Bengaluru News: ಓಲ್ಡ್ ಏರ್ಪೋರ್ಟ್-ವೈಟ್ಫೀಲ್ಡ್ ಸಿಗ್ನಲ್ ಫ್ರೀ ಕಾರಿಡಾರ್ ಸಂಚಾರಕ್ಕೆ ಸಿದ್ಧ
ವೆಲ್ಲಾರ ಜಂಕ್ಷನ್ನಿಂದ ವೈಟ್ಫೀಲ್ಡ್ನ ಹೋಪ್ಫಾರ್ಮ್ ಜಂಕ್ಷನ್ ಅನ್ನು ಇದು ಸಂಪರ್ಕಿಸಲಿದೆ.
ಬೆಂಗಳೂರು: ಎಚ್ಎಎಲ್ ಓಲ್ಡ್ ಏರ್ಪೋರ್ಟ್ ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಬಳಿಯ ಅಂಡರ್ಪಾಸ್ ಇದೇ ಮಾಸಾಂತ್ಯಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ. ಬಿಬಿಎಂಪಿಯ (Bruhat Bengaluru Mahanagara Palike – BBMP) ರಸ್ತೆ ವಿಭಾಗವು (Road Infrastructure Department) ಕಳೆದ 7 ವರ್ಷಗಳಿಂದ ಹಲವು ಗಡುವುಗಳನ್ನು ಮೀರಿದ್ದು, ಸಾಧ್ಯವಾದಷ್ಟೂ ಬೇಗ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ. ಈ ಯೋಜನೆಗಾಗಿ ಮುಖ್ಯಮಂತ್ರಿ ನಗರೋತ್ಥಾನ ನಿಧಿಯ ₹ 19.5 ಕೋಟಿ ಬಳಸಲಾಗಿದೆ. ಈ ಯೋಜನೆಯಡಿ ಮೂರು ಸಿಗ್ನಲ್ ಮುಕ್ತ ಕಾರಿಡಾರ್ಗಳನ್ನು ರೂಪಿಸುವ ಪ್ರಯತ್ನ ನಡೆಯುತ್ತಿದೆ. ವೆಲ್ಲಾರ ಜಂಕ್ಷನ್ನಿಂದ ವೈಟ್ಫೀಲ್ಡ್ನ ಹೋಪ್ಫಾರ್ಮ್ ಜಂಕ್ಷನ್ ಅನ್ನು ಇದು ಸಂಪರ್ಕಿಸಲಿದೆ. ಎಚ್ಎಎಲ್ ಅಂಡರ್ಪಾಸ್ ಹೊರತುಪಡಿಸಿದರೆ, ಈ ಮಾರ್ಗದಲ್ಲಿ ಇನ್ನೂ ಎರಡು (ಕುಂದಲಹಳ್ಳಿ ಮತ್ತು ವಿಂಡ್ ಟನಲ್ ಜಂಕ್ಷನ್) ಅಂಡರ್ಪಾಸ್ಗಳಿವೆ.
ಮಾರತ್ಹಳ್ಳಿ ಕಡೆಗೆ ತೆರಳುವ ವಾಹನ ಸವಾರರಿಗೆ ಸುರಂಜನ್ ದಾಸ್ ಜಂಕ್ಷನ್ ಒಂದು ವರದಾನವಾಗಿದೆ. ವೈಟ್ಫೀಲ್ಡ್ ಮತ್ತು ದೊಮ್ಮಲೂರು ಮಾರ್ಗದಿಂದ ಬರುವ ವಾಹನಗಳು ಸಿಗ್ನಲ್ಗಾಗಿ ಅಥವಾ ಓಲ್ಡ್ ಮದ್ರಾಸ್ ರಸ್ತೆಯ ಟ್ರಾಫಿಕ್ನಿಂದ ಕಾಯಬೇಕಿಲ್ಲ. ಈ ವಾಹನಗಳು ಸುಲಭವಾಗಿ ಎಚ್ಎಎಲ್ ಮುಖ್ಯದ್ವಾರದ ಕಡೆಗೆ ತೆರಳಬಹುದಾಗಿದೆ. ಮಾರತ್ತಹಳ್ಳಿಯಿಂದ ಬರುವ ವಾಹನಗಳಿಗೆ ಸುರಂಜನ್ ದಾಸ್ ರಸ್ತೆಗೆ ತೆರಳಲು ಮುಕ್ತ ಬಲ ತಿರುವು (Free Right Turn) ಕಲ್ಪಿಸಲಾಗಿದೆ.
ಜನವರಿ 15ಕ್ಕೆ ಈ ಅಂಡರ್ಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಘೋಷಿಸಿದ್ದರು. ಆದರೆ ಈ ಗಡುವಿನ ಒಳಗೂ ಸಹ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಾಗಿರಲಿಲ್ಲ. ಕಾಮಗಾರಿ ತಡವಾಗಲು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆದ ಸಮಸ್ಯೆ, ಭಾರೀ ಮಳೆಯಿಂದ ಉಂಟಾದ ಪ್ರವಾಹ, ಅಂಡರ್ಪಾಸ್ಗಳಲ್ಲಿ ಕಟ್ಟಿಕೊಂಡ ಹೂಳು ಮುಖ್ಯ ಕಾರಣ ಎಂದು ಬಿಬಿಎಂಪಿ ಹೇಳಿತ್ತು.
ಬಿಬಿಎಂಪಿ ಇತ್ತೀಚೆಗಷ್ಟೇ ಕುಂದಲಹಳ್ಳಿ ಅಂಡರ್ಪಾಸ್ ಸಂಚಾರಕ್ಕೆ ಮುಕ್ತಗೊಳಿಸಿತ್ತು. ಇದೂ ಸಹ ಸಿಗ್ನಲ್ ಫ್ರೀ ಕಾರಿಡಾರ್ನ ಭಾಗವೇ ಆಗಿದೆ. ವಿಂಡ್ ಟನಲ್ ಜಂಕ್ಷನ್ ಅಂಡರ್ಪಾಸ್ ಸಹ ಇನ್ನು ಕೆಲ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನಂತರ ಸಿಗ್ನಲ್ ಫ್ರೀ ಕಾರಿಡಾರ್ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗದಂತೆ ಆಗಲಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಂದಲಹಳ್ಳಿ ಅಂಡರ್ಪಾಸ್ ಅನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಸಂಚಾರಕ್ಕೆ ಮುಕ್ತವಾದ ಕೇವಲ 4 ತಿಂಗಳಲ್ಲಿ ಕಾಮಗಾರಿಯ ಲೋಪಗಳು ಬೆಳಕಿಗೆ ಬಂದಿದ್ದರಿಂದ ವಿವಾದವೂ ಉಂಟಾಗಿತ್ತು.
HAL underpass closer to completion after 7 Yrs. Truly appreciate the leadership & perseverance of BBMP Chief Commissioner who relentlessly pursued these never ending infra projects to completion. Thank you Tushar.
@BBMPCOMM @CMofKarnataka @TVMohandasPai pic.twitter.com/gYJgd8Wcgz
— RK Misra (@rk_misra) December 30, 2022
ಇದನ್ನೂ ಓದಿ: ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗೆ ಮುಂದಾದ ಬೆಂಗಳೂರು ಟ್ರಾಫಿಕ್ ಪೊಲೀಸರು
ಮತ್ತಷ್ಟು ಬೆಂಗಳೂರು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:34 pm, Tue, 17 January 23