ಪಕ್ಕದ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ನೆರೆಹೊರೆಯವರ ಮೇಲೆ ದೂರು ದಾಖಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಕುಟುಂಬ ಸದಸ್ಯರಲ್ಲದವರನ್ನು ಈ ಕಾಯ್ದೆಯಡಿ ಸೇರಿಸಲು ಸಾಧ್ಯವಿಲ್ಲ ಎಂದಿದೆ. ಮತ್ತೊಂದೆಡೆ ಹೈಕೋರ್ಟ್ನಲ್ಲಿ ಕಾಯಂ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಹಣ ಪಡೆದು ವಂಚಿಸಿದ್ದ 7 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಆರೋಪಿಗಳು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲೆ ನಕಲಿ ಮಾಡಿ ದೋಖಾ ಎಸಗಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಜನವರಿ 08: ವರದಕ್ಷಿಣೆ ಕಿರುಕುಳ ಪ್ರಕರಣದ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪಕ್ಕದ ಮನೆಯವರ ಮೇಲೆ 498ಎ ಅಡಿ ಕೇಸ್ ದಾಖಲಿಸುವಂತಿಲ್ಲ ಎಂದಿರುವ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ, ತಮ್ಮ ಮೇಲೆ ದಾಖಲಾಗಿರುವ ಕೇಸ್ ರದ್ದುಪಡಿಸುವಂತೆ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಮಾಡಿ ದೂರು ರದ್ದುಗೊಳಿಸಿದೆ. ಮುನಿರತ್ನಮ್ಮ ಎಂಬಾಕೆ ಪತಿ, ಅತ್ತೆ, ಮಾವ, ನಾದಿನಿ ಹಾಗೂ ಪಕ್ಕದ ಮನೆ ಮಹಿಳೆ ಮೇಲೆಯೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ದೂರು ದಾಖಲಿಸಿದ್ದರು. ಆದರೆ 498ಎ ಅಡಿ ಸಂಬಂಧಿಗಳ ವಿರುದ್ಧ ದೂರು ದಾಖಲಿಸಬಹುದೇ ಹೊರತು, ಪಕ್ಕದ ಮನೆಯವರ ವಿರುದ್ಧ ದೂರಿಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ವೈವಾಹಿಕ ವಿವಾದದಲ್ಲಿ ಪತಿ, ಪತ್ನಿ ಅಥವಾ ಇತರ ಕುಟುಂಬ ಸದಸ್ಯರ ನಡುವಿನ ವಿಷಯದಲ್ಲಿ ಪರಿಚಿತವಲ್ಲದ ವ್ಯಕ್ತಿ ಅಥವಾ ನೆರೆಹೊರೆಯವರನ್ನು IPC ಸೆಕ್ಷನ್ 498A ಅಡಿಯಲ್ಲಿ ಪ್ರಕರಣಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಜೊತೆಗೆ ಆಶಾ ಎಂಬುವರ ವಿರುದ್ಧದ ದೂರು ರದ್ದುಪಡಿಸಿದೆ. ಆಶಾ ಅವರ ವಿರುದ್ಧ IPC ಸೆಕ್ಷನ್ 498A, 504, 506, 323 ಹಾಗೂ 34 ಅಡಿಯಲ್ಲಿ ಆರೋಪಿಯಾಗಿಸಲಾಗಿತ್ತು.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ
ಹೈಕೋರ್ಟ್ನಲ್ಲಿ ಕೆಲಸ ಕೊಡಿಸೋದಾಗಿ ವಂಚನೆ
ಹೈಕೋರ್ಟ್ನಲ್ಲಿ ಕಾಯಂ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಐವರಿಂದ 54 ಲಕ್ಷ ಹಣ ಪಡೆದು ವಂಚಿಸಿರುವ ಆರೋಪ ಸಂಬಂಧ 7 ಮಂದಿ ವಿರುದ್ಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 2023ರಲ್ಲಿ ಹೈಕೋರ್ಟ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ವೇಳೆ ಕಾಯಂ ಕೆಲಸ ಕೊಡಿಸೋದಾಗಿ ಹೇಳಿ ಸುಮಿತ್, ಶಿವಕುಮಾರ್, ಮಹಿಮಾ, ಹರ್ಷ, ಹರ್ಷಿತಾ ಎಂಬವರಿಗೆ ಮೋಸ ಮಾಡಲಾಗಿದೆ. ಈ ಸಂಬಂಧ ಸುದರ್ಶನ್ ಆಡ್ಯಾಂತಾಯ್, ಲವಿನಾ ಜನೆಟ್ ಮೆಂಟೋರ್, ಮಹೇಂದ್ರ, ಜೈಸನ್ ಡಿಸೋಜಾ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಾಗಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲೆ ನಕಲಿ ಮಾಡಿ ದೋಖಾ ಎಸಗಲಾಗಿದೆ. ಅಲ್ಲದೆ FDA, SDA ಹಾಗೂ ಜಾರಿಕಾರ ಹುದ್ದೆಗಳಿಗೆ ಆಹ್ವಾನಿಸಿದ್ದ ಅರ್ಜಿಗಳ ದಾಖಲೆಗಳನ್ನೇ ತಿರುಚಿ ಕೆಲಸ ಕೊಡಿಸೋದಾಗಿ ವಂಚನೆ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.