ಬೆಂಗಳೂರು: ಶಾಲಾ- ಕಾಲೇಜಿನಲ್ಲಿ ಹಿಜಾಬ್ (Hijab) ಧರಿಸುವಂತಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ (Karnataka High Court) ತೀರ್ಪು ನೀಡಿದೆ. ಕೋರ್ಟ್ ತೀರ್ಪಿಗೆ ಬೇಸರ ವ್ಯಕ್ತಪಡಿಸಿರುವ ಮುಸ್ಲಿಂ ಸಮುದಾಯ ಮುಖಂಡರು ಇಂದು (ಮಾರ್ಚ್ 17) ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ಮುಸ್ಲಿಂ ಮುಖಂಡರು ಸ್ವಯಂಪ್ರೇರಿತ ಬಂದ್ಗೆ ಘೋಷಣೆ ಮಾಡಿದ್ದಾರೆ. ಇಂದು ಇಡೀ ರಾಜ್ಯಾದ್ಯಂತ ವ್ಯಾಪಾರ ವಹಿವಾಟು ಬಂದ್ ಮಾಡಲು ಸೂಚನೆ ನೀಡಿದ್ದಾರೆ.
ಮುಸ್ಲಿಂ ಸಮುದಾಯದವರು ನಡೆಸುತ್ತಿರುವ ವ್ಯಾಪಾರ ವಹಿವಾಟು ನಡೆಸದೆ ಬಂದ್ ಮಾಡಲು ಧರ್ಮಗುರುಗಳ ಸಭೆಯಲ್ಲಿ ಮುಖಂಡ ಸಗೀರ್ ಅಹ್ಮದ್ ಘೋಷಣೆ ಮಾಡಿದ್ದಾರೆ. ಯಾರ ಮೇಲೂ ಒತ್ತಾಯ ಹೇರಿ ಬಂದ್ ನಡೆಸದಿರುವಂತೆ ಒತ್ತಾಯಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ರಾಜಕೀಯ ನಾಯಕರು ಹಿಜಾಬ್ ವಿಚಾರವಾಗಿ ಮಂಗಳವಾರ ಸಭೆ ನಡೆಸಿದ್ದರು. ಅಮಿರ್ ಎ ಷರಿಯಾತ್ ಅವರ ನಿವಾಸದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಸಲಿಂ ಅಹ್ಮದ್, ಜಮೀರ್ ಅಹ್ಮದ್ ಖಾನ್, ಯು.ಟಿ.ಖಾದರ್, ಎನ್.ಎ.ಹ್ಯಾರಿಸ್, ನಜೀರ್ ಅಹ್ಮದ್, ರೆಹಮಾನ್ ಖಾನ್, ಖನೀಜ್ ಫಾತಿಮಾ ಸೇರಿದಂತೆ ಇತರರು ಭಾಗಿಯಾಗಿದ್ದರು.
ವಿದ್ಯಾರ್ಥಿನಿಯರ ಹೇಳಿಕೆಗೆ ಆಕ್ಷೇಪ:
ಹೈಕೋರ್ಟ್ ತೀರ್ಪಿನ ಬಳಿಕ ವಿದ್ಯಾರ್ಥಿನಿಯರು ನೀಡಿದ್ದ ಹೇಳಿಕೆಗೆ ಧರ್ಮಗುರುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ವರ್ತನೆ ಸರಿ ಅಲ್ಲ, ಅವರಿಗೆ ಮಾರ್ಗದರ್ಶನ ಅಗತ್ಯವಿದೆ. ಸುದ್ದಿಗೋಷ್ಠಿಗೆ ಉತ್ತರಿಸಿದ್ದು ಸರಿ ಅಲ್ಲ. ಹೈಕೋರ್ಟ್ ತೀರ್ಪಿನಿಂದ ಆತಂಕ ಪಡುವ ಅಗತ್ಯವಿಲ್ಲ. ಸಮವಸ್ತ್ರ ಇರುವಲ್ಲಷ್ಟೇ ಆದೇಶ ಪಾಲನೆ ಮಾಡಲು ಹೇಳಿದೆ. ಸುಪ್ರಿಂಕೋರ್ಟ್‌ಗೆ ಹೋಗಲು ಸಹ ನಮಗೆ ಅವಕಾಶ ಇದೆ. ಈಗಾಗಲೇ ಕಪಿಲ್ ಸಿಬಲ್ ಜೊತೆ ಮಾತನಾಡಲಾಗಿದೆ. ಅನಗತ್ಯವಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗುವುದು ಬೇಡ ಅಂತ ಎಲ್ಲ ನಾಯಕರಿಗೆ ನಿನ್ನೆ ಅಮಿರ್ ಎ ಷರಿಯಾತ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ
IND W VS ENG W: ಮಹಿಳಾ ವಿಶ್ವಕಪ್ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದ ಜೂಲನ್ ಗೋಸ್ವಾಮಿ..!
Published On - 1:12 pm, Wed, 16 March 22