
ಬೆಂಗಳೂರು, ನವೆಂಬರ್ 07: ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಐಐಐಟಿ ಬೆಂಗಳೂರು ವಿದ್ಯಾರ್ಥಿಗಳು ವಿನೂತನ ಕೃತಕ ಬುದ್ಧಿಮತ್ತೆ (ಎಐ) ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ನ್ಯಾಯಾಲಯದಲ್ಲಿ ವರ್ಷಗಟ್ಟಲೆ ಕಾಲಹರಣವಾಗುವ ಬದಲು, ಮಾತುಕತೆ ಅಥವಾ ಲೋಕ ಅದಾಲತ್ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿರುವ ಪ್ರಕರಣಗಳನ್ನು ಈ ‘ನ್ಯಾಯ ಸೇತು’ಎಐ ಟೂಲ್ ಗುರುತಿಸಿ ಶಿಫಾರಸು ಮಾಡುತ್ತದೆ.
ಐಐಐಟಿ ಬೆಂಗಳೂರಿನ ವಿದ್ಯಾರ್ಥಿಗಳಾದ ಹರ್ಷಿತ್ ಖಟ್ಟರ್, ಆರುಷ್ ಗುಪ್ತಾ, ಉತ್ಕರ್ಷ್ ಗುಪ್ತಾ ಮತ್ತು ಆದರ್ಶ್ ಸಿಂಗ್ ಅವರನ್ನೊಳಗೊಂಡ ತಂಡ ಈ ತಂತ್ರಜ್ಞಾನ ರೂಪಿಸಿದೆ. ‘ಐಡಿಯಾಸ್ ಫಾರ್ ಇಂಡಿಯಾ ಇನ್ನೋವೇಶನ್ ಚಾಲೆಂಜ್ 2026’ ಸ್ಪರ್ಧೆಯಲ್ಲಿ ‘ಇನ್ಕ್ಲೂಸಿವ್ ಇನ್ನೋವೇಶನ್ ಫಾರ್ ಭಾರತ್’ ವಿಭಾಗದಲ್ಲಿ ಈ ತಂಡ ಪ್ರಶಸ್ತಿಯನ್ನು ಗಳಿಸಿದೆ.
ದೇಶದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಸದ್ಯ ಸುಮಾರು 5 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಈ ದೊಡ್ಡ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಿ, ಯಾವ ವಿವಾದಗಳನ್ನು ಮಾಧ್ಯಸ್ಥಿಕೆ ಅಥವಾ ರಾಜಿ ಸಂಧಾನದ ಮೂಲಕ ಬೇಗ ಪರಿಹರಿಸಬಹುದು ಎಂಬುದನ್ನು ಈ ಎಐ ಉಪಕರಣವು ಪತ್ತೆ ಹಚ್ಚುತ್ತದೆ. ಮಾತ್ರವಲ್ಲದೆ, ಆ ಪ್ರಕರಣಗಳನ್ನು ಏಕೆ ರಾಜಿ ಸಂಧಾನಕ್ಕೆ ಪರಿಗಣಿಸಬೇಕು ಎಂಬುದರ ಕಾರಣಗಳನ್ನೂ ಸಹ ಇದು ವಿವರಿಸುತ್ತದೆ.
“ನ್ಯಾಯಾಲಯಗಳ ಮೆಟ್ಟಿಲೇರುವ ಸಾಮಾನ್ಯ ಜನರ ವಿವಾದಗಳು ಸುದೀರ್ಘ ಕಾಲ ವಿಚಾರಣೆಯಲ್ಲಿ ಉಳಿಯುತ್ತವೆ. ಕಾನೂನು ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೆ ಮತ್ತಷ್ಟು ಸುಲಭವಾಗಿಸಲು ನಾವು ‘ನ್ಯಾಯ ಸೇತು’ ರೂಪಿಸಿದ್ದೇವೆ” ಎಂದು ಹರ್ಷಿತ್ ಖಟ್ಟರ್ ತಿಳಿಸಿದ್ದಾರೆ.
“ಸುದೀರ್ಘ ನ್ಯಾಯಾಲಯದ ಪ್ರಕ್ರಿಯೆಗಳಿಲ್ಲದೆ ವಿವಾದಗಳನ್ನು ಪರಿಹರಿಸುವ ಸಾಧ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ನ್ಯಾಯವು ಎಲ್ಲರಿಗೂ ವೇಗವಾಗಿ ಮತ್ತು ಸುಲಭವಾಗಿ ಸಿಗಬೇಕು” ಎಂದು ಆರುಷ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ಲಾಟ್‌ಫಾರ್ಮ್ ಕೇವಲ ಸಹಾಯಕ ಸಾಧನವಾಗಿದ್ದು, ಅಂತಿಮವಾಗಿ ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಒಪ್ಪಿಸುವ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವು ಕಾನೂನು ಸಮಿತಿ ಹಾಗೂ ನ್ಯಾಯಾಲಯಗಳ ಬಳಿಯೇ ಇರುತ್ತದೆ. ವಿದ್ಯಾರ್ಥಿಗಳ ಈ ವಿನೂತನ ಆವಿಷ್ಕಾರವು ನ್ಯಾಯಾಂಗ ವ್ಯವಸ್ಥೆಯಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆಯನ್ನು ತಗ್ಗಿಸಲು ಮತ್ತು ಜನಸಾಮಾನ್ಯರಿಗೆ ತ್ವರಿತ ನ್ಯಾಯ ಒದಗಿಸಲು ಮಹತ್ವದ ಹೆಜ್ಜೆಯಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ