ಬೆಂಗಳೂರಿನಲ್ಲಿ ಕೇಕ್ ಕೊಡಿಸುವುದಾಗಿ ಆಸೆ ತೋರಿಸಿ ಬಾಲಕನ ಕಿಡ್ನಾಪ್; 13 ಗಂಟೆಯಲ್ಲಿ ಆರೋಪಿ ಹೆಡೆಮುರಿ ಕಟ್ಟಿದ ಪೊಲೀಸರು
ಮಕ್ಕಳ ಮೇಲೆ ಎಷ್ಟೇ ನಿಗಾವಹಿಸಿದ್ದರೂ ಅದು ಕಡಿಮೆಯೇ, ಹೌದು, ನಿನ್ನೆ(ಜೂ.17) ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ (Electronic City) ಸಮೀಪದ ದೊಡ್ಡತೋಗೂರು ಬಳಿ ಬರ್ತ್‌ಡೇ ಪಾರ್ಟಿ (Birthday Party) ಇದೆ ಎಂದು ಆಸೆ ತೋರಿಸಿ ಸಿನಿಮಾ ಸ್ಟೈಲ್ನಲ್ಲಿ ಬಾಲಕನನ್ನ ಕಿಡ್ನಾಪ್ ಮಾಡಿದ ಘಟನೆ ನಡೆದಿದ್ದು, ರಾತ್ರಿಯಿಡೀ ಪೊಲೀಸರು ನಿದ್ದೆಗೆಟ್ಟು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಬರ್ತ್‌ಡೇ ಪಾರ್ಟಿ (Birthday Party) ಇದೆ ಎಂದು ಆಸೆ ತೋರಿಸಿ ಸಿನಿಮಾ ಸ್ಟೈಲ್ನಲ್ಲಿ ಬಾಲಕನನ್ನ ಕಿಡ್ನಾಪ್ ಮಾಡಿದ ಘಟನೆ ನಿನ್ನೆ(ಜೂ.17) ಸಂಜೆ 6 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ (Electronic City) ಸಮೀಪದ ದೊಡ್ಡತೋಗೂರು ಬಳಿ ನಡೆದಿದೆ. ರಾಜಸ್ಥಾನ ಮೂಲದ ಮಾರ್ವಾಡಿ ದಂಪತಿಯ 9 ವರ್ಷದ ಬಾಲಕನನ್ನ ಮೊಹಮದ್ ಜಶಿಮುದ್ದೀನ್ ಶೇಕ್(24) ಎಂಬಾತ ಕಿಡ್ನಾಪ್ ಮಾಡಿದ್ದ.
ಪೋಷಕರಿಗೆ ಕರೆ ಮಾಡಿ ಹತ್ತು ಲಕ್ಷಕ್ಕೆ ಬೇಡಿಕೆ
ಮನೆ ಬಳಿಯಿದ್ದ ಬಾಲಕನಿಗೆ ಕೇಕ್ ಕೊಡಿಸುವುದಾಗಿ ಆಸೆ ತೋರಿಸಿ ಕಿಡ್ನಾಪ್ ಮಾಡಿ 14 ಕಿ.ಮೀ ಸುತ್ತಾಡಿದ್ದಾನೆ. ಪೊಲೀಸರ ದಾರಿ ತಪ್ಪಿಸಲು ವೀರಸಂದ್ರ, ಹುಸ್ಕೂರು ಸುತ್ತಮುತ್ತ ಬಾಲಕನ ಜೊತೆ ಆಟೋದಲ್ಲಿ ಓಡಾಟ ನಡೆಸಿದ್ದಾನೆ. ಈ ಮೂಲಕ ಪದೇ ಪದೇ ಲೋಕೇಶನ್ ಬದಲಿಸುತ್ತಿದ್ದ. ಬಳಿಕ ಪೋಷಕರಿಗೆ ಕರೆ ಮಾಡಿ ಹತ್ತು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾನೆ. ಕೊನೆಗೆ ಇಂದು(ಜೂ.18) ಮಧ್ಯಾಹ್ನ ಬಾಲಕ ಸಹಿತ ಆರೋಪಿಯನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅರೆಸ್ಟ್ ಮಾಡಿದ್ದು, ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದೆ.
ಇದನ್ನೂ ಓದಿ:ಪೊಲೀಸ್ ಅಪ್ಪನ ಭಯಕ್ಕೆ ಕಿಡ್ನಾಪ್ ಕಥೆ ಕಟ್ಟಿದ ಮಗ; ಶೇವಿಂಗ್ ಬ್ಲೇಡ್ನಲ್ಲಿ ಕೈ ಕೊಯ್ದುಕೊಂಡು ನಾಟಕ
ಕೇವಲ 13 ಗಂಟೆಗಳಲ್ಲಿ ಬಾಲಕನನ್ನು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ ಪೊಲೀಸರು
ಇನ್ನು ಹಂತಕ, ಬಾಲಕನಿಗೆ ಏನಾದರೂ ಮಾಡುತ್ತಾನೋ ಎನ್ನುವ ಆತಂಕದಲ್ಲಿಯೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇಡೀ ರಾತ್ರಿ ನಿದ್ದೆ ಮಾಡದೆ ಕಾರ್ಯಾಚರಣೆ ಮಾಡಿದ್ದಾರೆ. ಮೊಬೈಲ್ ಲೊಕೇಶನ್ ಸೇರಿ ಹಲವು ದಾಖಲೆಗಳನ್ನು ರಾತ್ರಿಯ ಕಲೆ ಹಾಕಿ ಇನ್ಸ್ ಪೆಕ್ಟರ್ ನವೀನ್, ಪಿಎಸ್ಐ ಸಿದ್ದಪ್ಪ ಸೇರಿ ಹಲವು ಪೊಲೀಸರ ತಂಡ ಬಾಲಕನನ್ನು ರಕ್ಷಿಸಿದ್ದು, ಕೇವಲ 13 ಗಂಟೆಗಳಲ್ಲಿ ಬಾಲಕನನ್ನು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ಇದು ಮೆಚ್ಚುಗೆಗೆ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ