Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ಸಾ.ರಾ.ಮಹೇಶ್​​ ಭೇಟಿಯಾದ ಐಎಎಸ್ ಅಧಿಕಾರಿ ಮಣಿವಣ್ಣನ್; ರೋಹಿಣಿ ಸಿಂಧೂರಿ ಬಗ್ಗೆ ಮಾತುಕತೆ ಹೀಗಿತ್ತು

ಮುಖ್ಯಮಂತ್ರಿಯವರನ್ನು ಭೇಟಿಯಾಗುವ ನಿಟ್ಟಿನಲ್ಲಿ ಶಾಸಕ ಸಾರಾ ಮಹೇಶ್ ಅವರು ವಿಧಾನಸೌಧದ ರೂಮ್ ನಂಬರ್ 334 ರ ಬಳಿ ಕಾಯುತ್ತಿದ್ದರು. ಈ ವೇಳೆ ಬಳಿ ಬಂದ ಐಎಎಸ್ ಅಧಿಕಾರಿ ಮಣಿವಣ್ಣನ್ ಕೆಲ ಸಮಯ ಮಾತುಕತೆ ನಡೆಸಿದರು.

ಶಾಸಕ ಸಾ.ರಾ.ಮಹೇಶ್​​ ಭೇಟಿಯಾದ ಐಎಎಸ್ ಅಧಿಕಾರಿ ಮಣಿವಣ್ಣನ್; ರೋಹಿಣಿ ಸಿಂಧೂರಿ ಬಗ್ಗೆ ಮಾತುಕತೆ ಹೀಗಿತ್ತು
ಮಣಿವಣ್ಣನ್, ಸಾರಾ ಮಹೇಶ್ ಮತ್ತು ರೋಹಿಣಿ ಸಿಂಧೂರಿ
Follow us
Rakesh Nayak Manchi
|

Updated on:Feb 20, 2023 | 11:02 PM

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗೀಲ್ (D.Roopa Moudgil) ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ಕೆಲ ವೈಯಕ್ತಿಕ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ನಂತರ ಆರಂಭವಾದ ಇವರಿಬ್ಬರ ನಡುವಿನ ಜಟಾಪಟಿ ಇದೀಗ ತಾರಕಕ್ಕೇರಿ ದೂರುಗಳು ದಾಖಲಾಗಿವೆ. ರೋಹಿಣಿ ಸಿಂಧೂರಿ ಅವರು ಶಾಸಕ ಸಾ.ರಾ.ಮಹೇಶ್ (MLA Sa Ra Mahesh) ಅವರನ್ನು ಭೇಟಿಯಾಗಿ ಸಂಧಾನ ನಡೆಸಿದ್ದಾರೆ ಎಂದು ರೂಪಾ ಆರೋಪಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿಯಾಗಲು ಕಾಯುತ್ತಿದ್ದ ಶಾಸಕ ಸಾ.ರಾ.ಮಹೇಶ್ ಅವರನ್ನು ಭೇಟಿಯಾದ ಐಎಎಸ್ ಅಧಿಕಾರಿ ಮಣಿವಣ್ಣನ್ (IAS Manivannan) ಅವರು, ಅಂದೇ ರೋಹಿಣಿಯವರನ್ನು ಕ್ಷಮಿಸಬೇಕಿತ್ತು ಎಂದು ಹೇಳಿದ್ದಾರೆ. ಶಾಸಕರು ಹಾಗೂ ಮಣಿವಣ್ಣನ್ ನಡುವೆ ಏನೆಲ್ಲಾ ಮಾತುಕತೆ ನಡೆಯಿತು ಎಂಬುದು ಇಲ್ಲಿದೆ.

ಸಾ.ರಾ.ಮಹೇಶ್‌ ಅವರನ್ನು ವಿಧಾನಸೌಧದ ರೂಮ್ ನಂಬರ್ 334 ರ ಬಳಿ ಭೇಟಿಯಾದ ಐಎಎಸ್ ಅಧಿಕಾರಿ ಮಣಿವಣ್ಣನ್ ಮತ್ತು ರಜನೀಶ್ ಗೋಯೆಲ್ ಅವರು ರೋಹಿಣಿ ಸಿಂಧೂರಿ ಅವರ ಬಗ್ಗೆ ಮಾತುಕತೆ ನಡೆಸಿದ್ದಾರೆ. ಶಾಸಕರನ್ನು ಮಾತನಾಡಿಸಿದ ಮಣಿವಣ್ಣನ್, ಈ ವಿಚಾರದಲ್ಲಿ ರೋಹಿಣಿ ಸಿಂದೂರಿಯನ್ನ ನೀವೂ ಕ್ಷಮಿಸಬೇಕಿತ್ತು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಶಾಸಕರು, ನಾನು ಮಾಧ್ಯಮಗಳಲ್ಲೇ ಕ್ಷಮಿಸಿದ್ದೇನೆ ಅಂತಾ ತಿಳಿಸಿದರು. ಈ ವೇಳೆ, ಇದನ್ನ ಬೆಳೆಸಬಾರದು ಎಂದು ಹೇಳುತ್ತಿದ್ದಾಗ ಟಿವಿ ನೈನ್ ಕ್ಯಾಮೆರಾ ನೋಡಿದ ಮಣಿವಣ್ಣನ್ ಸ್ಥಳದಿಂದ ತೆರಳಿದರು. ಈ ವೇಳೆ ಸಾರಾ ಮಹೇಶ್ ಅವರ ಜೊತೆ ಮಾತನಾಡಲು ಎನ್. ಮಹೇಶ್ ಆಗಮಿಸಿದರು.

ಇದನ್ನೂ ಓದಿ: IAS vs IPS: ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ನೀಡಿದ ಆ 3 ಪುಟಗಳ ದೂರಿನಲ್ಲೇನಿದೆ? ಇಲ್ಲಿದೆ ಮಾಹಿತಿ

ಹಾಗಾದರೆ ಸಾರಾ ಮಹೇಶ್ ಮತ್ತು ರೋಹಿಣಿ ಸಿಂಧೂರಿ ನಡುವೆ ನಡೆದಿದ್ದಾದರೂ ಏನು? ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಕಲ್ಯಾಣ ಮಂಟಪದ ಪಕ್ಕದ ಹಾಲ್​ನ ಸ್ಥಳವನ್ನು ಶಾಸಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ವರದಿ ನೀಡಿರುವುದು ಸಾರಾ ಮಹೇಶ್ ಕೆಂಗಣ್ಣಿಗೆ ಗುರಿಯಾಗಿದ್ದರು. ತನ್ನ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದರು. ಅಲ್ಲದೆ, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದಾರೆ ಎಂದು ದಾಖಲೆಯೊಂದಿಗೆ ಆರೋಪಿಸಿ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.

ಶಾಸಕರ ಮೇಲೆ ಮಾಡಿದ ಆರೋಪ ಹಾಗೂ ಶಾಸಕರು ಮಾಡಿದ ಆರೋಪದಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದ ರೋಹಿಣಿ ಸಿಂಧೂರಿ ಬಡ್ತಿ ಸಮಸ್ಯೆಯನ್ನು ಎದುರಿಸಲು ಆರಂಭಿಸಿದ್ದರು. ಈ ನಿಟ್ಟಿನಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾರಾ ಮಹೇಶ್ ನಡುವೆ ಸಂಧಾನ ನಡೆದಿತ್ತು ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಫೋಟೋ ರಿವೀಲ್ ಮಾಡಿದ್ದರು. ರೋಹಿಣಿ ಸಿಂದೂರಿ ಹಾಗೂ ಸಾರಾ ಮಹೇಶ್ ನಡುವಿನ ಸಂಧಾನ ಪ್ರಯತ್ನ ಮಣಿವಣ್ಣನ್ ಸಮ್ಮುಖದಲ್ಲಿ ನಡೆದಿತ್ತು ಅನ್ನೋ ಚರ್ಚೆ ಕೂಡ ಅಧಿಕಾರಿ ವಲಯದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ಜಟಾಪಟಿ: ಸತ್ಯಶೋಧನೆ ಜವಾಬ್ದಾರಿ ಪತ್ರಕರ್ತರದ್ದು ಎಂದ ಪ್ರತಾಪ್ ಸಿಂಹ

ಸಿಎಂ ಬೊಮ್ಮಾಯಿಗೆ ಕೆಲ ದಾಖಲೆಗಳನ್ನ ನೀಡಿದ ಸಾ.ರಾ.ಮಹೇಶ್

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಸಾರಾ ಮಹೇಶ್ ಮುಂದಾಗಿದ್ದರು. ಅದರಂತೆ ಮಣಿವಣ್ಣನ್ ಅವರು ಮಾತನಾಡಿ ತೆರಳಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಶಾಸಕ ಸಾ.ರಾ.ಮಹೇಶ್‌, ಕೆಲವು ದಾಖಲೆಗಳನ್ನ ನೀಡಿ ಮಾತುಕತೆ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Mon, 20 February 23