ಬೆಂಗಳೂರಿನಲ್ಲಿ ಸಶಸ್ತ್ರ ಪಡೆಯ ಅಧಿಕಾರಿಗೆ ರಕ್ತ ಬರುವ ಹಾಗೆ ಹಲ್ಲೆ ಆರೋಪ: ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಭಾರತೀಯ ಸಶಸ್ತ್ರ ಪಡೆಯ ಅಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ. ಹಲ್ಲೆಗೊಳಗಾದ ಅಧಿಕಾರಿ ತಮ್ಮ ಮೇಲಾದ ಹಲ್ಲೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಹಲ್ಲೆ ಅಪ್ರಚೋದಿತವಾಗಿ ನಡೆದಿದೆಯೇ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಬೆಂಗಳೂರಿನಲ್ಲಿ ಸಶಸ್ತ್ರ ಪಡೆಯ ಅಧಿಕಾರಿಗೆ ರಕ್ತ ಬರುವ ಹಾಗೆ ಹಲ್ಲೆ ಆರೋಪ: ವಿಡಿಯೋ ವೈರಲ್
ಭಾರತೀಯ ಸಶಸ್ತ್ರ ಪಡೆಯ ಅಧಿಕಾರಿ

Updated on: Apr 21, 2025 | 4:05 PM

ಬೆಂಗಳೂರು, ಏಪ್ರಿಲ್​ 21: ಭಾರತೀಯ ಸಶಸ್ತ್ರ ಪಡೆಯ (Indian Armed Force) ಅಧಿಕಾರಿಯೊಬ್ಬರಿಗೆ ಬೆಂಗಳೂರಿನಲ್ಲಿ (Bengaluru) ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಘಟನೆ ನಡೆದಿದೆ. ಅಧಿಕಾರಿಯು ತಮ್ಮ ಪತ್ನಿಯೊಂದಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಪರಿಚಿತ ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಾಗದ ಅಧಿಕಾರಿಯ ಮುಖ ಮತ್ತು ತಲೆಗೆ ಗಾಯಗಳಾಗಿದ್ದು, ರಕ್ತ ಹರಿದಿದೆ. ತಮ್ಮ ಮೇಲೆ ಆದ ಹಲ್ಲೆ ಕುರಿತು ವಿವರಿಸಿ ಅಧಿಕಾರಿ ವಿಡಿಯೋ ಮಾಡಿದ್ದಾರೆ.

ಈ ವಿಡಿಯೋವನ್ನು ಅಮಿತಾಬ್​ ಚೌದರಿ ಎಂಬುವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, “ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷ ಅಥವಾ ಗುಂಪುಗಳು ಭಾಷೆ, ಜಾತಿ ಮತ್ತು ರಾಜಕಾರಣದ ಹೆಸರಿನಲ್ಲಿ ಒಡೆದು ಆಳುವುದು ಕರ್ನಾಟಕ ಮತ್ತು ಭಾರತಕ್ಕೆ ಹಾನಿಕಾರಕ” ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ
ಓಂ ಪ್ರಕಾಶ್​ ಕೊಲೆ ಪ್ರಕರಣ: ನಿವೃತ್ತ ಪೊಲೀಸ್‌ ಮಹಾನಿರ್ದೇಶಕರ ಪತ್ನಿ ಬಂಧನ
ಓಂ ಪ್ರಕಾಶ್​ ಕೊಲೆ: ತನಿಖಾಧಿಕಾರಿಗಳ ಎದುರು ಕೊಲೆ ರಹಸ್ಯ ಬಿಚ್ಚಿಟ್ಟ ಪಲ್ಲವಿ
ಉತ್ತರ ಕನ್ನಡದ ಜೋಯಿಡಾದಲ್ಲಿ ಶ್ರೀಗಂಧ ತೋಟ ಹೊಂದಿದ್ದ ಓಂ ಪ್ರಕಾಶ್
ಓಂ ಪ್ರಕಾಶ್​ ಕೊಲೆ: ಪತಿಯನ್ನು 8-10 ಬಾರಿ ಇರಿದು ಕೊಂದ ಪತ್ನಿ?

“ನಾವು ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿರುವ ಡಿಆರ್‌ಡಿಒ ಕಾಲೋನಿಯಲ್ಲಿ ವಾಸವಾಗಿದ್ದು, ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇವು. ಈ ವೇಳೆ ನಮ್ಮ ಕಾರನ್ನು ಹಿಂಬಾಲಿಸಿಕೊಂಡು ಬಂದ ಓರ್ವ ಬೈಕ್​ ಸಾವರ, ನಮಗೆ ಅಡ್ಡ ಹಾಕಿದ್ದಾನೆ. ಆಗ ನಾನು ಕಾರು ನಿಲ್ಲಿಸಿದೆ. ನಂತರ ಆ ವ್ಯಕ್ತಿ ಏಕಾಏಕಿ ಕನ್ನಡದಲ್ಲಿ ನನ್ನನ್ನು ನಿಂದಿಸಲು ಪ್ರಾರಂಭಿಸಿದನು. ನನ್ನ ಕಾರಿನ ಮೇಲೆ ಡಿಆರ್‌ಡಿಒ ಸ್ಟಿಕ್ಕರ್ ನೋಡಿ ‘ನೀವು ಡಿಆರ್‌ಡಿಒ ಜನರು’ ಎಂದು ಹೇಳಿ, ನನ್ನ ಹೆಂಡತಿಯನ್ನೂ ಅವಾಚ್ಯ ಶಬ್ಧಗಳಿಂದ ನಿಂದಿಸಿದನು. ಮತ್ತು ನನಗೆ ಅದು ಸಹಿಸಲಾಗಲಿಲ್ಲ. ನಾನು ಕಾರಿನಿಂದ ಇಳಿದ ಕ್ಷಣ, ಆ ವ್ಯಕ್ತಿ ಕೀಲಿಯಿಂದ ನನ್ನ ಹಣೆಗೆ ಹೊಡೆದನು” ಎಂದು ಹೇಳಿದರು.

” ಆಗ ನಾನು, ಗಡಿಯಲ್ಲಿ ನಿಂತು ನಾನು ನಿಮ್ಮನ್ನು ರಕ್ಷಿಸುತ್ತೇನೆ. ನಮ್ಮ ಜೊತೆ ನೀವು ಈ ರೀತಿ ವರ್ತಿಸುವುದು ಸರಿಯಲ್ಲ. ಭೂ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಅಧಿಕಾರಿಗಳನ್ನು ಏಕೆ ಈ ರೀತಿ ನಡೆಸಿಕೊಳ್ಳುತ್ತೀರಿ ಎಂದು ಕೂಗಿದೆ. ಬಳಿಕ, ಸುತ್ತಮುತ್ತಲಿನ ಜನರು ಸೇರಿದರು. ಅವರೂ ಕೂಡ ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ನಂತರ, ಬೈಕ್​ ಸವಾರ ಕಲ್ಲು ತೆಗೆದುಕೊಂಡು ನನ್ನ ಕಾರಿನ ಗಾಜು ಒಡೆಯಲು ಪ್ರಯತ್ನಿಸಿದನು. ಆದರೆ, ಅದು ನನ್ನ ತಲೆಗೆ ಬಡಿಯಿತು. ಇದು ನನ್ನ ಸ್ಥಿತಿ” ಎಂದು ಅಧಿಕಾರಿ ಹೇಳಿದ್ದಾರೆ.

“ಈ ವೇಳೆ ಮಧ್ಯ ಪ್ರವೇಶಿಸಿದ ನನ್ನ ಹೆಂಡತಿ, ನನ್ನನ್ನು ಕಾರಿನಲ್ಲಿ ಕೂರಿಸಿ ಕರೆದುಕೊಂಡು ಹೋದರು. ನಾವು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದೆವು. ಆದರೆ, ಅಲ್ಲಿ ನಮಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಮಾಜಿ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ 

“ಕರ್ನಾಟಕ ಏಕೆ ಹೀಗಾಯಿತು… ನನಗೆ ನಂಬಲು ಆಗುತ್ತಿಲ್ಲ. ದೇವರು ನಮಗೆ ಸಹಾಯ ಮಾಡುತ್ತಾನೆ. ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ನಮಗೆ ಸಹಾಯ ಮಾಡದಿದ್ದರೆ, ನಾನು ಪ್ರತೀಕಾರ ತೀರಿಸುತ್ತೇನೆ” ಎಂದು ಕಾರಿನಲ್ಲಿ ವೀಡಿಯೊ ರೆಕಾರ್ಡ್ ಮಾಡುವಾಗ ಅಧಿಕಾರಿ ಹೇಳಿದರು. ಈ ಹಲ್ಲೆ ಅಪ್ರಚೋದಿತವಾಗಿ ನಡೆದಿದೆಯೇ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಸಶಸ್ತ್ರ ಪಡೆಯ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ  ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಧಿಕಾರಿ, ಮಪ್ತಿಯಲ್ಲಿದ್ದು, ಕಾರು‌ ಚಾಲನೆ ಮಾಡುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಕಾರಿಗೆ ಟಚ್ ಆಗಿದೆ. ಈ ವಿಚಾರಕ್ಕೆ ಬೈಕ್ ಸವಾರರು ಮತ್ತು ಅಧಿಕಾರಿ ನಡುವೆ ಗಲಾಟೆಯಾಗಿ ಪರಸ್ಪರ ಹೊಡದಾಡಿದ್ದಾರೆ. ಭಾಷೆ ವಿಚಾರಕ್ಕೆ ಗಲಾಟೆ ಆಗಿಲ್ಲ ಎಂದು ಎಫ್​ಐಆರ್ ನಲ್ಲಿ ದಾಖಲಾಗಿದೆ. ಆರೋಪಿಗಳಿಗಾಗಿ ಬೈಯಪ್ಪನಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Mon, 21 April 25