ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡುವಂತೆ ಒತ್ತಾಯ: ಕರವೇಯಿಂದ ಟ್ವಿಟರ್ ಅಭಿಯಾನ
KannadaFlag_MyPride: ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಸಂಜೆ 5 ಗಂಟೆಯಿಂದ ಟ್ವಿಟರ್ (ಎಕ್ಸ್) ನಲ್ಲಿ ಅಭಿಯಾನ ಹಮ್ಮಿಕೊಂಡಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಅಭಿಯಾನ ನಡೆಸಲಾಗುತ್ತಿದೆ.
ಬೆಂಗಳೂರು, ನವೆಂಬರ್ 9: ಕನ್ನಡ ಬಾವುಟ (KannadaFlag) ಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಸಂಜೆ 5 ಗಂಟೆಯಿಂದ ಟ್ವಿಟರ್ (ಎಕ್ಸ್) ನಲ್ಲಿ ಅಭಿಯಾನ ಹಮ್ಮಿಕೊಂಡಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಅಭಿಯಾನ ನಡೆಸಲಾಗುತ್ತಿದ್ದು, ಅಭಿಯಾನದಲ್ಲಿ ಕನ್ನಡ ಪರ ಸಂಘಟನೆಯ ನೂರಾರು ಕಾರ್ಯಕರ್ತರು ಭಾಗಿ ಆಗಲಿದ್ದಾರೆ.
ಯಾತಕ್ಕಾಗಿ ಅಭಿಯಾನ?
ಈ ಕುರಿತಾಗಿ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡಿಗರಿಗೆ ಕನ್ನಡ ಬಾವುಟ ಮೊದಲ ಗುರುತು. ಭಾರತ ಒಕ್ಕೂಟದ ಭಾಗವಾಗಿ ನಮ್ಮದೇ ಆದ ಬಾವುಟವೊಂದನ್ನು ಹೊಂದುವುದಕ್ಕೆ ಅವಕಾಶ ಇರಬೇಕು. ಕೋಟ್ಯಂತರ ಕನ್ನಡಿಗರು ಕನ್ನಡ ಬಾವುಟವನ್ನು ಆರಾಧಿಸುತ್ತಾರೆ.
ಇದನ್ನೂ ಓದಿ: ಕನ್ನಡ ಬಾವುಟದ ಹಳದಿ, ಕೆಂಪು ಬಣ್ಣ ಏನನ್ನು ಸಂಕೇತಿಸುತ್ತದೆ? ಹಿನ್ನೆಲೆಯೇನು?
ಹೀಗಾಗಿ ಒಕ್ಕೂಟ ಸರ್ಕಾರ ಕೂಡಲೇ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕು. ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಕರ್ನಾಟಕ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ನೀಡಿದೆ. ಭಾರತ ಒಕ್ಕೂಟ ಸರ್ಕಾರಕ್ಕೆ ನೀಡಿರುವ ಪ್ರಸ್ತಾವನೆಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿ #ಕನ್ನಡಬಾವುಟ_ನಮ್ಮಗುರುತು #KannadaFlag_MyPride ಎಂಬ ಹ್ಯಾಶ್ ಟ್ಯಾಗ್ ಮೂಲಕ ಅಭಿಯಾನ ಮಾಡಲಾಗುತ್ತಿದೆ.
ಪ್ರತ್ಯೇಕ ಕನ್ನಡ ಬಾವುಟದ ಕೂಗು ಮತ್ತೊಮ್ಮೆ ಮಾರ್ಧನಿಸಿದೆ. ಸದ್ಯ ಕರ್ನಾಟಕದಲ್ಲಿ ಹಳದಿ, ಕೆಂಪು ಬಾವುಟ ಇದೆ. ಆದ್ರೆ, ಇದಕ್ಕೆ ಸಂವಿಧಾನದ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ ಪ್ರತ್ಯೇಕ ನಾಡಧ್ವಜ ರಚನೆಗೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಧ್ವಜ ಸಮಿತಿ ನೇಮಕ ಮಾಡಿತ್ತು. ಆ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ ಹೊಸ ಧ್ವಜ ವಿನ್ಯಾಸಗೊಳಿಸಿ ಸರ್ಕಾರಕ್ಕೆ ಒಪ್ಪಿಸಿತ್ತು.
ಇದನ್ನು ಓದಿ: ಕೋಲಾರದಲ್ಲಿ ಧ್ವಜಕಂಬದಿಂದ ಕೆಳಗೆ ಬಿದ್ದ ಕನ್ನಡದ ಬಾವುಟ, ಕೊಪ್ಪಳ ರಾಜ್ಯೋತ್ಸವ ಕಾರ್ಯಕ್ರದಲ್ಲೂ ಎಡವಟ್ಟು
ರಾಜ್ಯ ಸರ್ಕಾರ ಅದನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಈ ಬಾವುಟಕ್ಕೆ ಮಾನ್ಯತೆ ನೀಡುವಂತೆ ಕೋರಿತ್ತು. ಆದ್ರೆ, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತ್ಯೇಕ ಕನ್ನಡ ಬಾವುಟದ ವಿಚಾರ ಮುನ್ನೆಲೆಗೆ ಬಂದಿದೆ. ಶಾಸಕ ಅರ್ಷದ್ ರಿಜ್ವಾನ್, ಕನ್ನಡಕ್ಕೆ ಅಧಿಕೃತ ಬಾವುಟ ಬೇಕು. ಆದ್ರೆ, ಕೇಂದ್ರ ಸರ್ಕಾರ 6 ವರ್ಷವಾದ್ರೂ ನಮ್ಮ ಬಾವುಟಕ್ಕೆ ಮಾನ್ಯತೆ ನೀಡುವ ಸಂಬಂಧ ಉತ್ತರ ನೀಡಿಲ್ಲ ಅಂತಾ ಕಿಡಿಕಾರಿದ್ದರು.
ಕೇಂದ್ರದಿಂದ ಪ್ರಾದೇಶಿಕ ಅಸ್ಮಿತೆಗೆ ಪ್ರಹಾರ ಅನ್ನೋ ಪೋಸ್ಟ್ ಮೂಲಕ ಸಿದ್ದರಾಮಯ್ಯ ಕಿಡಿ ಕಾರಿದ್ದರು. ಕನ್ನಡ ರಾಜ್ಯೋತ್ಸವದಂದು ಮಾನ್ಯತೆ ಪಡೆದ ಕನ್ನಡ ಧ್ವಜ ಹಾರಿಸಲಾಗದ ನೋವು ಕನ್ನಡಿಗರನ್ನ ಕಾಡುತ್ತಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:44 pm, Thu, 9 November 23