AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಯನಗರ ಆಸ್ಪತ್ರೆಯಲ್ಲಿ ವೈದ್ಯರ ಭಾರೀ ಎಡವಟ್ಟು: ಸ್ವಲ್ಪ ಏರುಪೇರಾದರೂ ಜೀವವೇ ಹೋಗ್ತಿತ್ತು!

ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ರಕ್ತಹೀನತೆ ಚಿಕಿತ್ಸೆಗೆ ಬಂದ ರೋಗಿಗೆ ತಪ್ಪಾಗಿ A+ ರಕ್ತ ನೀಡಲಾಗಿದ್ದು, O+ ರಕ್ತದ ರೊಗಿಯ ಸ್ಥಿತಿ ಗಂಭೀರವಾಗಿ ತಕ್ಷಣ ಐಸಿಯುಗೆ ದಾಖಲಿಸಲಾಗಿದೆ. ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆ ಆಡಳಿತ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಜಯನಗರ ಆಸ್ಪತ್ರೆಯಲ್ಲಿ ವೈದ್ಯರ ಭಾರೀ ಎಡವಟ್ಟು: ಸ್ವಲ್ಪ ಏರುಪೇರಾದರೂ ಜೀವವೇ ಹೋಗ್ತಿತ್ತು!
ಜಯನಗರ ಆಸ್ಪತ್ರೆಯಲ್ಲಿ ವೈದ್ಯರ ಭಾರೀ ಎಡವಟ್ಟು
ಭಾವನಾ ಹೆಗಡೆ
|

Updated on:Dec 27, 2025 | 12:40 PM

Share

ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನ (Bengaluru) ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಭಾರೀ ನಿರ್ಲಕ್ಷ್ಯ ಬೆಳಕಿಗೆ ಬಂದಿದ್ದು, ರಕ್ತಹೀನತೆ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರ ಸ್ಥಿತಿ ಗಂಭೀರವಾದ ಘಟನೆ ನಡೆದಿದೆ. ಪರಿಣಾಮ ರೋಗಿಯ ಆತೋಗ್ಯ ತೀವ್ರ ಹದಗೆಟ್ಟಿದೆ.ತಕ್ಷಣ ಅವರನ್ನು ಐಸಿಯುವಿಗೆ ಸ್ಥಳಾಂತರಿಸಿ ತುರ್ತು ಚಿಕಿತ್ಸೆ ನೀಡಲಾಗಿದ್ದು, ಈ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಗಿಯ ಸ್ಥಿತಿ ಗಂಭೀರ

ಪುನೀತ್ ಸೂರ್ಯ ಎಂಬ ರೋಗಿ ರಕ್ತಹೀನತೆ ಚಿಕಿತ್ಸೆ ಪಡೆಯಲು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು. ಅವರು ಓ ಪಾಸಿಟಿವ್ (O+) ರಕ್ತದ ಗುಂಪಿನವರಾಗಿದ್ದು, ಲ್ಯಾಬ್ ಟೆಕ್ನಿಷಿಯನ್ ನಿರ್ಲಕ್ಷ್ಯದಿಂದಾಗಿ ತಪ್ಪಾಗಿ ಎ ಪಾಸಿಟಿವ್ (A+) ರಕ್ತ ನೀಡಲಾಗಿದ್ದು, ಪುನೀತ್ ಸ್ಥಿತಿ ಗಂಭೀರವಾಗಿತ್ತು. ಐಸಿಯುವಿನಲ್ಲಿ ಮುಂದುವರಿದ ಚಿಕಿತ್ಸೆಯಿಂದ ಇದೀಗ ಅವರ ಆರೋಗ್ಯ ಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ. ಈ ಎಡವಟ್ಟಿಗೆ ಕಾರಣವಾದ ಲ್ಯಾಬ್ ಟೆಕ್ನಿಷಿಯನ್ ಉಮೇಶ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಮೇರೆಗೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಕಠಿಣ ಕ್ರಮ

O+ ರಕ್ತದ ಗುಂಪಿನವರಿಗೆ A ರಕ್ತಕಣಗಳ ವಿರುದ್ಧ ಪ್ರತಿಕಾಯಗಳು (antibodies) ಇರುತ್ತವೆ. ಆದ್ದರಿಂದ A+ ರಕ್ತ ನೀಡಿದಾಗ ದೇಹದ ರೋಗನಿರೋಧಕ ವ್ಯವಸ್ಥೆ, ರೋಗಿಗೆ ನೀಡಿದ ರಕ್ತವನ್ನು ಪರಕೀಯವೆಂದು ಗುರುತಿಸಿ ತಕ್ಷಣ ದಾಳಿ ಮಾಡುತ್ತದೆ.ಇದರಿಂದ ರೋಗಿಯ ದೇಹದಲ್ಲಿ ಅಪಾಯಕಾರಿ ಪ್ರತಿಕ್ರಿಯೆ ಉಂಟಾಗಬಹುದು. ಇದರಿಂದಾಗಿ ಜ್ವರ, ಉಸಿರಾಟದ ತೊಂದರೆ, ಎದೆನೋವು, ರಕ್ತದೊತ್ತಡ ಕುಸಿತ, ಮೂತ್ರಪಿಂಡಗಳ ವೈಫಲ್ಯ ಹಾಗೂ ಕೆಲ ಸಂದರ್ಭಗಳಲ್ಲಿ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ.

ಹೀಗಾಗಿ ಪುನೀತ್​ರೊಂದಿಗೆ ನಡೆದ ಘಟನೆಯ ಬಳಿಕ ಆಸ್ಪತ್ರೆ ಸಿಬ್ಬಂದಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ರೋಗಿಯ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪ್ರಕರಣದ ಬಗ್ಗೆ ಶೀಘ್ರದಲ್ಲೇ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಆಡಳಿತ ಭರವಸೆ ನೀಡಿದೆ.

ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:39 pm, Sat, 27 December 25