ಕೆಆರ್ ಸರ್ಕಲ್ ಅಂಡರ್ಪಾಸ್ ನಲ್ಲಿ ಯುವತಿ ಸಾವು: ಸುಮೋಟೋ ಕೇಸ್ ತನಿಖೆ ಚುರುಕುಗೊಳಿಸಿದ ಲೋಕಾಯುಕ್ತ
ಕೆ.ಆರ್.ಸರ್ಕಲ್ ಅಂಡರ್ ಪಾಸ್ನಲ್ಲಿ ಮಳೆ ನೀರಿಗೆ ಯುವತಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಬೆಂಗಳೂರು: ನಗರದ ಕೆ.ಆರ್.ಸರ್ಕಲ್ ಅಂಡರ್ ಪಾಸ್ನಲ್ಲಿ (KR Circle Underpass) ಮಳೆ ನೀರಿಗೆ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ (Lokayukta) ಸ್ವಯಂ ಪ್ರೇರಿತ (Suomoto) ಪ್ರಕರಣ ದಾಖಲಿಸಿಕೊಂಡಿದೆ. ಉಪಲೋಕಾಯುಕ್ತ-2 ಅವರ ಸೂಚನೆ ಮೇರೆಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಲೋಕಾಯುಕ್ತ ಜ್ಯುಡಿಷಿಯಲ್ ವಿಂಗ್, ಘಟನೆ ಕುರಿತು 2 ವಾರಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಬಿಬಿಎಂಪಿಯ 8 ಅಧಿಕಾರಿಗಳಿಗೆ ನೋಟೀಸ್ ನೀಡಿದೆ.
ಅಂಡರ್ ಪಾಸ್ನಲ್ಲಿ ನೀರು ತುಂಬಿದ್ದು ಹೇಗೆ?, ಮಳೆ ನೀರು ಹೊರ ಹೋಗಲು ಕೈಗೊಂಡ ಕ್ರಮಗಳು ಏನು.? ಎಂಬುವದರ ಬಗ್ಗೆ ವರದಿ ನೀಡಲು ಸೂಚಿಸಿದೆ. ಬಿಬಿಎಂಪಿ ಚೀಫ್ ಕಮೀಷನರ್, ಪೂರ್ವ ವಲಯದ ಕಮೀಷನರ್, ಬಿಬಿಎಂಪಿ ಶಿವಾಜಿನಗರ ವ್ಯಾಪ್ತಿಯ ಎಕ್ಸಿಕ್ಯುಟಿವ್ ಇಂಜಿನಿಯರ್, ಎಇಇ ಸಂಪಂಗಿರಾಮನಗರ ವಾರ್ಡ್, ಎಇ ಸಂಪಂಗಿರಾಮನಗರ ವಾರ್ಡ್, ಎಕ್ಸಿಕ್ಯುಟಿವ್ ಇಂಜಿನಿಯರ್ ಸ್ಟಾರ್ಮ್ ವಾಟರ್ ಬಿಬಿಎಂಪಿ, ಎಇಇ ಬಿಬಿಎಂಪಿ ಸ್ಟಾರ್ಮ್ ವಾಟರ್ ಹಾಗೂ ಅಸಿಸ್ಟೆಂಟ್ ಇಂಜಿನಿಯರ್ ಅವರಿಗೆ ನೋಟಿಸ್ ನೀಡಿದೆ.
ಅಲ್ಲದೇ ಲೋಕಾಯುಕ್ತ ಐಜಿಪಿ ಅವರು ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಕೆಆರ್ ಸರ್ಕಲ್ ದುರ್ಘಟನೆ ನಂತರ ಬಿಬಿಎಂಪಿ ಅಲರ್ಟ್: ನಗರದ ಅಂಡರ್ ಪಾಸ್ಗಳ ಸರ್ವೆ ನಡೆಸಲು ಸೂಚನೆ
ಕೆ.ಆರ್.ಸರ್ಕಲ್ ಅಂಡರ್ ಪಾಸ್ನಲ್ಲಿ ಸಿಲುಕಿ ಯುವತಿ ಸಾವು
ಭಾನುವಾರ (ಮೇ.21) ರಜಾ ದಿನ ಹಿನ್ನೆಲೆ ಬೆಂಗಳೂರಿನ ಇನ್ಫೋಸಿಸ್ನ ಉದ್ಯೋಗಿ ಯುವತಿ ಭಾನುರೇಖಾ (22) ಆಂಧ್ರಪ್ರದೇಶದಲ್ಲಿದ್ದ ಕುಟುಂಬಕ್ಕೆ ಬೆಂಗಳೂರು ತೋರಿಸಲು ಕರೆಯಿಸಿಕೊಂಡಿದ್ದರು. ಹೀಗೆ ಕಬ್ಬನ್ ಪಾರ್ಕ್ ವೀಕ್ಷಣೆ ವೇಳೆ ಮಳೆ ಆರಂಭವಾದ ಹಿನ್ನೆಲೆ ಮನೆಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ಕೆಆರ್ ಸರ್ಕಲ್ ಬಳಿ ಭಾರೀ ಮಳೆಗೆ ಅಂಡರ್ಪಾಸ್ನಲ್ಲಿ ನೀರು ತುಂಬಿತ್ತು. ಆದರೆ ಅಂಡರ್ಪಾಸ್ನ ಮಟ್ಟ ತಿಳಿಯದೇ ಕಾರು ಚಾಲಕ ನೀರಿನಲ್ಲಿ ಕಾರು ಚಲಾಯಿಸಿದ್ದು, ಮಧ್ಯ ಭಾಗಗಕ್ಕೆ ತಲುಪುತ್ತಿದ್ದಂತೆ ಕಾರು ಮುಳುಗಡೆಯಾಗಿತ್ತು. ಚಾಲಕ ಕಾರನ್ನು ಹಿಂದಕ್ಕೆ ಕೊಂಡೊಯ್ಯಲು ಯತ್ನಿಸಿದರೂ ಸಾಧ್ಯವಾಗದೆ ಕಾರು ಮುಳುಗಡೆಯಾಗಿತ್ತು.
ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಕ್ಕೆ ದಾವಿಸಿದ್ದರು. ಘಟನೆ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ದೌಡಾಯಿಸಿ ಹರಸಾಹಸಪಟ್ಟು ಆರು ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಈ ವೇಳೆಗಾಗಲೆ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೆ ಅವರನ್ನು ಹತ್ತಿರದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಆಸ್ಪತ್ರೆ ಸಿಬ್ಬಂದಿ ಆರಂಭದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದು, ಸುಮಾರು ಅರ್ಧಗಂಟೆಗಳ ಕಾಲ ಯುವತಿಯನ್ನು ಹೊರಗೆ ಇರಿಸಲಾಗಿತ್ತು. ಪತ್ರಕರ್ತರು ಹಾಗೂ ಸ್ಥಳೀಯರು ತರಾಟೆಗೆ ತೆಗೆದುಕೊಂಡ ನಂತರ ವೈದ್ಯರು ಯುವತಿಯನ್ನು ಆಸ್ಪತ್ರೆಯೊಳಗೆ ಸೇರಿಸಿಕೊಂಡು ಚಿಕಿತ್ಸೆ ನೀಡಲು ಆರಂಭಿಸಿದ್ದರು. ಆದರೆ, ಅಷ್ಟರಾಗಲೇ ಯುವತಿಯ ಜೀವ ಹೋಗಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:08 pm, Mon, 29 May 23