ಕೇಂದ್ರದಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ಆಗಿಲ್ಲವೆಂಬುದು ವಾಸ್ತವ, ಬೊಮ್ಮಾಯಿ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ -ದೇವೇಗೌಡ

| Updated By: ಸಾಧು ಶ್ರೀನಾಥ್​

Updated on: Mar 12, 2022 | 2:19 PM

HD Deve gowda: ಐದು ರಾಜ್ಯಗಳ ಫಲಿತಾಂಶದಲ್ಲಿ ತೀರ್ಪು ಬಿಜೆಪಿ ಪರ ಇದೆ. ನಾನು ಸ್ಥಳೀಯ ಕಾಂಗ್ರೆಸ್ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂತು. ಇಲ್ಲಿಯವರೆಗೆ ಬಿಜೆಪಿಯನ್ನು ಹಿಮ್ಮುಖ ಮಾಡಲು ಸಾಧ್ಯವಾಗಿಲ್ಲ ಅನ್ನೋದು ವಾಸ್ತವಾಂಶ - ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ವ್ಯಾಖ್ಯಾನ 

ಕೇಂದ್ರದಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ಆಗಿಲ್ಲವೆಂಬುದು ವಾಸ್ತವ, ಬೊಮ್ಮಾಯಿ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ -ದೇವೇಗೌಡ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ
Follow us on

ಬೆಂಗಳೂರು: ಪಂಚರಾಜ್ಯ ಚುನಾವಣಾ ಫಲಿತಾಂಶ ಬಿಜೆಪಿ ಪರವಾಗಿ ಬಂದಿದೆ. ಕೇಂದ್ರದಲ್ಲಿ ಡಾ. ಮನಮೋಹನ್​ ಸಿಂಗ್ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಈವರೆಗೆ ಬಿಜೆಪಿಯನ್ನು ಹಿಂದಿಕ್ಕಲು ಆಗಿಲ್ಲವೆಂಬುದು ವಾಸ್ತವ ಎಂದು ಇತ್ತೀಚಿನ ಪಂಚ ರಾಜ್ಯ ಅಸೆಂಬ್ಲಿ ಚುನಾವಣಾ ಫಲಿತಾಂಶದ ಬಳಿಕ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ವ್ಯಾಖ್ಯಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜೆಡಿಎಸ್ ಮುಖ್ಯ ಕಚೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಸುದ್ದಿಗೋಷ್ಠಿ ನಡೆಸಿದ್ದು, ಹಾಲಿ ರಾಜಕೀಯ ಬೆಳವಣಿಗೆಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ಚುನಾವಣೆಯನ್ನು ನಿಷ್ಠೆಯಿಂದ ಮಾಡ್ತಾರೆ- HDD
ಐದು ರಾಜ್ಯಗಳ ಫಲಿತಾಂಶದಲ್ಲಿ ತೀರ್ಪು ಬಿಜೆಪಿ ಪರ ಇದೆ. ನಾನು ಸ್ಥಳೀಯ ಕಾಂಗ್ರೆಸ್ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂತು. ಇಲ್ಲಿಯವರೆಗೆ ಬಿಜೆಪಿಯನ್ನು ಹಿಮ್ಮುಖ ಮಾಡಲು ಸಾಧ್ಯವಾಗಿಲ್ಲ ಅನ್ನೋದು ವಾಸ್ತವಾಂಶ. ಮೋದಿ ಚುನಾವಣೆಯನ್ನು ನಿಷ್ಠೆಯಿಂದ ಮಾಡ್ತಾರೆ. ನಾಲ್ಕು ದಿಕ್ಕಿನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತಿದ್ದಾರೆ. ಈ ಭಾವನೆ ನಮ್ಮಲ್ಲೂ ಬರಬೇಕು. ಎಂದು ನುಡಿದರು.

ಬೊಮ್ಮಾಯಿ ಸರ್ಕಾರ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದೆಯಲ್ವಾ?  
ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಪ್ರಶ್ನೆ ಬಂದಾಗ ಯಾಕೆ ಅವಧಿ ಪೂರ್ವ ಅಗಬೇಕು? ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದೆಯಲ್ವಾ? ಎಂದು ದೇವೇಗೌಡರು ಅಭಿಪ್ರಾಯಪಟ್ಟರು.

ನಾವು ಚುನಾವಣೆ ಎದುರಿಸಲು ರೆಡಿ. ಆದ್ರೆ ಅಷ್ಟು ಸುಲಭವಲ್ಲ. ಯಡಿಯೂರಪ್ಪ ಸಹ ಇದೇ ಮಾತನ್ನು ಹೇಳಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಯಶಸ್ವಿಯಾಗೋದು ಕೂಡಾ ಸುಲಭವಲ್ಲ. ಕರ್ನಾಟಕ ರಾಜಕಾರಣ ಮತ್ತು ಬೇರೆ ಕಡೆ ರಾಜಕಾರಣ ಬಹಳ ವ್ಯತ್ಯಾಸ ಇದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಕರ್ನಾಟಕ ಪಾಲಿಟಿಕ್ಸ್ ಅಷ್ಟು ಸುಲಭವಿಲ್ಲ ಎಂದರು.

ರಾಜ್ಯ ಬಜೆಟ್​​ನಲ್ಲಿ ನೀರಾವರಿ ಅನುದಾದನದ ಬಗ್ಗೆ ವ್ಯಂಗ್ಯ:
ಕೃಷ್ಣಾ ಮೇಲ್ದಂಡೆಗೆ ಬಜೆಟ್‌ನಲ್ಲಿ 5,000 ಕೋಟಿ ರೂ ಇಟ್ಟಿದ್ದಾರೆ. ಈ ಹಣ ಅದ್ಯಾವ ಖುಷಿಗೆ ಇಟ್ಟಿದ್ದಾರೆಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ವರಿಷ್ಠ ಹೆಚ್‌ಡಿ ದೇವೇಗೌಡ ಪ್ರಶ್ನಿಸಿದರು. ನಾನು ಪ್ರಧಾನಿ ಆಗಿದ್ದಾಗ ಕಾವೇರಿ ಬೇಸಿನ್ ಗೆ ಅನುದಾನ ಕೊಟ್ಟಿದ್ದೆ. ಮೊನ್ನೆಯ ರಾಜ್ಯ ಬಜೆಟ್​ನಲ್ಲಿ ನನ್ನ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ 3 ಸಾವಿರ ಕೋಟಿ ರೂಪಾಯಿ ಅನುದಾನ ಇಟ್ಟಿದ್ದಾರೆ. ಆ ಯೋಜನೆ ವೆಚ್ಚವೇ ಸುಮಾರು 8 ಸಾವಿರ ಕೋಟಿ ಇದೆ. ಈ 3 ಸಾವಿರ ಕೋಟಿಯಲ್ಲಿ ಅದೇನು ಮಾಡುತ್ತಾರೋ? ಎಂದೂ ಗೌಡರು ವ್ಯಂಗ್ಯವಾಡಿದರು.

ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆ ಹೊಗಳಿದ ಜೆಡಿಎಸ್ ವರಿಷ್ಠ ದೇವೇಗೌಡ!:

ಮಾರ್ಚ್​ 20 ನೇ ತಾರೀಖಿನಿಂದ ಜೆಡಿಎಸ್ ಮುಂದಿನ ಹೋರಾಟ:
ನಾನು ಚನ್ನಪಟ್ಟಣ, ರಾಮನಗರ ಮತ್ತು ಬೆಂಗಳೂರಿಗೆ ನೀರು ತರಿಸಿದೆ. ಬಿಜೆಪಿ, ಜೆಡಿಎಸ್ ಏನು‌ ಮಾಡಿದೆ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದರು. ನೀವೇ ಉಳಿಸಿಕೊಡಬೇಕು ಅಂತ ನನ್ನ ಮನೆಗೆ ಬಂದಿದ್ದರು. ಕಾವೇರಿ ಕೊಳ್ಳದಲ್ಲಿ ನೀರು ತಂದೇ ಬಿಟ್ವೆವು ಎಂದು ಕಾಂಗ್ರೆಸ್ ನವರು ಹೇಳ್ತಾರೆ. 20 ನೇ ತಾರೀಖು ಮುಂದಿನ ಹೋರಾಟದ ಕಾರ್ಯಕ್ರಮ ರೂಪಿಸುತ್ತೇವೆ. ಎರಡೆರಡು ಜಿಲ್ಲೆಗೆ ಒಂದು ಸಭೆ ಮಾಡುತ್ತೇವೆ. ಈ ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ. ನಾನು ಪಿಎಂ ಆದೆ, ಇಲ್ಲಿ ಪಟೇಲ್ ಮತ್ತು ಸಿದ್ದರಾಮಯ್ಯ ಆಡಳಿತ ಮಾಡಿದ್ರು. ಬಳಿಕ ನಡೆದ ಚುನಾವಣೆಯಲ್ಲಿ ಬರೀ ಒಂದು ಸೀಟ್ ಗೆದ್ದರು! ಮೂರೂವರೆ ವರ್ಷ ರಾಜ್ಯ ಆಳ್ವಿಕೆ ಮಾಡಿದರು. ಒಬ್ಬ ಕನ್ನಡಿಗ ಪ್ರಧಾನ ಮಂತ್ರಿ ಆಗೋದನ್ನು ಸಹಿಸಲು ಇವರಿಗೆ ಆಗಲಿಲ್ಲ. ಏನೇ ಆಗಲಿ ಪಕ್ಷ ಉಳಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. 20ನೇ ತಾರೀಕು ಬೆಂಗಳೂರಿನಲ್ಲೇ ಸಮಾವೇಶ ಮಾಡುತ್ತೇವೆ ಎಂದು ದೇವೇಗೌಡರು ಗುಡುಗಿದರು.

ಕಾಂಗ್ರೆಸ್ ಎಂಎಲ್ಸಿ ಸಿ.ಎಂ. ಇಬ್ರಾಹಿಂ ಜಿಡಿಎಸ್ ಸೇರ್ತಾರಾ?
ಕಾಂಗ್ರೆಸ್ ಎಂಎಲ್ಸಿ ಸಿ.ಎಂ. ಇಬ್ರಾಹಿಂ ಪಕ್ಷ ಸೇರುವ ವಿಚಾರ ಪ್ರಸ್ತಾಪಿಸಿದ ದೇವೇಗೌಡ, ಇದು ಹಲವಾರು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಆದ್ರೆ ಇದರ ಬಗ್ಗೆ ನನ್ನ ಬಳಿ ಬಂದು ಅವರು ಪಕ್ಷಕ್ಕೆ ಸೇರುವ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಈ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಎಲ್ಲಾ ಮುಖಂಡರ ಜೊತೆ ಮಾತನಾಡಿ ಸಿ.ಎಂ. ಇಬ್ರಾಹಿಂ ಪಕ್ಷ ಸೇರುವ ಬಗ್ಗೆ ನಿರ್ಧಾರ ಮಾಡೋಣ. ಎಲ್ಲವೂ ಸಮತೋಲಿತವಾಗಿ ಮಾಡಬೇಕಿದೆ. ಕಾಂಗ್ರೆಸ್ ನಲ್ಲಿ ಅವರಿಗೆ ಸಾಕಷ್ಟು ಪೆಟ್ಟು ಕೊಟ್ಟರು. ಆ ನೋವು ಅವರಿಗೆ ಇದೆ, ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

ಮುಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳ ವಿರುದ್ಧ ಅಭ್ಯರ್ಥಿ ಹಾಕ್ತೇವೆ: ದೇವೇಗೌಡ
ಬಜೆಟ್ ಭಾಷಣದಲ್ಲಿ ಕುಮಾರಸ್ವಾಮಿ ಭಾಷಣ ವಿಚಾರವಾಗಿ ಮಾತನಾಡಿದ ದೇವೇಗೌಡರು ಕುಮಾರಸ್ವಾಮಿ ಅನಾವಶ್ಯಕ ಏನಾದರೂ ಮಾತಾಡಿದ್ದಾರಾ? ಪ್ರತಿಯೊಂದು ಅಂಕಿ ಅಂಶ ಇಟ್ಕೊಂಡು ಮಾತಾಡಿದ್ದಾರೆ. ಜನ ಮೆಚ್ಚಿಸಲು ಹಾಗೆ ಹೀಗೆ ಮಾತನಾಡಿಲ್ಲ. ಮುಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳ ವಿರುದ್ಧ ಅಭ್ಯರ್ಥಿ ಹಾಕುತ್ತೇವೆ. ಚುನಾವಣಾ ಪೂರ್ವ ಮೈತ್ರಿ ಇಲ್ಲ. ಜನರ ಮುಂದೆ ಹೋಗುವುದೇ ನಮ್ಮ ನಿರ್ಣಯ. ಒಬ್ಬರೋ ಇಬ್ಬರೋ ಪಕ್ಷ ಬಿಟ್ಟರೆ ನಾವು ಹೆದರಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Also Read:
ಆಪ್​ ಟಾರ್ಗೆಟ್​: ಪಂಜಾಬ್​ ಆಯ್ತು ಈಗ ಇನ್ನೆರಡು ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದೇವೆ ಎಂದ ಆಮ್​ ಆದ್ಮಿ ಪಾರ್ಟಿ ಮುಖಂಡ

Also Read:
ಸೋಲಿಗೆ ಮಾಧ್ಯಮಗಳು ಕಾರಣವೆಂದ ಮಾಯಾವತಿ; ಟಿವಿ ಡಿಬೇಟ್​ಗಳನ್ನು ಬಹಿಷ್ಕರಿಸಿದ ಬಹುಜನ ಸಮಾಜ ಪಕ್ಷ

Published On - 1:24 pm, Sat, 12 March 22