Karnataka Assembly Elections 2023: ಚುನಾವಣೆ ಸಮೀಪಿಸುತ್ತಿದ್ದಂತೆ ಸ್ವಕ್ಷೇತ್ರ ಶಿಗ್ಗಾಂವಿಯತ್ತ ಸಿಎಂ ಚಿತ್ತ
Breaking News Today Live Updates: ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಚುನಾವಣಾ ಸಿದ್ಧತೆ ಚುರುಕುಗೊಂಡಿದೆ. ಹೊಸಪೇಟೆ, ಕೊಪ್ಪಳದಲ್ಲಿ ಇಂದು ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ನಡೆಯಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ(Karnataka Assembly Election 2023) ಹಿನ್ನೆಲೆ ರಾಜಕೀಯ ಪಕ್ಷಗಳು ಇಂದು ಕೂಡ ತಮ್ಮ ಭರ್ಜರಿ ಪ್ರಚಾರ ಮುಂದುವರೆಸಿವೆ. ಹೊಸಪೇಟೆ, ಕೊಪ್ಪಳದಲ್ಲಿ ಇಂದು ಕಾಂಗ್ರೆಸ್ ನಾಯಕರ ಬಸ್ ಯಾತ್ರೆ(Congress Bus Yatra) ನಡೆಯಲಿದೆ. ಈ ಹಿನ್ನೆಲೆ ಜಿಂದಾಲ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ವಾಸ್ತವ್ಯ ಹೂಡಿದ್ದಾರೆ. ಇನ್ನು ಮತ್ತೊಂದೆಡೆ ದೆಹಲಿಯಲ್ಲಿಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮುಂದುವರಿದಿದೆ. ಕಾರ್ಯಕಾರಿಣಿಯಲ್ಲಿ ರಾಜ್ಯದಿಂದ B.S.ಯಡಿಯೂರಪ್ಪ, ಸಿಎಂ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರು, ಸಚಿವರು, ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಹಾಗೂ ಇಂದಿನಿಂದ ವಿಜಯಪುರ ಜಿಲ್ಲೆಯಲ್ಲಿ JDS ಪಂಚರತ್ನ ರಥಯಾತ್ರೆ(JDS Pancharatna Yatre) ಆರಂಭವಾಗಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ 6 ದಿನ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಸಂಚರಿಸಲಿದೆ. ಹಾಗಾದ್ರೆ ಬನ್ನಿ ರಾಜಕೀಯ ಪಕ್ಷಗಳ ಭರ್ಜರಿ ಪ್ರಚಾರದ ಪ್ರತಿ ಕ್ಷಣದ ಅಪ್ಡೇಟ್ಸ್ ಇಲ್ಲಿದೆ.
LIVE NEWS & UPDATES
-
Karnataka Assembly Elections 2023 Live: ಸಿಎಂ ಇಬ್ರಾಹಿಂ ಬಗ್ಗೆ ಹೆಚ್ಚಿಗೆ ಮಾತನಡೋದು ಬೇಡ: ಸಚಿವ ಮುನಿರತ್ನ
ಕೋಲಾರ: ಸಿ.ಎಂ.ಇಬ್ರಾಹಿಂ ಬಗ್ಗೆ ಹೆಚ್ಚಿಗೆ ಮಾತನಡೋದು ಬೇಡ, ಇದು ಅವರ ಬಗ್ಗೆ ಮಾತನಾಡುವ ಸಂದರ್ಭ ಅಲ್ಲ, ಅವರು ನಮ್ಮ ಅಭ್ಯರ್ಥಿ ಬಗ್ಗೆ ಒಳ್ಳೆ ಮಾತಾಡಿದ್ದಾರೆ. ಅದಕ್ಕೆ ನಮ್ಮ ಅಭಿನಂದನೆ, ವರ್ತೂರು ಪ್ರಕಾಶ್ ಒಳ್ಳೆಯವರು ಅನ್ನೋದು ನಮಗೆ ಗೊತ್ತಿದೆ, ಅವರ ಸರ್ಟಿಫಿಕೇಟ್ ನಮಗೆ ಬೇಡ ಎಂದು ಸಚಿವ ಮುನಿರತ್ನ ಹೇಳಿದ್ದಾರೆ. ಒಳ್ಳೆಯ ವ್ಯಕ್ತಿ ಅದಕ್ಕೆ ಅವರನ್ನ ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನ ಸೋಲಿಸೋದಕ್ಕೆ ಪ್ಲಾನ್ ಏನ್ ಬೇಡ, ಚಾಮುಂಡೇಶ್ಬರಿಯಲ್ಲಿ ಪ್ಲಾನ್ ಇಲ್ಲದೆ ಸೋತಿದ್ದು, ಬಾದಾಮಿಯಲ್ಲಿ ಕೆಲವೇ ಮತಗಳ ಅಂತರದಿಂದ ಗೆದ್ದಿದ್ದಾರೆ. ನಮ್ಮ ಪಕ್ಷ ಬಹಳ ಬಲಿಷ್ಟವಾಗಿದೆ, ಇಲ್ಲಿ ಬಹಳ ಗಟ್ಟಿಯಾಗಿ ಬೇರೂರಿದೆ. ಇಲ್ಲಿ ನಮ್ಮ ಪಕ್ಷ ಸಂಘಟನೆ ಇದೆ ಎದುರಿಸುತ್ತೇವೆ ಗೆಲ್ಲುತ್ತೇವೆ ಎಂದರು. ಸಿದ್ದರಾಮಯ್ಯ ಕುರಿತು ಕುಮಾರಸ್ವಾಮಿ ಅವರ ಹರಕೆ ಕುರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಒಂದೊಂದು ಬಾರಿ ಜ್ಯೋತಿಷ್ಯ ಚನ್ನಾಗಿ ಹೇಳ್ತಾರೆ. ಅವರ ಮಾತುಗಳ ನಿಜ ಕೂಡ ಆಗಿದೆ. ಯಾಕಂದ್ರೆ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಹೆಚ್ಚು ದಿನ ಸಿಎಂ ಸ್ಥಾನದಲ್ಲಿ ಇರಲ್ಲ ಅಂತಾ ಹೇಳಿದ್ದರು. ಆದಷ್ಟು ಬೇಗ ನಾನು ಮಾಜಿ ಆಗುತ್ತೇನೆ ಎಂದು ಹೇಳಿದ್ದರು. ಹಾಗಾಗಿ ಅವರು ಹೇಳಿದ್ದು ಸತ್ಯ ಇರಬಹುದು ಅವರ ಮಾತನ್ನ ತಳ್ಳಾಕೋಕ್ಕೆ ಆಗಲ್ಲ ಎಂದರು.
-
Karnataka Assembly Elections 2023 Live: ನಾ ನಾಯಕಿ ಕಾರ್ಯಕ್ರಮ ನಾಲಾಯಕ್ ಎಂದ ಸಚಿವ ಅಶ್ವಥ್ ನಾರಾಯಣ್
ಹಾಸನದಲ್ಲಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ
ಹಾಸನ: ಪ್ರಿಯಾಂಕ ಗಾಂಧಿಯ ನಾ ನಾಯಕಿ ಕಾರ್ಯಕ್ರಮವನ್ನು ನಾಲಾಯಕ್ ಕಾರ್ಯಕ್ರಮ ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ವಿಚಾರವಾಗಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಮಹಿಳೆಯರ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ತು ಕಾಳಜಿಯಿಲ್ಲ, ನಯಾಪೈಸದ ಕಾಳಜಿಯಿಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರವನ್ನು ನೋಡಿ. ಈ ಡಬಲ್ ಇಂಜಿನ್ ಸರ್ಕಾರ ಮಹಿಳೆಯರ ರಕ್ಷಣೆಗೆ ಯಾವತ್ತು ಕೂಡ ಮುಂದಾಗಿಲ್ಲ. ಏನಿದ್ರು ಭಾವನಾತ್ಮಕ ವಿಚಾರಗಳಲ್ಲಿ ಗಮನಹರಿಸುತ್ತಾರೆ ಹೊರತು ಮಹಿಳೆಯರ ಕಷ್ಟ ಕೇಳಲ್ಲ. ಹತ್ತು ರೂಪಾಯಿ ಗ್ಯಾಸ್ ಬೆಲೆ ಏರಿಕೆಯಾದಾಗ ಸ್ಮೃತಿ ಇರಾನಿ ಸಿಲಿಂಡರ್ ತಲೆ ಮೇಲೆ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ರು. ಆಗ ಅಶ್ವತ್ಥ್ ನಾರಾಯಣ್ ಎಲ್ಲಿ ಹೋಗಿದ್ರು. ಈಗ ಅಶ್ವಥ್ ನಾರಾಯಣ್ ನಾ ನಾಯಕಿ ಕಾರ್ಯಕ್ರಮದ ಬಗ್ಗೆ ಮಾತಾಡ್ತರೆ. ಮಹಿಳಾ ಮೀಸಲಾತಿಯನ್ನು ಮಂಡನೆ ಮಾಡಿದ್ವಿ, ಬಿಜೆಪಿಯವರು ನಮಗೆ ಬೆಂಬಲ ಕೊಡಲಿಲ್ಲ. ಇವತ್ತು ಅವರ ಸಂಪೂರ್ಣವಾದ ಸರ್ಕಾರ ಇದೆ. ಅನುಮೋದನೆ ಮಾಡಬಹುದಿತ್ತು, ಅದು ಕೇಂದ್ರ ಸರ್ಕಾರದ ಪ್ರಣಾಳಿಕೆಯಲ್ಲಿ ಇದೆ. ಆದರೆ ಯಾರೊಬ್ಬರಿಗೂ ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುವ ಶಕ್ತಿನೇ ಇಲ್ಲಾ. ಮಹಿಳೆಯರ ಬಗ್ಗೆ ಬಹಳ ಅಸಡ್ಡೆಯಾಗಿ ಮಾತಾಡುತ್ತಾರೆ ಎಂದರು.
-
Karnataka Assembly Elections 2023 Live: ವೇಶ್ಯೆಯರ ರೀತಿಯಲ್ಲಿ ತಮ್ಮ ಶಾಸಕ ಸ್ಥಾನ ಮಾರಾಟ
ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ತಿರುಗೇಟು
‘ವೇಶ್ಯೆಯರ ರೀತಿಯಲ್ಲಿ ತಮ್ಮ ಶಾಸಕ ಸ್ಥಾನ ಮಾರಿಕೊಂಡಿದ್ದಾರೆ’ ಎಂದು ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಸಚಿವ ಬಿ.ಸಿ.ಪಾಟೀಲ್, ಕಾಂಗ್ರೆಸ್ಸಿಗರು ದ್ರೋಹ ಮಾಡಿದ್ದಕ್ಕೆ ರಾಜೀನಾಮೆ ಕೊಟ್ಟು ಬಂದೆವು. ಜನಾದೇಶ ಪಡೆದೇ ನಾವು ಶಾಸಕರಾಗಿದ್ದೇವೆ ಎಂದರು. ಮುಂದುವರೆದು ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಯಾವ ಚುನಾವಣೆಯನ್ನು ಗೆದ್ದು ಬಂದಿದ್ದಾರೆ? ಬಿ.ಕೆ.ಹರಿಪ್ರಸಾದ್ ಹಿಂಬಾಗಿಲಿನಿಂದ ಬಂದು ಎಂಎಲ್ಸಿ ಆಗಿದ್ದಾರೆ. ಹಿಂಬಾಗಿಲಿನಿಂದ ಬಂದ ಇವರನ್ನು ಪಿಂಪ್ ಎಂದು ಕರೆಯಬಹುದಾ? ಆದರೆ ಆ ರೀತಿ ಕರೆಯಲು ಆಗುವುದಿಲ್ಲ, ಇದು ಅವರ ಸಂಸ್ಕೃತಿ. ಕಾಂಗ್ರೆಸ್ನವರು ಇಷ್ಟು ವರ್ಷ ರೋಗಗ್ರಸ್ತ ಸರ್ಕಾರ ಮಾಡಿದ್ದರು. ಬಿಜೆಪಿ ಸರ್ಕಾರ ತೊಳೆಯುವ ಕೆಲಸ ಮಾಡಿದೆ ಎಂದರು. ಅಲ್ಲದೆ, ಕಾಂಗ್ರೆಸ್ಸಿಗರಿಗೆ ಸುಳ್ಳೇ ಅವರ ಮನೆ ದೇವರು. ಮೋದಿ ಸುಳ್ಳು ಹೇಳಿದರೆ ದೇಶದ ಜನರು ಅವರನ್ನು ಒಪ್ಪುತ್ತಿರಲಿಲ್ಲ. ಮೋದಿ ಅತ್ಯಂತ ಹೆಚ್ಚು ಬಹುಮತ ಗಳಸಿದ್ದಾರೆ. ಮತ್ತೆ ಕಾಂಗ್ರೆಸ್ ಸೇರುವ ಪ್ರಮೇಯ ಯಾರಿಗೂ ಇಲ್ಲ ಎಂದರು.
Karnataka Assembly Elections 2023 Live: ಕಟ್ಟುವುದು ಕಾಂಗ್ರೆಸ್ ಸಾಧನೆ ಮಾರಾಟ ಮಾಡೋದು ಮೋದಿ ಸಾಧನೆ
ಹೊಸಪೇಟೆಯ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಪ್ರಜಾಧ್ವನಿ ರಾಜ್ಯದ ಜನರ ಧ್ವನಿಯಾಗಲಿದೆ. ಕಟ್ಟುವುದು ಕಾಂಗ್ರೆಸ್ ಸಾಧನೆ ಮಾರಾಟ ಮಾಡೋದು ಮೋದಿ ಸಾಧನೆ. ಇದೊಂದು ನಲವತ್ತು ಪರ್ಸೆಂಟ್ ಕಮಿಷನ್ ಸರ್ಕಾರ. ಇದರ ಜೊತೆಗೆ ಇದೀಗ ಬೆಡ್ ರೂಂ ಬಾತ್ ರೂಂನಲ್ಲಿ ಸ್ಯಾಟ್ರೋ ಕಾರ್ ಓಡಾಡ್ತಿದೆ ಎಂದರು.
Karnataka Assembly Elections 2023 Live: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸುತ್ತಿರುವ ಡಿಕೆ ಸುರೇಶ್
ಹಾಸನದ ಪ್ರವಾಸಿ ಮಂದಿರದಲ್ಲಿ ಸಂಸದ ಡಿಕೆ ಸುರೇಶ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸಿದ್ದಾರೆ. ಹಾಸನ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಯಾಗಿರುವ ಡಿ.ಕೆ.ಸುರೇಶ್ ಹಾಸನ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳ ಸಭೆ ನಡೆಸಿದ್ದಾರೆ. ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಸಭೆಯಲ್ಲಿ ಹೆಚ್ ಎಂ ರೇವಣ್ಣ, ಜಿಲ್ಲಾಧ್ಯಕ್ಷ ಇ.ಹೆಚ್. ಲಕ್ಷ್ಮಣ್ ಉಪಸ್ಥಿತರಿದ್ದಾರೆ.
Karnataka Assembly Elections 2023 Live: ಬಿಜೆಪಿ ವಿರುದ್ಧ ಈಶ್ವರ ಖಂಡ್ರೆ ವಾಗ್ದಾಳಿ
ಹೊಸಪೇಟೆಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಿನ್ನಲೆ ಕಾರ್ಯಕ್ರಮದಲ್ಲಿ KPPC ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭಾಷಣ ಮಾಡಿದ್ದಾರೆ. ಇದು ಎಲೆಕ್ಷನ್ ವರ್ಷ ಇದೆ. ಕಲ್ಯಾಣ ಕರ್ನಾಟಕದಲ್ಲಿ ಬಳ್ಳಾರಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರ ಬಂದಿದೆ. ಅದಕ್ಕೆ ಹೊಸಪೇಟೆ ಕ್ಷೇತ್ರದ ಶಾಸಕರು ಮಾರಾಟ ಆದ್ರೂ. ಕಾಂಗ್ರೆಸ್ ಪಕ್ಷದಿಂದ ಗೆದ್ದು ಬೆನ್ನಿಗೆ ಚೂರಿ ಹಾಕಿ ಮೋಸ ಮಾಡಿದ್ದಾರೆ. ಅವರನ್ನ ಮನೆಗೆ ಕಳಿಸಬೇಕಿದೆ. BJPಗೆ ಯಾವುದೆ ಬದ್ದತೆ ಇಲ್ಲ. ದೇಶದ ವ್ಯವಸ್ಥೆ ಬಿಜೆಪಿ ಹಾಳು ಮಾಡಿದೆ. ಬಿಜೆಪಿ ರಾಜ್ಯವನ್ನ ಲೂಟಿ ಮಾಡ್ತಿದೆ. 60 % ಕಮಿಷನ್ ಪಡೆದುಕೊಳ್ಳುತ್ತಿದೆ , ಈ ಸರ್ಕಾರ ಬೇಕಾ? ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳನ್ನ ಬಿಜೆಪಿ ಕಡಗಣನೆ ಮಾಡ್ತಿದೆ. ದ್ವಿತಿಯ ದರ್ಜೆ ಪ್ರಜೆ ಅಂತೆ ಬಿಜೆಪಿ ನೋಡ್ತಿದೆ. ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬಂದ್ರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ 5 ಸಾವಿರ ಕೋಟಿ ನೀಡಲಿದೆ. ಸುಳ್ಳೆ ನೂರು ಸತ್ಯ ಎಂಬಂತೆ ಬಿಜೆಪಿ ಬಿಂಬಿಸ್ತಿದೆ. ಕಾಂಗ್ರೆಸ್ ಪಕ್ಷ ಮತ್ತೇ ಅಧಿಕಾರಕ್ಕೆ ಬರಲಿ ಎಂದರು.
Karnataka Assembly Elections 2023 Live: ರಾಷ್ಟ್ರೀಯ ಯುವಜನೋತ್ಸವ ಯಶಸ್ವಿ ಹಿನ್ನೆಲೆ ಕುಣಿದು ಕುಪ್ಪಳಿಸಿದ ಅಧಿಕಾರಿಗಳು
ರಾಷ್ಟ್ರೀಯ ಯುವಜನೋತ್ಸವ ಯಶಸ್ವಿ ಹಿನ್ನೆಲೆ ಅಧಿಕಾರಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರವಾಡ ಕೆಸಿಡಿ ಮೈದಾನದಲ್ಲಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ಎದುರು ಡ್ಯಾನ್ಸ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಗುರುದತ್ ಹೆಗಡೆ ನೇತೃತ್ವದಲ್ಲಿ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ಜಿಪಂ ಸಿಇಓ ಡಾ. ಸುರೇಶ್ ಇಟ್ನಾಳ, ಎಸ್ಪಿ ಲೋಕೇಶ, ಹುಡಾ ಆಯುಕ್ತ ಸಂತೋಷ ಬಿರಾದಾರ ಸೇರಿದಂತೆ ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದಾರೆ.
Karnataka Assembly Elections 2023 Live: ಹಿರಿಯ ಅಧಿಕಾರಿಗಳ ಜೊತೆ ಗೃಹ ಸಚಿವರ ಸಭೆ
2023-24 ನೇ ಸಾಲಿನ ಆಯವ್ಯಯ ಹಿನ್ನೆಲೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸೌಧದಲ್ಲಿ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಒಳಾಡಳಿತ ಇಲಾಖೆಗೆ ಸಂಬಂಧಿಸಿದಂತೆ ಬೇಡಿಕೆಗಳ ಬಗ್ಗೆ ಪೂರ್ವಭಾವಿ ಚರ್ಚೆ ಮಾಡಿದ್ದಾರೆ. ಗೃಹ ಇಲಾಖೆ ಎಸಿಎಸ್ ರಜನೀಶ್ ಗೋಯೆಲ್, ಡಿಜಿಪಿ ಪ್ರವೀಣ್ ಸೂದ್, ಎಡಿಜಿಪಿ (ಆಡಳಿತ)ಉಮೇಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದಾರೆ.
Karnataka Assembly Elections 2023 Live: ಹೊಸಪೇಟೆಗೆ ಆಗಮಿಸಿದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ
ಇಂದಿನಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ನಾಯಕರು ಚಾಲನೆ ನೀಡಲಿದ್ದಾರೆ. ಸದ್ಯ ಹೊಸಪೇಟೆಗೆ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಆಗಮಿಸಿದೆ. ಹೊಸಪೇಟೆ ಜಿಲ್ಲಾ ಕ್ರೀಡಾಂಗಣಕ್ಕೆ ಯಾತ್ರೆಯ ಬಸ್ ಆಗಮಿಸಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಣದೀಪ್ ಸುರ್ಜೆವಾಲಾ . ಜಿ ಪರಮೇಶ್ವರ. ಎಚ್ ಕೆ ಪಾಟೀಲ. ಈಶ್ವರ ಖಂಡ್ರೆ. ಶಾಸಕರಾದ ಭೀಮಾನಾಯ್ಕ್, ಈ ತುಕಾರಾಂ, ಜೆ ಎನ್ ಗಣೇಶ್, ಪಿ.ಟಿ.ಪರಮೇಶ್ವರ, ಬಿ ಕೆ ಹರಿಪ್ರಸಾದ್, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ದಿವಾಕರ ಬಾಬು, ಮೊಹಮ್ಮದ್ ನಲಪಾಡ್, ಅನಿಲ್ ಲಾಡ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದಾರೆ.
Karnataka Assembly Elections 2023 Live: ಶಾಸಕ ಪ್ರೀತಂಗೌಡಗೆ ಹಾಸನ ಕ್ಷೇತ್ರದ BJP ಟಿಕೆಟ್ ತಪ್ಪುವ ಭೀತಿ
ಶಾಸಕ ಪ್ರೀತಂಗೌಡಗೆ ಹಾಸನ ಕ್ಷೇತ್ರದ BJP ಟಿಕೆಟ್ ತಪ್ಪುವ ಭೀತಿ ಎದುರಾಗಿದೆ. ನಮ್ಮ ಪಕ್ಷದಿಂದ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟ ಮಾಡಿಲ್ಲ. ಆಪ್, ಕಾಂಗ್ರೆಸ್, ಜನತಾದಳವರೆಲ್ಲರೂ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಆದರೆ ಬಿಜೆಪಿಯಿಂದ ಇನ್ಯಾರಿಗೋ ಟಿಕೆಟ್ ಕೊಡ್ತಾರೆ. ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಅನ್ನೋದನ್ನು ಕಾದುನೋಡಬೇಕಿದೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ನಾನು ಬದ್ಧನಿದ್ದೇನೆ ಎಂದು ಹಾಸನ ಕ್ಷೇತ್ರದ BJP ಶಾಸಕ ಪ್ರೀತಂಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.
Karnataka Assembly Elections 2023 Live: ಶಿಗ್ಗಾಂವಿ ಕ್ಷೇತ್ರದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿರುವ ಬೊಮ್ಮಾಯಿ
ಚುನಾವಣೆ ಸಮೀಪಿಸುತ್ತಿದ್ದಂತೆ ಸ್ವಕ್ಷೇತ್ರ ಶಿಗ್ಗಾಂವಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬೊಮ್ಮಾಯಿ ಕಡಿಮೆ ಅಂತರದಿಂದ ಗೆದ್ದಿದ್ದರು. 50 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಮತ ಹೊಂದಿರುವ ಶಿಗ್ಗಾಂವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೊಡೆತ ಬೀಳಬಹುದೆಂಬ ಆತಂಕ ಹಿನ್ನೆಲೆ ಶಿಗ್ಗಾಂವಿ ಕ್ಷೇತ್ರದ ಬಗ್ಗೆ ಬೊಮ್ಮಾಯಿ ಹೆಚ್ಚು ಕಾಳಜಿವಹಿಸುತ್ತಿದ್ದಾರೆ. ಶಿಗ್ಗಾಂವಿ ಕ್ಷೇತ್ರಕ್ಕೆ ಇಬ್ಬರು ಹಿರಿಯ ಅಧಿಕಾರಿಗಳನ್ನ ಸಿಎಂ ನೇಮಿಸಿದ್ದಾರೆ. IAS ಅಧಿಕಾರಿ ಜಗದೀಶ್, ಕೆಎಎಸ್ ಅಧಿಕಾರಿ ಕೋನರೆಡ್ಡಿ ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ವಾರದಲ್ಲಿ 3ರಿಂದ 4 ಬಾರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
Karnataka Assembly Elections 2023 Live: ಜನವರಿ ಅಂತ್ಯಕ್ಕೆ ಅಮಿತ್ ಶಾ ಬೆಂಗಳೂರು ಭೇಟಿ
ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಮುಖಂಡರು ಕಣ್ಣೀಟ್ಟಿದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲುಲು ಪಣತೊಟ್ಟಿದ್ದಾರೆ. ವಿಧಾನಸಭಾ ಚುನಾವಣೆ ಘೋಷಣೆಗೂ ಮನ್ನವೇ ಬಿಜೆಪಿ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಮತ್ತೆ ಹಳೇ ಮೈಸೂರು ಭಾಗಕ್ಕೆ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಡಲಿದ್ದಾರೆ. ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ನೀಡಲಿದ್ದಾರೆ. ಕೆಳದ ಭಾರಿ ಆಗಮಿಸಿ ಟಾಸ್ಕ್ ಕೊಟ್ಟಿದ್ದ ಚಾಣಿಕ್ಯ ಅಮಿತ್ ಶಾ, ಟಾಸ್ಕ್ ಮತ್ತು ಸ್ಥಳೀಯ ಮುಖಂಡರಿಗೆ ವಹಿಸಿದ್ದ ಜವಾಬ್ದಾರಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
Karnataka Assembly Elections 2023 Live: ಬಸನಗೌಡ ಪಾಟೀಲ್ ಯತ್ನಾಳ್ಗೆ ಯಾವುದೇ ನೋಟಿಸ್ ಬಂದಿಲ್ಲ
ಯತ್ನಾಳ್ಗೆ ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ನೋಟಿಸ್ ವಿಚಾರಕ್ಕೆ ಸಂಬಂಧಿಸಿ ಫ್ರೀಡಂಪಾರ್ಕ್ನಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ಗೆ ಯಾವುದೇ ನೋಟಿಸ್ ಬಂದಿಲ್ಲ. ಈ ಬಗ್ಗೆ ನಿನ್ನೆ ಯತ್ನಾಳ್ ಅವರೇ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ನೋಟಿಸ್ ನೀಡಿದ್ರೆ ಸಮುದಾಯ ಅವರ ಪರ ನಿಲ್ಲುತ್ತೆ. ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅವರ ರಾಜಕೀಯ ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನೋಟಿಸ್ ಕೊಟ್ಟರೆ ಉಳಿದವರು ಭಯಪಡುತ್ತಾರೆ ಅಂದುಕೊಂಡಿದ್ದಾರೆ. ನಾವೆಲ್ಲರೂ ಯತ್ನಾಳ್ ಪರವಾಗಿ ನಿಲ್ಲುತ್ತೇವೆ. ನೋಟಿಸ್ ಕೊಟ್ಟರೆ ಅದಕ್ಕೆ ಸಮರ್ಥವಾಗಿ ಉತ್ತರ ಕೊಡುವ ಶಕ್ತಿ ಇದೆ ಎಂದರು.
Karnataka Assembly Elections 2023 Live: ನಾಲ್ಕನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಸಮುದಾಯದ ಪ್ರತಿಭಟನೆ
ಪಂಚಮಸಾಲಿ ಸಮುದಾಯದ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ಹೋರಾಟ ನಡೆಸುತ್ತಿದೆ. 2ಎ ಮೀಸಲಾತಿಗಾಗಿ 2 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಜನವರಿ ಅಂತ್ಯದಲ್ಲಿ ಹುಬ್ಬಳ್ಳಿ ಅಥವಾ ಶಿಕಾರಿಪುರದಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೇವೆ. ಇಂದು ಮೋದಿ, ಅಮಿತ್ ಶಾ, ನಡ್ಡಾಗೆ ಪತ್ರ ಬರೆಯಲು ನಿರ್ಧಾರ ಮಾಡಿದ್ದೇವೆ ಎಂದು ಫ್ರೀಡಂಪಾರ್ಕ್ನಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
Karnataka Assembly Elections 2023 Live: ನಾಳೆ ಬಾಗಲಕೋಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ
ನಾಳೆ ಬಾಗಲಕೋಟೆಯ ಕಾಳಿದಾಸ ಹೈಸ್ಕೂಲ್ ಮೈದಾನದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಿಎಮ್ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಣಜಿತ್ ಸುರ್ಜೇವಾಲಾ, ಬಿಕೆ ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ.
Karnataka Assembly Elections 2023 Live: ಸುಳ್ಳು ಆರೋಪ ಮಾಡಿದ ಕೆಂಪಣ್ಣ ಮೇಲೆ ಕೇಸ್ ದಾಖಲಾಗಿದೆ
ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಕಮಿಷನ್ ಪಡೆದ ಆರೋಪ ಸಂಬಂಧ ಸುಳ್ಳು ಆರೋಪ ಮಾಡಿದ ಕೆಂಪಣ್ಣ ಮೇಲೆ ಕೇಸ್ ದಾಖಲಾಗಿದೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಗುತ್ತಿಗೆದಾರರ ಮೇಲೆ ದೂರು ನೀಡುವುದಾಗಿ ತಿಪ್ಪಾರೆಡ್ಡಿ ಹೇಳಿದ್ದಾರೆ. ಚುನಾವಣೆ ಸಮೀಪ ಬಂತೆಂದು ಸುಮ್ಮನೇ ಆರೋಪ ಮಾಡಬಹುದು. ಯಾರೇ ಬ್ಲ್ಯಾಕ್ಮೇಲ್ ಮಾಡಿದ್ರೂ ಮುಂದೆ ಅನುಭವಿಸಬೇಕಾಗುತ್ತೆ ಎಂದರು.
Karnataka Assembly Elections 2023 Live: ಕಾಂಗ್ರೆಸ್ ಯೋಜನೆಗಳ ವಿರುದ್ಧ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ
ಮಹಿಳೆಯರಿಗೆ $2 ಸಾವಿರ ನೀಡುವುದಾಗಿ ಘೋಷಣೆ ವಿಚಾರಕ್ಕೆ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಅಂತಾ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ನವರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಜವಾಬ್ದಾರಿಯುತ ಪಕ್ಷ ಹೀಗೆ ಉಚಿತ ಕೊಡುಗೆ ನೀಡಲು ಆಗಲ್ಲ. ಉಚಿತ ಘೋಷಣೆ ಮಾಡಲು ಬೊಕ್ಕಸಕ್ಕೆ ಹಣ ಎಲ್ಲಿಂದ ಬರುತ್ತೆ? ರೈತರು, ನೀರಾವರಿ, ರಸ್ತೆಗಳು ಇದಕ್ಕೆಲ್ಲಾ ಎಲ್ಲಿಂದ ದುಡ್ಡು ತರ್ತಾರೆ? ಬಿಎಸ್ವೈ ಭಾಗ್ಯಲಕ್ಷ್ಮೀ ಸೇರಿ ಅನೇಕ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ನವರು ವೋಟಿಗಾಗಿ ಸುಳ್ಳು ಭರವಸೆ ಕೊಡ್ತಿದ್ದಾರೆ. ಸುಳ್ಳು ಭರವಸೆ ಕೊಟ್ಟು ಕಾಂಗ್ರೆಸ್ ಚುನಾವಣೆಗೆ ಹೋಗುತ್ತಿದೆ. ಕರ್ನಾಟಕದ ಜನತೆ ಕಾಂಗ್ರೆಸ್ನವರ ಸುಳ್ಳು ಭರವಸೆ ನಂಬುವುದಿಲ್ಲ ಎಂದರು
Karnataka Assembly Elections 2023 Live: ಹೆಚ್ಡಿಕೆ ಹೇಳಿಕೆಗೆ ಸಚಿವ ಆರಗ ಜ್ಞಾನೇಂದ್ರ ಭಾವುಕದ ಪ್ರತಿಕ್ರಿಯೆ
ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಲೆನಾಡು ಕಾರ್ಯಕ್ರಮದಲ್ಲಿ ನಾನು ಭಾವುಕನಾಗಿದ್ದೆ. ಪ್ರಾಮಾಣಿಕವಾಗಿ ಕೆಲಸ ಮಾಡ್ತಿರುವವರಿಗೆ ಮಸಿ ಹಚ್ಚುವ ಕೆಲಸ ಮಾಡ್ತಿದ್ದಾರೆ. ಯಾರನ್ನು ಬೇಕಾದ್ರೂ ಕೇಳಿ ಎಲ್ಲರಿಗೂ ನಾನು ಸಿಗುತ್ತೇನೆ. ಒಂದು ಫೋಟೋಗೆ ಇಷ್ಟು ಕಥೆ ಕಟ್ಟಿದರೆ ಹೇಗೆ? ಸಾರ್ವಜನಿಕ ಜೀವನದಲ್ಲಿ ಉತ್ತಮವಾಗಿ ರಾಜಕೀಯ ಮಾಡಿದ್ದೇನೆ. ಹೀಗೆ ಕೆಸರು ಎರಚಿದರೆ ನೋವಾಗುತ್ತದೆ. ಇಂತಹದ್ದೇ ಬ್ಯುಸಿನೆಸ್ ಮಾಡುವವರಿಗೆ ಏನೂ ಸಮಸ್ಯೆ ಆಗಲ್ಲ. ಆದ್ರೆ ನಮ್ಮಂತಹವರಿಗೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
Karnataka Assembly Elections 2023 Live: ಜ.19ರಂದು ಕಲ್ಯಾಣ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರವಾಸ
ಜ.19ರಂದು ಕಲ್ಯಾಣ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರವಾಸ ಕೈಗೊಳ್ಳಲಿದ್ದಾರೆ. ಜ.19ರ ಬೆಳಗ್ಗೆ 11ಕ್ಕೆ ಕಲಬುರಗಿ ಏರ್ಪೋರ್ಟ್ಗೆ ಮೋದಿ ಆಗಮಿಸಲಿದ್ದು ಏರ್ಪೋರ್ಟ್ನಿಂದ ಯಾದಗಿರಿ ಜಿಲ್ಲೆಗೆ ತೆರಳಲಿದ್ದಾರೆ. ಬಳಿಕ ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ಮತ್ತು ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ. ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
Karnataka Assembly Elections 2023 Live: ಮುಸ್ಲಿಮರ ಮನವೊಲಿಕೆಗೆ ಮುಂದಾದ ಸಚಿವ ಎಂಟಿಬಿ ನಾಗರಾಜ್
ಮುಸ್ಲಿಮರ ಮನವೊಲಿಕೆಗೆ ಸಚಿವ ಎಂಟಿಬಿ ನಾಗರಾಜ್ ಮುಂದಾಗಿದ್ದಾರೆ. ಹೊಸಕೋಟೆಯ ಚೆನ್ನಭೈರೇಗೌಡ ಕ್ರೀಡಾಂಗಣದಲ್ಲಿ ಕವ್ವಾಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಚಿವ ಎಂಟಿಬಿ ಮತ್ತು ಪುತ್ರ ನಿತಿನ್ ಪುರುಷೋತ್ತಮ್ರಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು ಮುಸ್ಲಿಂ ಟೋಪಿ ಹಾಕಿಕೊಂಡು ಸಚಿವ ಎಂಟಿಬಿ ನಾಗರಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಉರ್ದುನಲ್ಲೇ ಸಚಿವ ಎಂಟಿಬಿ ನಾಗರಾಜ್ ಭಾಷಣ ಆರಂಭಿಸಿದ್ರು. ಕೊನೆಯವರೆಗೂ ಮುಸ್ಲಿಂ ಟೋಪಿ ಹಾಕಿಕೊಂಡೇ ಎಂಟಿಬಿ, ಪುತ್ರ ನಿತಿನ್ ಕುಳಿತಿದ್ದರು. ಕವ್ವಾಲಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮುಖಂಡರು ಹಣದ ಮಳೆ ಸುರಿಸಿದ್ರು. ಸಚಿವ ಎಂಟಿಬಿ ಪುತ್ರ ಮತ್ತು ಕವ್ವಾಲಿ ಗಾಯಕನ ಮೇಲೆ ಹಣದ ಮಳೆ ಸುರಿಸಿದ್ರು.
Karnataka Assembly Elections 2023 Live: 18 ದಿನಗಳಲ್ಲಿ 21 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ರಥಯಾತ್ರೆ
ಮತ್ತೆ ಉತ್ತರ ಕರ್ನಾಟಕದಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಆರಂಭಿಸುತ್ತಿದೆ. 2023ರ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಹೆಚ್ಡಿಕೆ ರಥಯಾತ್ರೆ ನಡೆಸುತ್ತಿದ್ದಾರೆ. ಮತಗಳ ಪ್ರಮಾಣ ಹೆಚ್ಚಿಸಬಹುದಾದ, ಗೆಲ್ಲಬಹುದಾದ, ಸಂಘಟನಾ ಬಲ ಅಗತ್ಯವಿರುವ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಲಿದೆ. ಗೆಲ್ಲುವ ಕ್ಷೇತ್ರಗಳನ್ನ ರಥಯಾತ್ರೆಯಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ಸಂಕ್ರಾಂತಿ ಹಬ್ಬ ಹಿನ್ನೆಲೆ ಮೂರು ದಿನಗಳ ಕಾಲ ಯಾತ್ರೆಗೆ ಬ್ರೇಕ್ ನೀಡಲಾಗಿತ್ತು. ಸದ್ಯ ಇಂದಿನಿಂದ ಮತ್ತೆ ಯಾತ್ರೆ ಆರಂಭವಾಗಿದೆ.
18 ದಿನಗಳಲ್ಲಿ 21 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ರಥಯಾತ್ರೆ ಇಂದಿನಿಂದ 22 ರವರೆಗೂ ವಿಜಯಪುರ ಜಿಲ್ಲೆಯ 7 ಕ್ಷೇತ್ರದಲ್ಲಿ ಹೆಚ್ಡಿಕೆ ರಥಯಾತ್ರೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಿಂದ ಆರಂಭವಾಗಲಿರುವ ರಥಯಾತ್ರೆ ಜನವರಿ 23 ರಂದು ಬಾಗಲಕೋಟೆಯ 1 ಕ್ಷೇತ್ರದಲ್ಲಿ ರಥಯಾತ್ರೆ ಜನವರಿ 24 ರಿಂದ 29 ರವರೆಗೂ ರಾಯಚೂರು ಜಿಲ್ಲೆಯ 6 ಕ್ಷೇತ್ರದಲ್ಲಿ ರಥಯಾತ್ರೆ ಜನವರಿ 30 ರಂದು ಕೊಪ್ಪಳ ಜಿಲ್ಲೆಯ 2 ಕ್ಷೇತ್ರದಲ್ಲಿ ರಥಯಾತ್ರೆ ಜನವರಿ 31 ರಂದು ಬಳ್ಳಾರಿ, ವಿಜಯನಗರ ಜಿಲ್ಲೆಯ 2 ಕ್ಷೇತ್ರದಲ್ಲಿ ರಥಯಾತ್ರೆ ಫೆಬ್ರವರಿ 1 ರಂದು ದಾವಣಗೆರೆ ಜಿಲ್ಲೆಯ ಒಂದು ಕ್ಷೇತ್ರದಲ್ಲಿ ರಥಯಾತ್ರೆ ಫೆಬ್ರವರಿ 2 ಮತ್ತು 3 ರಂದು ಹಾವೇರಿ ಜಿಲ್ಲೆಯ 2 ಕ್ಷೇತ್ರದಲ್ಲಿ ಜೆಡಿಎಸ್ ರಥಯಾತ್ರೆ
Karnataka Assembly Elections 2023 Live: ವಿಜಯಪುರ ಜಿಲ್ಲೆಯಲ್ಲಿ JDS ಪಂಚರತ್ನ ರಥಯಾತ್ರೆ
ಇಂದಿನಿಂದ ವಿಜಯಪುರ ಜಿಲ್ಲೆಯಲ್ಲಿ JDS ಪಂಚರತ್ನ ರಥಯಾತ್ರೆ ನಡೆಯಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ 6 ದಿನ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಸಂಚರಿಸಲಿದೆ. ಇಂಡಿ ಕ್ಷೇತ್ರದ ಚಿಕ್ಕಮಣೂರು ಗ್ರಾಮದಿಂದ ರಥಯಾತ್ರೆ ಆರಂಭವಾಗಲಿದ್ದು ಇಂಡಿ, ಸಿಂದಗಿ, ದೇವರಹಿಪ್ಪರಗಿ, ನಾಗಠಾಣ, ಮುದ್ದೇಬಿಹಾಳ, ಬಸವನಬಾಗೇವಾಡಿ, ಬಬಲೇಶ್ವರ ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ. ಮಾಜಿ ಸಿಎಂ ಹೆಚ್ಡಿಕೆಗೆ ಸ್ಥಳೀಯ ಮುಖಂಡರು ಸಾಥ್ ನೀಡಲಿದ್ದಾರೆ.
Karnataka Assembly Elections 2023 Live: ಪ್ರಜಾಧ್ವನಿ ಯಾತ್ರೆ ಮೂಲಕ ಒಗ್ಗಟ್ಟಿನ ಸಂದೇಶ ರವಾನೆ ಮಾಡಲಿರುವ ಕಾಂಗ್ರೆಸ್
ಹೊಸಪೇಟೆಯಲ್ಲಿಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಿದೆ. ಪ್ರಜಾಧ್ವನಿ ಯಾತ್ರೆ ಮೂಲಕ ಒಗ್ಗಟ್ಟಿನ ಸಂದೇಶ ರವಾನೆ ಮಾಡಲು ಕಾಂಗ್ರೆಸ್ ಸಿದ್ದವಾಗಿದೆ. ಕಲ್ಯಾಣ ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕರು ಇಂದು ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಹಾಕಿದ್ದಾರೆ. ಕಲ್ಯಾಣ ಕರ್ನಾಟಕದ 42 ಕ್ಷೇತ್ರದ ಪೈಕಿ ಸದ್ಯ 21 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಳ್ಳಾರಿ ವಿಜಯನಗರ ರಾಜಕೀಯ ಕಣ ಹೈವೋಲ್ಟೇಜ್ ಹಿನ್ನಲೆ, ಬಳ್ಳಾರಿ ಹಿಡಿತಕ್ಕಾಗಿ ಕಾಂಗ್ರೆಸ್ ಸರ್ಕಸ್ ಮಾಡ್ತಿದೆ.
Karnataka Assembly Elections 2023 Live: ಮೋದಿ ಆಗಮನ ಹಿನ್ನೆಲೆ ಯಾದಗಿರಿಯಲ್ಲಿ ಮಾರ್ಗ ಬದಲಾವಣೆ
ಜನವರಿ 19 ರಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್‌ನಲ್ಲಿ ಮೋದಿ ಕಾರ್ಯಕ್ರಮ ಹಿನ್ನಲೆ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಜ.18 ಮತ್ತು 19ರಂದು ಹುಣಸಗಿ ಪಟ್ಟಣದಿಂದ ನಾರಾಯಣಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹುಣಸಗಿಯಿಂದ ನಾರಾಯಣಪುರಕ್ಕೆ ಹೋಗಬೇಕು ಎಂದ್ರೆ ಕೊಡೆಕಲ್ ಮಾರ್ಗವಾಗಿ ಹೋಗಲಾಗುತ್ತೆ. ಆದ್ರೆ ಮೋದಿ ಕಾರ್ಯಕ್ರಮ ಹಿನ್ನಲೆ ಮಾರ್ಗ ಬದಲಾವಣೆ ಮಾಡಲಾಗಿದೆ. ಹುಣಸಗಿಯಿಂದ ನಾರಾಯಣಪುರಕ್ಕೆ ಹೋಗುವ ವಾಹನಗಳಿಗೆ ಬಲಶೆಟ್ಟಿಹಾಳ್, ಗೆದ್ದಲಮರಿ, ಜೋಗುಂಡಬಾವಿ ಮಾರ್ಗವಾಗಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾರಾಯಣಪುರದಿಂದ ಹುಣಸಗಿಗೆ ಬರಬೇಕು ಎಂದ್ರೆ ಇದೆ ಮಾರ್ಗವಾಗಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
Karnataka Assembly Elections 2023 Live: ಕಂದಾಯ ಸಚಿವ R.ಅಶೋಕ್ ಇಂದು ಕಲಬುರಗಿ ಜಿಲ್ಲಾ ಪ್ರವಾಸ
ಜ.19ರಂದು ಮೋದಿ ಅವರಿಂದ ಲಂಬಾಣಿ ತಾಂಡಾ ನಿವಾಸಿಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಹಿನ್ನೆಲೆ ಕಂದಾಯ ಸಚಿವ R.ಅಶೋಕ್ ಇಂದು ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಾಚಿನಾಳ ತಾಂಡಾದಲ್ಲೇ ಇಂದು ಸಚಿವ ಆರ್.ಅಶೋಕ್ ವಾಸ್ತವ್ಯ ಹೂಡಲಿದ್ದಾರೆ. ತಾಂಡಾ ನಿವಾಸಿಗಳ ಸಮಸ್ಯೆ ಆಲಿಸಲಿದ್ದಾರೆ.
Karnataka Assembly Elections 2023 Live: ಜ.19ರಂದು ಯಾದಗಿರಿಗೆ ಮೋದಿ ಆಗಮನ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ
ಜನವರಿ 19ರಂದು ಯಾದಗಿರಿ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಹುಣಸಗಿ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹುಣಸಗಿ ತಾಲೂಕಿನ ಕೊಡೆಕಲ್‌ನಲ್ಲಿ ಮೋದಿ ಸಮಾವೇಶ ನಡೆಯಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದೆಂಬ ಕಾರಣಕ್ಕೆ ತಾಲೂಕಿನ ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಟಿವಿ9ಗೆ ಹುಣಸಗಿ ತಹಶೀಲ್ದಾರ್ ಜಗದೀಶ್ ಚೌರ್ ಮಾಹಿತಿ ನೀಡಿದ್ದಾರೆ.
Karnataka Assembly Elections 2023 Live: ಕಾಂಗ್ರೆಸ್ ಫ್ಲೆಕ್ಸ್ಗಳಿಗೆ ಬಿಜೆಪಿ ಆಕ್ರೋಶ
ಕೊಪ್ಪಳದಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಕಾರ್ಯಕ್ರಮ ಹಿನ್ನೆಲೆ ಕೊಪ್ಪಳ ನಗರದಾದ್ಯಂತ ‘ಕೈ’ ನಾಯಕರ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ನಗರಸಭೆಯಿಂದ ನಿರ್ಮಾಣವಾಗಿರುವ ಸ್ವಾಗತ ಕಮಾನುಗೇಟ್ಗೆ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಶಾಸಕ ರಾಘವೇಂದ್ರ ಹಿಟ್ನಾಳ್ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಕೇಳಿ ಬಂದಿದ್ದು ನಗರಸಭೆಯಿಂದ ಅನುಮತಿ ಪಡೆಯದೆ ಫ್ಲೆಕ್ಸ್ಗಳನ್ನು ಹಾಕಿದ್ದಾರೆ ಎನ್ನಲಾಗುತ್ತಿದೆ. ಹಾಗೂ ಕೊಪ್ಪಳ ನಗರಸಭೆ ಅಧಿಕಾರಿಗಳ ವಿರುದ್ಧವೂ ಬಿಜೆಪಿ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.
Karnataka Assembly Elections 2023 Live: ದೆಹಲಿಯಲ್ಲಿಂದು ಮುಂದುವರಿಯುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ
ದೆಹಲಿಯ ಎನ್ಡಿಎಂಸಿ ಕನ್ವೆನ್ಷನ್ ಹಾಲ್ನಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮುಂದುವರಿದಿದ್ದು ರಾಜ್ಯದಿಂದ B.S.ಯಡಿಯೂರಪ್ಪ, ಸಿಎಂ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರು, ಸಚಿವರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
Karnataka Assembly Elections 2023 Live: ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ಇಂದು
ಹೊಸಪೇಟೆ, ಕೊಪ್ಪಳದಲ್ಲಿ ಇಂದು ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಜಿಂದಾಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಸ್ ಯಾತ್ರೆ ವೇಳೆ ಮತ್ತಷ್ಟು ಯೋಜನೆ ಘೋಷಿಸಿ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.
Published On - Jan 17,2023 9:56 AM