ಇಸ್ಕಾನ್ ಗೆ ಶ್ರೀರಂಗಪಟ್ಟಣದಲ್ಲಿ ಜಮೀನು ಮಂಜೂರು: ಹರಾಜಿನ ಬದಲು ಮಂಜೂರಾತಿ ಹೇಗೆ ಮಾಡುತ್ತೀರಿ -ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಜಮೀನು ಹರಾಜಿನ ಬದಲು ಹೇಗೆ ಮಂಜೂರಾತಿ ಮಾಡುತ್ತೀರಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ರಾಜ್ಯ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿದೆ. ಹಾಗೂ ವಿಚಾರಣೆ ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ಬೆಂಗಳೂರು: ಇಸ್ಕಾನ್ ಸಂಸ್ಥೆಗೆ(Iskcon) ಶ್ರೀರಂಗಪಟ್ಟಣ ಬಳಿ ಜಮೀನು ಮಂಜೂರು ವಿಚಾರಕ್ಕೆ ಸಂಬಂಧಿಸಿ ಜಮೀನು ಮಂಜೂರಾತಿ ವಿರೋಧಿಸಿ ಮಹದೇವಪುರ ಗ್ರಾಮಸ್ಥರು ಹೈಕೋರ್ಟ್ಗೆ(High Court) ಪಿಐಎಲ್ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆದಿದ್ದು ಜಮೀನು ಹರಾಜಿನ ಬದಲು ಹೇಗೆ ಮಂಜೂರಾತಿ ಮಾಡುತ್ತೀರಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ರಾಜ್ಯ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿದೆ. ಹಾಗೂ ವಿಚಾರಣೆ ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ಇಸ್ಕಾನ್ ಸಂಸ್ಥೆಗೆ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದಲ್ಲಿ ಜಮೀನು ಮಂಜೂರು ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿದೆ. ಈಗಾಗಲೇ 77 ಎಕರೆ ಕೃಷಿ ಭೂಮಿ ಖರೀದಿಸಿ ಆರ್ಗಾನಿಕ್ ಫಾರ್ಮಿಂಗ್ ನಡೆಸುತ್ತಿರುವ ಇಸ್ಕಾನ್ ಮತ್ತಷ್ಟು ಜಮೀನು ಮಂಜೂರು ಮಾಡುವಂತೆ ಸರ್ಕಾರಕ್ಕೆ 1998ರಲ್ಲೇ ಅರ್ಜಿ ಸಲ್ಲಿಸಿದೆ. ಜಮೀನು ಮಂಜೂರಿಗೆ ನಿರ್ಬಂಧ ಕೋರಿರುವ ಅರ್ಜಿದಾರರು ಈ ಬಗ್ಗೆ ಶ್ರೀರಂಗಪಟ್ಟಣದ ತಹಸೀಲ್ದಾರ್, ಪಾಂಡವಪುರದ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಸರ್ಕಾರದ ಜಮೀನು ಮಂಜೂರು ವಿರೋಧಿಸಿ ಗ್ರಾಮಸ್ಥರಾದ ನಾಗೇಂದ್ರ, ಶಿವಕುಮಾರ್ ಎಂ.ಎಸ್. ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದಾರೆ. ಸರ್ಕಾರಿ ಜಮೀನನ್ನು ಹರಾಜಿನ ಬದಲು ಮಂಜೂರು ಹೇಗೆ ಮಾಡುತ್ತೀರಿ ಎಂದು ಸರ್ಕಾರವನ್ನು ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದೆ. ಭೂಮಿ ಮಂಜೂರಿನ ಬಗ್ಗೆ ಸರ್ಕಾರದ ನಿಲುವು ತಿಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅರ್ಜಿದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲ. ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಉತ್ತರಿಸುವುದಾಗಿ ಸರ್ಕಾರಿ ವಕೀಲ ಶೌರಿ ಹೈಕೋರ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ 2011 ರಲ್ಲೂ ಸ್ಥಳೀಯ ಗ್ರಾಮಸ್ಥರು ಇಸ್ಕಾನ್ ವಿರುದ್ಧ ಪ್ರತಿಭಟಿಸಿದ್ದರು. ತಮ್ಮ ಜಮೀನಿಗೆ ಕಾಂಪೌಂಡ್ ಹಾಕಿ ಅಕ್ಕಪಕ್ಕದ ಜಮೀನಿನ ರಸ್ತೆ ಮುಚ್ಚಿದ್ದಾರೆಂದು ಆರೋಪಿಸಿದ್ದರು. ಅಲ್ಲದೇ ಸರ್ಕಾರಿ ಗೋಮಾಳ ಜಮೀನನ್ನು ಇಸ್ಕಾನ್ ಸಂಸ್ಥೆಯವರು ಅತಿಕ್ರಮಿಸಿದ್ದಾರೆಂದೂ ಆರೋಪಿಸಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:45 pm, Wed, 15 June 22