬಿಎಂಪಿ ರಸ್ತೆಗೆ ಟಾರ್ ಹಾಕಿತ್ತು. ಕೇವಲ ಎರಡು ದಿನದಲ್ಲೇ ರಸ್ತೆ ಕುಸಿದು ಬಿದ್ದಿದೆ. ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಪೈಪ್ಲೈನ್ ಹಾದು ಹೋಗಿರುವ ಜಾಗದಲ್ಲೇ ಘಟನೆ ಸಂಭವಿಸಿದೆ. ಇಂದು ಬೆಳಗ್ಗೆ 7.30ಕ್ಕೆ ದೊಡ್ಡಗಾತ್ರದ ವಾಹನ ಸಂಚಾರಿಸಿದ್ದು ಮೂರೂವರೆ ಅಡಿ ಆಳಕ್ಕೆ ರಸ್ತೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಇನ್ನು ರಸ್ತೆ ಕುಸಿದ ಪರಿಣಾಮ ಜಲಮಂಡಳಿಯ ಪೈಪ್ ಕಟ್ ಆಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:05 pm, Tue, 17 January 23