ನನಗೆ 20 ತಿಂಗಳು ಮಾತ್ರ ಅಧಿಕಾರ ಇದೆ, ಇಂದಿನಿಂದಲೇ ನವ ಕರ್ನಾಟಕ ನಿರ್ಮಾಣ ಆರಂಭ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ರೈತರ ಬದುಕಿನಲ್ಲಿ ಕ್ರಾಂತಿ ತರುವ ಕಾಲ ಬಂದಿದೆ. ರೈತನನ್ನು ಕೇಂದ್ರ ಬಿಂದುವಾಗಿ ಅಭಿವೃದ್ಧಿ ಮಾಡಬೇಕು. ರೈತ ಕೇಂದ್ರಿತ ಅಭಿವೃದ್ಧಿ ಚಿಂತನೆ ಮಾಡುತ್ತಿದ್ದೇವೆ. ರೈತನ ಶ್ರಮ, ಕೂಲಿಕಾರನ ಬೆವರಿನಲ್ಲಿ ದೇವರಿದ್ದಾನೆ. ಇದಕ್ಕೆ ನಾವು ಬೆಲೆ ಕೊಡಬೇಕು- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai ) ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮೊದಲ ಬಾರಿಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ(75th Indian Independence Day) ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ(Manekshaw Parade Ground) ಧ್ವಜಾರೋಹಣ ನೆರವೇರಿಸಿದ್ದಾರೆ. ಬಳಿಕ ರಾಜ್ಯವನ್ನ ಉದ್ದೇಶಿಸಿ ಮಾತನಾಡಿದ ಅವರು ಈ ದಿನಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡಿದ್ದಾರೆ.
ಇಂದು ಸಂಗೊಳ್ಳಿ ರಾಯಣ್ಣರ ಜನ್ಮದಿನವೂ ಆಗಿದೆ ಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣ ಆರಂಭಿಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ರಾಣಿ ಚೆನ್ನಮ್ಮ ನಮ್ಮೆಲ್ಲರ ಅಭಿಮಾನದ ಸಂಕೇತ. ಸಂಗೊಳ್ಳಿ ರಾಯಣ್ಣರ ಜನ್ಮದಿನವೂ ಇಂದೇ ಆಗಿದೆ. ರಾಯಣ್ಣರ ತ್ಯಾಗ, ಬಲಿದಾನ ಬಹಳ ಮಹತ್ವದ್ದಾಗಿದೆ. ರಾಯಣ್ಣ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಅವರ ಜನ್ಮ ದಿನ ಆಚರಿಸುತ್ತಿರುವುದು ನಮಗೆ ಖುಷಿಯ ವಿಚಾರ. ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸ್ಮರಣೆ ಮಾಡಬೇಕು. ಅನಾಮಧೇಯ ಸ್ವಾತಂತ್ರ್ಯ ಸೇನಾನಿಗಳಿಗೆ ಭಾವಪೂರ್ಣ, ಭಕ್ತಿಪೂರ್ಣ ನಮನ ಎಂದು ನಮನ ಸಲ್ಲಿಸಿದ್ದಾರೆ.
ನವ ಕರ್ನಾಟಕ ನಿರ್ಮಾಣ ಆರಂಭ ಭಾರತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ವಿಶ್ವದ ಗಮನವನ್ನು ಸೆಳೆದಿದೆ. ಗ್ರಾಮಗಳಿಂದ ಬಾಹ್ಯಾಕಾಶದವರೆಗೂ ಪ್ರಧಾನಿ ಮೋದಿ ಹಲವು ಯೋಜನೆ ಕೊಟ್ಟಿದ್ದಾರೆ. ಇಂದಿನಿಂದಲೇ ನವ ಕರ್ನಾಟಕ ನಿರ್ಮಾಣ ಆರಂಭವಾಗುತ್ತದೆ. ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ ಇದೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ.
ರೈತರ ಬದುಕಿನಲ್ಲಿ ಕ್ರಾಂತಿ ತರುವ ಕಾಲ ಬಂದಿದೆ. ರೈತನನ್ನು ಕೇಂದ್ರ ಬಿಂದುವಾಗಿ ಅಭಿವೃದ್ಧಿ ಮಾಡಬೇಕು. ರೈತ ಕೇಂದ್ರಿತ ಅಭಿವೃದ್ಧಿ ಚಿಂತನೆ ಮಾಡುತ್ತಿದ್ದೇವೆ. ರೈತನ ಶ್ರಮ, ಕೂಲಿಕಾರನ ಬೆವರಿನಲ್ಲಿ ದೇವರಿದ್ದಾನೆ. ಇದಕ್ಕೆ ನಾವು ಬೆಲೆ ಕೊಡಬೇಕು. ಕೃಷಿ ಕ್ಷೇತ್ರದಲ್ಲಿ ಶೇ.1ರಷ್ಟು ಬೆಳವಣಿಗೆಯಾದರೆ, ಕೈಗಾರಿಕಾ ಕ್ಷೇತ್ರದಲ್ಲಿ ಶೇ.4ರಷ್ಟು ಬೆಳವಣಿಗೆಯಾಗುತ್ತೆ, ಸೇವಾ ವಲಯದಲ್ಲಿ ಶೇ.10ರಷ್ಟು ಬೆಳವಣಿಗೆಯಾಗುತ್ತೆ ಎಂದರು.
ಎಲ್ಲ ಯೋಜನೆ ಮನೆ ಬಾಗಿಲಿಗೆ ತಲುಪುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತೆ. ಬೆಳವಣಿಗೆ ಅಂದರೆ ಕೇವಲ ಅಂಕಿ ಅಂಶವಲ್ಲ. ರಾಜ್ಯದ ಪ್ರತಿಯೊಬ್ಬರ ಬದುಕು ಹಸನಾಗಬೇಕು. ಪ್ರತಿ ಕುಟುಂಬಕ್ಕೂ ಸರ್ಕಾರದ ಯೋಜನೆ ಮುಟ್ಟಬೇಕು. ದೀರ್ಘಾವಧಿ, ಅಲ್ಪಾವಧಿ ಯೋಜನೆಗಳನ್ನು ಮಾಡುತ್ತೇನೆ. ನನಗೆ 20 ತಿಂಗಳು ಮಾತ್ರ ಅಧಿಕಾರ ಇದೆ. ಅಲ್ಪಾವಧಿ ಯೋಜನೆಗಳನ್ನು ಶೇ.100ರಷ್ಟು ಮಾಡುತ್ತೇವೆ.
ಕೊರೊನಾದಿಂದ ರಾಜ್ಯದ ಜನ ಸಂಕಷ್ಟ ಅನುಭವಿಸಿದ್ದಾರೆ. ಕೊರೊನಾ ಒಂದು ಸವಾಲು. ಕೊರೊನಾ ನಿಯಂತ್ರಣಕ್ಕೆ ಬಿಎಸ್‌ವೈ ನಿರಂತರ ಪ್ರಯತ್ನಿಸಿದ್ದರು. ಆರೋಗ್ಯ ಇಲಾಖೆಗೆ ಹೆಚ್ಚು ಹಣಕಾಸು ನೆರವು ನೀಡಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಸಹಾಯವಾಗಿದೆ. ಯಡಿಯೂರಪ್ಪಗೆ ಧನ್ಯವಾದ ತಿಳಿಸುತ್ತೇನೆ. ಜೀವ ಜೀವನವನ್ನು ಸಮತೋಲವಾಗಿ ಕಾಪಾಡಲು ಕೊರೊನಾ ತಡೆಗೆ ಸರ್ಕಾರ ಹಲವು ಕ್ರಮ ತೆಗೆದುಕೊಂಡಿದೆ. ರಾಜ್ಯದ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದೇನೆ. ಕೊವಿಡ್ ನಿಯಮ ಪಾಲಿಸುವಂತೆ ರಾಜ್ಯದ ಜನರಿಗೆ ಮನವಿ ಮಾಡಿದ್ದೇನೆ. ಕನ್ನಡಿಗರನ್ನು ಕೊರೊನಾದಿಂದ ಪಾರು ಮಾಡುವುದಕ್ಕೆ ಕೆಲಸ ಮಾಡುತ್ತೇನೆ. ನಾನು ಅಧಿಕಾರ ಸ್ವೀಕರಿಸಿದ ಮರುದಿನವೇ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಹಾರಕ್ಕೆ ಸೂಚನೆ ನೀಡಿದ್ದೇನೆ. ಪ್ರವಾಹ ಸಂತ್ರಸ್ಥರಿಗೆ ಕೂಡಲೇ ₹10 ಸಾವಿರ ಪರಿಹಾರಕ್ಕೆ ಸೂಚಿಸಿದ್ದೇನೆ. ಅಲ್ಪಹಾನಿ ಆದ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ, ಸಂಪೂರ್ಣ ಹಾಳಾದ ಮನೆಗಳಿಗೆ ₹3ರಿಂದ 5 ಲಕ್ಷ ಪರಿಹಾರ ಘೋಷಿಸಿದ್ದೇನೆ.
ನೆಲ, ಜಲ ವಿಚಾರದಲ್ಲಿ ನಾನು ಯಾವುದೇ ರಾಜಿಯಾಗುವುದಿಲ್ಲ ಕರಾವಳಿ ಭಾಗದ ಬ್ಯಾಂಕಿಂಗ್ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯದಲ್ಲಿ ನಂಬರ್ ಒನ್ ಆಗಬೇಕು. ಯುವಕರಿಗೆ ಉದ್ಯೋಗಾವಕಾಶ ಸಿಗಲು ವಿನೂತನ ಕಾರ್ಯಕ್ರಮ ಕೈಗೊಳ್ಳಲಾಗುತ್ತೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಬಹಳ ಮುಖ್ಯವಾಗಿದೆ. ಕರ್ನಾಟಕ ಪೊಲೀಸ್ ದೇಶದಲ್ಲೇ ನಂಬರ್ ಒನ್ ಆಗಿದೆ. ಕಾನೂನು, ಸುವ್ಯವಸ್ಥೆ ಕಾಪಾಡಲೂ ಪೊಲೀಸರು ಶ್ರಮಿಸಿದ್ದಾರೆ. ಎಲ್ಲ ಪೊಲೀಸರಿಗೂ ಧನ್ಯವಾದ ಎಂದು ಸಿಎಂ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ.
ನೆಲ, ಜಲ ವಿಚಾರದಲ್ಲಿ ನಾನು ಯಾವುದೇ ರಾಜಿಯಾಗುವುದಿಲ್ಲ. ಮೇಕೆದಾಟು, ಮಹದಾಯಿ ಯೋಜನೆ ಮಾಡಬೇಕಾಗಿದೆ. ಮೇಕೆದಾಟು ಯೋಜನೆ ಸಂಬಂಧ ಕೇಂದ್ರದ ಜೊತೆ ಚರ್ಚಿಸುವೆ. ಆದಷ್ಟು ಬೇಗ ಯೋಜನೆ ಆರಂಭಿಸಲು ಅನುಮತಿ ಪಡೆಯುತ್ತೇವೆ. ಅನುಮತಿ ಪಡೆದು ಕಾಮಗಾರಿ ಆರಂಭಿಸುತ್ತೇವೆ. ವಿದ್ಯುತ್ ಉತ್ಪಾದನೆ ಜತೆಗೆ ಕುಡಿಯುವ ನೀರು ಲಭ್ಯವಾಗುತ್ತೆ. ಕರ್ನಾಟಕ, ತಮಿಳುನಾಡಿಗೆ ಈ ಯೋಜನೆಯಿಂದ ಉಪಯೋಗವಾಗುತ್ತೆ. 2023ರವರೆಗೂ ಅಮೃತ ಮಹೋತ್ಸವ ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿಯುವರು ಇಚ್ಛೆ ವ್ಯಕ್ತಪಡಿಸಿದ್ದಾರೆ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮುಂದುವರಿಯಬೇಕು. ಇದಕ್ಕಾಗಿ ಅಮೃತ ಗ್ರಾಮ ಪಂಚಾಯಿತಿ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಅಮೃತ ಗ್ರಾಮ ಪಂಚಾಯಿತಿ ಯೋಜನೆ ಅಮೃತ ಗ್ರಾಮೀಣ ವಸತಿ ಯೋಜನೆಯಡಿ ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆ ಮಾಡುವುದು. ಶೇ.100ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್, ಡಿಜಿಟಲ್ ಗ್ರಂಥಾಲಯಗಳೊಂದಿಗೆ ಶಾಲೆ ಸ್ಥಾಪನೆ. ಶಾಲೆಗಳ ಸಮಗ್ರ ಮೂಲಸೌಕರ್ಯದೊಂದಿಗೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಅಮೃತ ರೈತ ಉತ್ಪಾದಕ ಸಂಸ್ಥೆ ಯೋಜನೆ ಇನ್ನು ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ, ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು ಸಂಸ್ಥೆಗಳ ಆರಂಭ ಮಾಡಲಾಗುವುದು. 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಸಂಸ್ಥೆಗೆ 30 ಲಕ್ಷ ರೂ.ನಂತೆ 3 ವರ್ಷ ನೀಡಲಾಗುವುದು. ಇದಕ್ಕಾಗಿ 225 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಅಮೃತ ರೈತ ಉತ್ಪಾದಕ ಸಂಸ್ಥೆ ಯೋಜನೆಯನ್ನು ಸಿಎಂ ಘೋಷಣೆ ಮಾಡಿದ್ದಾರೆ.
ಅಮೃತ ನಿರ್ಮಲ ನಗರ ಯೋಜನೆ ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಲು ಅಮೃತ ನಿರ್ಮಲ ನಗರ ಯೋಜನೆಯನ್ನು ಸಿಎಂ ಘೋಷಿಸಿದ್ದಾರೆ. ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂಪಾಯಿ ನೀಡಲಾಗುವುದು ಇದಕ್ಕಾಗಿ ಒಟ್ಟು 75 ಕೋಟಿ ರೂ. ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಅಮೃತ ಶಾಲಾ ಸೌಲಭ್ಯ ಯೋಜನೆ ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯಗಳಿಗಾಗಿ 750 ಶಾಲೆಗಳಿಗೆ ತಲಾ 10 ಲಕ್ಷ ರೂಪಾಯಿ ನೀಡಲಾಗುವುದು. ಇದಕ್ಕಾಗಿ ಒಟ್ಟು 75 ಕೋಟಿ ರೂ. ವೆಚ್ಚ ಮಾಡಲಾಗಿದೆ.
750 ಅಂಗನವಾಡಿ ಕೇಂದ್ರಗಳು ಮೇಲ್ದರ್ಜೆಗೆ ಅಮೃತ ಅಂಗನವಾಡಿ ಯೋಜನೆಯಡಿ ಪ್ರತಿ ಅಂಗನವಾಡಿ 1 ಲಕ್ಷ ರೂಪಾಯಿ ನೀಡಲಾಗುವುದು. ಇದಕ್ಕಾಗಿ 7.5 ಕೋಟಿ ರೂ. ವಿನಿಯೋಗಿಸಲಾಗುವುದು. ಅಮೃತ ಸ್ವಸಹಾಯ ಕಿರು ಉದ್ದಿಮೆಯಡಿ 7,500 ಸ್ವಸಹಾಯ ಗುಂಪು ಉದ್ದಿಮೆಗಳಾಗಿ ಬದಲಾವಣೆ ಮಾಡಿ ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ 1 ಲಕ್ಷ ರೂ. ನೀಡಲಾಗುತ್ತದೆ ಎಂದರು.
ಇದನ್ನೂ ಓದಿ: 75th Indian Independence Day: ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ಧ್ವಜಾರೋಹಣ, ಗಗನದಲ್ಲಿ ಹಾರಿದ ತ್ರಿವರ್ಣ ಧ್ವಜ
Published On - 9:56 am, Sun, 15 August 21