ರೈತನಿಗೆ ಅಪಮಾನ: ಬಿಬಿಎಂಪಿ ನೋಟಿಸ್​​ಗೆ ಜಿಟಿ ಮಾಲ್ ಉತ್ತರಿಸಿದ್ದು ಹೀಗೆ ​​

| Updated By: ವಿವೇಕ ಬಿರಾದಾರ

Updated on: Jul 19, 2024 | 12:21 PM

ಪಂಚೆಯುಟ್ಟುಕೊಂಡು ಬಂದ ರೈತನಿಗೆ ಮಾಲ್​ ಒಳಗಡೆ ಪ್ರವೇಶ ನೀಡದೆ ಜಿಟಿ ಮಾಲ್​ನ​ ಸೆಕ್ಯೂರಿಟಿ ಅವಮಾನಿಸಿದ್ದನು. ಇದು ಜಿಟಿ ಮಾಲ್​ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದು, 7 ದಿನ ಮಾಲ್​ ಬಂದ್​ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ನೋಟಿಸಿಗೆ ಜಿಟಿ ಮಾಲ್​ ಸಿಇಒ ಉತ್ತರ ನೀಡಿದ್ದಾರೆ.

ರೈತನಿಗೆ ಅಪಮಾನ: ಬಿಬಿಎಂಪಿ ನೋಟಿಸ್​​ಗೆ ಜಿಟಿ ಮಾಲ್ ಉತ್ತರಿಸಿದ್ದು ಹೀಗೆ ​​
ಜಿಟಿ ಮಾಲ್​​
Follow us on

ಬೆಂಗಳೂರು, ಜುಲೈ 19: ಪಂಚೆಯುಟ್ಟ ರೈತನಿಗೆ ಒಳಗಡೆ ಪ್ರವೇಶ ನೀಡದಿರಲು ಕಾರಣವೇನು ಎಂದು ಬಿಬಿಎಂಪಿ (BBMP) ಅಧಿಕಾರಿಗಳು ಜಿಟಿ ಮಾಲ್​​ಗೆ (GT Mall) ನೋಟಿಸ್ ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನೋಟಿಸ್​ಗೆ ​ಜಿಟಿ ಮಾಲ್ ಸಿಇಒ ಪ್ರಶಾಂತ್ ಆನಂದ್ ಉತ್ತರಿಸಿದ್ದು, “ಘಟನೆಯಿಂದ ನಮಗೂ ತೀವ್ರ ಬೇಸರವಾಗಿದೆ. ಪಂಚೆ ನಮ್ಮ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಉಡುಗೆಯಾಗಿದೆ. ಜಿಟಿ ಮಾಲ್​ನಲ್ಲೂ ಸಾಕಷ್ಟು ಮಳಿಗೆಗಳಲ್ಲಿ ಪಂಚೆ ಮಾರಲಾಗುತ್ತಿದೆ. ರೈತನನ್ನು ಒಳಗೆ ಬಿಡದ ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಪಂಚೆ ಧರಿಸುವವರಿಗೆ ಮಾಲ್ ಪ್ರವೇಶವಿಲ್ಲವೆಂಬುದು ಶುದ್ಧ ಸುಳ್ಳು. ಈ ಹಿಂದೆಯೂ ಹಲವು ಗ್ರಾಹಕರು ಪಂಚೆ ಧರಿಸಿ ಮಾಲ್​ಗೆ ಬಂದಿದ್ದಾರೆ. ಇಂತಹ ಘಟನೆ ಮರುಕಳಿಸುವುದಿಲ್ಲವೆಂದು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಏನಿದು ಘಟನೆ

ಜುಲೈ 17 ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್​ಗೆ ಹಾವೇರಿ ಮೂಲದ ಕುಟುಂಬವೊಂದು ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿತ್ತು. ಅದರಲ್ಲಿ ಫಕೀರಪ್ಪ ಎಂಬ ವೃದ್ಧರೊಬ್ಬರು ಪಂಚೆ ಧರಿಸಿ ಬಂದಿದ್ದರು. ಪಂಚೆ ಧರಿಸಿದ್ದಾರೆ ಎಂಬ ಏಕಮಾತ್ರ ಕಾರಣಕ್ಕೆ ಜಿ.ಟಿ.ಮಾಲ್​ನ ಸೆಕ್ಯೂರಿಟಿ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದರು.

ವೃದ್ಧನನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿದ್ದರು. ಇದರಿಂದ ತೀವ್ರ ಅವಮಾನಕ್ಕೊಳಗಾದ ಫಕೀರಪ್ಪನವರ ಪುತ್ರ ನಾಗರಾಜ್ ಮಾಲ್​ನವರಿಗೆ ಒಳಗೆ ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಮಾಲ್​ನವನು ಯಾವಾಗ ಪ್ರವೇಶವನ್ನು ನೀರಾಕರಣೆ ಮಾಡಿದ ನಾಗರಾಜ್ ವಿಡಿಯೋ ಮಾಡಿ ತಮ್ಮ ನೋವು ತೋಡಿಕೊಂಡರು.

ಇದನ್ನೂ ಓದಿ: ಮತ್ತೊಮ್ಮೆ ಕ್ಷಮೆಯಾಚಿಸಿ ಸ್ವಯಂಪ್ರೇರಿತವಾಗಿ ಜಿಟಿ ಮಾಲ್ ಬಂದ್ ಮಾಡಿದ ಮಾಲೀಕ

ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಯ ಕಾರ್ಯಕರ್ತರು ಪಂಚೆ ಉಟ್ಟು ಜಿಟಿ ಮಾಲ್​ ಮುಂದೆ ಪ್ರತಿಭಟನೆ ಮಾಡಿದರು. ಸಂಘಟನೆಗಳ ಹೋರಾಟಕ್ಕೆ ಬಗ್ಗಿದ ಜಿಟಿ ಮಾಲ್​ ಆಡಳಿತ ಮಂಡಳಿ ರೈತ ಫಕೀರಪ್ಪ ಅವರಿಗೆ ಕ್ಷಮೆಯಾಚಿಸಿ, ಸನ್ಮಾನ ಮಾಡಿದರು.

ರೈತ ಫಕೀರಪ್ಪ ಜೊತೆ ಮಾಲ್ ವೀಕ್ಷಿಸಿದ ಶಾಸಕ  ​

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್​ ಕೋಳಿವಾಡ ಅವರು ಶುಕ್ರವಾರ ರೈತ ಫಕೀರಪ್ಪ ಅವರೊಂದಿಗೆ ಬೆಂಗಳೂರಿನ ಮಾಲ್ ಆಫ್ ಏಷ್ಯಾಕ್ಕೆ ತೆರಳಿ, ಕೆಲ ಸಮಯ ಅವರೊಂದಿಗೆ ಮಾಲ್ ವೀಕ್ಷಿಸಿ, ಚಹಾ ಕುಡಿದರು.

7 ದಿನ ಮಾಲ್​ ಬಂದ್​

ರೈತ ಫಕೀರಪ್ಪ ಅವರಿಗೆ ಅವಮಾನ ಮಾಡಿದ ವಿಚಾರ ಸದನದಲ್ಲೂ ಚರ್ಚೆಯಾಯಿತು. ಮೂರನೇ ದಿನ ಸದನ ಆರಂಭದಲ್ಲಿ ಓರ್ವ ರೈತರಿಗೆ ಅಪಮಾನ ಮಾಡಿದ ಜಿಟಿ ಮಾಲ್ ವಿಚಾರ ಮುನ್ನಲೆಗೆ ಬಂತು. ಈ ಚರ್ಚೆ ವೇಳೆ ಪಕ್ಷಾತೀತವಾಗಿ ಎಲ್ಲ ಶಾಸಕರು ಒಕ್ಕೋರಲಿನಿಂದ ಜಿಟಿ ಮಾಲ್​ ಬಂದ್​ ಮಾಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದರು. ಶಾಸಕರ ಒತ್ತಡಕ್ಕೆ ಮಣಿದ ಸರ್ಕಾರ 7 ದಿನಗಳ ಕಾಲ ಜಿಟಿ ಮಾಲ್​ ಬಂದ್​​ ಮಾಡಿಸುವುದಾಗಿ ಆದೇಶ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:06 am, Fri, 19 July 24