ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಜಟಾಪಟಿ ಕಡಿಮೆ ಆಗುವಂತೆ ಕಾಣುತ್ತಿಲ್ಲ. ಈಗಾಗಲೇ ಪಠ್ಯ ಪುಸ್ತಕ ಪರಿಷ್ಕರಣೆಗೆ ವಿವಿಧ ಮಠಗಳ ಸ್ವಾಮೀಜಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕನಕದಾಸರ (Kanakadasa) ಬಗ್ಗೆ ಕೇವಲ ಒಂದೇ ಸಾಲಿನಲ್ಲಿ ವಿವರಣೆ ನೀಡಿದ್ದಕ್ಕೆ ಕನಕ ಗುರುಪೀಠದ ಶ್ರೀಗಳು ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಅವರಿಗೆ ಪತ್ರ ಬರೆದಿದ್ದಾರೆ. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕನಕದಾಸರ ಪರಿಚಯವಿದೆ. ಭಕ್ತಿಪಂತ ಪಠ್ಯದಲ್ಲಿ ಕೇವಲ ಒಂದೇ ಒಂದು ಸಾಲಿನಲ್ಲಿ ಕನಕದಾಸರ ಬಗ್ಗೆ ತಿಳಿಸಲಾಗಿದೆ. ಈ ಹಿಂದಿನ ಸಮಿತಿ ಸುಮಾರು ಮುಕ್ಕಾಲು ಪುಟಗಳಷ್ಟು ವಿವರವನ್ನು ನೀಡಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪಠ್ಯದಲ್ಲಿ ಕನಕದಾಸರ ಕುರಿತಾದ ವಿವರ ಒಂದೇ ಸಾಲಿಗೆ ಸೀಮಿತಗೊಳಿಸಿರುವುದಕ್ಕೆ ಸ್ವಾಮೀಜಿ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಪತ್ರ ಬರೆದಿರುವ ಸ್ವಾಮೀಜಿ ಕೇವಲ ಒಂದೇ ಒಂದು ಸಾಲಿನಲ್ಲಿ ಪರಿಚಯಿಸಿರುವ ಕಾರಣ ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 16ನೇ ಶತಮಾನದಲ್ಲಿ ಸಾಮಾಜಿಕ ವೈರುಧ್ಯಗಳ ವಿರುದ್ಧ, ಕಂದಾಚಾರಗಳ, ಜಾತೀಯತೆ ಹೋಗಲಾಡಿಸಲು ಕನಕದಾಸರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಕೀರ್ತನೆಗಳ ಮೂಲಕ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಕನಕದಾಸರು. ಅವರ ಬಗ್ಗೆಯೇ ಮಾಹಿತಿ ಇಲ್ಲದಿರುವುದು ಎಷ್ಟು ಸರಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್! ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಆಗಿರುವ ತಪ್ಪುಗಳನ್ನು ತಿದ್ದಿ ಕನಕದಾಸರ ಕುರಿತು ಸರಿಯಾದ ಮಾಹಿತಿಯನ್ನು ಪಠ್ಯ ಪುಸ್ತಕದಲ್ಲಿ ನೀಡಬೇಕು ಎಂದು ಒತ್ತಾಯಿಸಿದ ಶ್ರೀಗಳು ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯವನ್ನೇ ಮುಂದುವರೆಸುವಂತೆ ಆಗ್ರಹಿಸಿದ್ದಾರೆ.
ಮತ್ತೊಂದು ಅವಾಂತರ ಬೆಳಕಿಗೆ:
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಮಧ್ಯೆ ಮತ್ತೊಂದು ಅವಾಂತರ ಬೆಳಕಿಗೆ ಬಂದಿದ್ದು, 20 ವರ್ಷಗಳ ಹಳೆಯ ಕವಿತೆ ಕದ್ದು ಹೊಸ ಪಠ್ಯ ಪುಸ್ತಕದಲ್ಲಿ ಪ್ರಕಟಣೆ ಆರೋಪಿಸಿ ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ ಕಾನೂನು ಹೋರಾಟಕ್ಕಿಳಿದಿದ್ದಾರೆ. ಈ ಹಿನ್ನೆಲೆ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಮತ್ತೊಂದು ಎಡವಟ್ಟಾಗಿದೆ. ಸದ್ಯ 7ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಭಾಗದ ಪಠ್ಯದಲ್ಲಿನ ಕವಿತೆಯ ಬಗ್ಗೆ ಅಪಸ್ವರ ಕೇಳಿಬಂದಿದೆ. 20 ವರ್ಷಗಳ ಹಿಂದೆ 3ನೇ ತರಗತಿಯಲ್ಲಿನ ಕವನ ತಿರುಚಿ ಹೊಸದಾಗಿ ಬರೆದಿರೋ ಆರೋಪ ಮಾಡಿದ್ದು, ಆಮೆಯ ಕವಿತೆಯ ಬಗ್ಗೆ ಅದರ ಮೂಲ ರಚನೆಕಾರ ಗಿರಿರಾಜ್ ಹೊಸಮನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ 3ನೇ ತರಗತಿಯಲ್ಲಿ ಆಮೆ ಹೆಸರಿನ ಕವಿತೆ ಪ್ರಕಟವಾಗಿದ್ದು, ಈಗ ಅದನ್ನೇ ಜಾಣ ಆಮೆ ಎಂದು ತಿರುಚಿ 7ನೇ ತರಗತಿಯಲ್ಲಿ ಪ್ರಕಟ ಮಾಡಲಾಗಿದೆ. 1973ರಲ್ಲೇ ಪ್ರಕಟಗೊಂಡಿದ್ದ ಕವಿತೆಯನ್ನ ನಕಲು ಮಾಡಿದ ಆರೋಪ ಮಾಡಲಾಗಿದೆ.
Published On - 8:59 am, Sun, 26 June 22