PSI Recruitment Scam: ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾ
ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ (PSI Recruitment Scam) ಸಂಬಂಧಿಸಿದಂತೆ ಆರೋಪಿ ಐಪಿಎಸ್ (IPS) ಅಧಿಕಾರಿ ಅಮೃತ್ ಪಾಲ್ (Amruth Paul) ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಐಪಿಎಸ್ ಅಮೃತ್ ಪಾಲ್ ಪಿಎಸ್ಐ ಪರೀಕ್ಷೆಯ ಪರೀಕ್ಷೆಯ ನೇತೃತ್ವ ವಹಿಸಿದ್ದರು. ಉತ್ತರ ಪತ್ರಿಕೆಗಳಿದ್ದ ಸ್ಟ್ರಾಂಗ್ ರೂಮ್ ಕೀ ಪಾಲ್ ಬಳಿಯಿತ್ತು. ಪಾಲ್ ಸ್ಟ್ರಾಂಗ್ ರೂಮ್ ಕೀ ಇತರೆ ಆರೋಪಿಗಳಿಗೆ ನೀಡಿದ್ದು, ಒಎಂಆರ್ ಶೀಟ್ ತಿದ್ದಿರುವುದಾಗಿ FSL ವರದಿಯಲ್ಲಿ ದೃಢಪಟ್ಟಿದೆ.
ಹೀಗಾಗಿ ಅಮೃತ್ ಪಾಲ್ ಅವರಿಗೆ ಜಾಮೀನು ನೀಡದಂತೆ ಸಿಐಡಿ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎಡಿಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದರು. 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಎಡಿಜಿಪಿ ಅಮೃತ್ ಪಾಲ್ರನ್ನು ಬಂಧಿಸಿದ್ದರು. ಸಾಕ್ಷ್ಯಾಧಾರ ಸಿಕ್ಕಿದ್ದರಿಂದ ಅಮೃತ್ ಪಾಲ್ ಬಂಧಿಸಲಾಗಿದೆ ಎಂದು ಟಿವಿ9ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದರು.
ಉಪ್ಪು ತಿಂದವರು ನೀರು ಕುಡಿಯಲೇಬೇಕು. ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪಾಲ್ ಕಚೇರಿಯಲ್ಲೇ ಒಎಂಆರ್ ಶೀಟ್ ತಿದ್ದಲಾಗಿದೆ. ಯಾವೊಬ್ಬ ಅಧಿಕಾರಿಯನ್ನೂ ಬಿಡದಂತೆ ಸೂಚಿಸಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದೇವೆ. ಸಿಐಡಿ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದರು.
ಅಮೃತ್ ಪಾಲ್ ನ್ಯಾಯಾಂಗ ಬಂಧನಕ್ಕೆ: ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಸಿಐಡಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ. ಕಳೆದ ಅಕ್ಟೋಬರ್ 3 ರಂದು ಪಿಎಸ್ಐ ನೇಮಕಾತಿ ಪರೀಕ್ಷೆ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ 93 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ಈಗಾಗಲೇ ನೇಮಕಾತಿ ವಿಭಾಗದ ಡಿವೈಎಸ್ ಪಿ ಶಾಂತಕುಮಾರ್, ಎಫ್ ಡಿ ಎ ಹರ್ಷಾ, ಸಿಬ್ಬಂದಿಗಳಾದ ಶ್ರೀಧರ್, ಶ್ರೀನಿವಾಸ್ ಬಂಧಿತರಾಗಿದ್ದರು. ಡಿವೈಎಸ್ ಪಿ ಶಾಂತಕುಮಾರ್ ಬಂಧನಕ್ಕೂ ಮೊದಲೆ ಬಂಧಿತ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ ಮಾಡಲಾಗಿತ್ತು.
ಪ್ರಕರಣ ಹೊರಬಂದು ಪಿಎಸ್ಐ ಅಕ್ರಮ ಕೇಸ್ ದಾಖಲಾಗುತ್ತಿದ್ದಂತೆ ISD ಆಂತರಿಕ ಭದ್ರತಾ ವಿಭಾಗಕ್ಕೆ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಅಮೃತ್‌ಪಾಲ್ ರಿಂದ ಸಿಐಡಿ ಹಿರಿಯ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದರು.