
ಬೆಂಗಳೂರು, ಜುಲೈ 17: ಸೋಶಿಯಲ್ ಮೀಡಿಯಾ ವೇದಿಗಳಲ್ಲಿ ಅದರಲ್ಲೂ ಮೆಟಾದಲ್ಲಿ (Meta) ಕನ್ನಡ ವಿಷಯದಲ್ಲಿ ಸ್ವಯಂ ಅನುವಾದದಿಂದ ಅನೇಕ ತಪ್ಪುಗಳು ಉಂಟಾಗುತ್ತಿವೆ. ಇದು ಜನರನ್ನು ದಾರಿ ತಪ್ಪಿಸುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಕಚೇರಿ ಕಳವಳ ವ್ಯಕ್ತಪಡಿಸಿದೆ. ಈ ಕುರಿತಾಗಿ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್ ಮೆಟಾಗೆ ಪತ್ರ ಬರೆದಿದ್ದು, ಸರಿಯಾದ ರೀತಿಯಲ್ಲಿ ಅನುವಾದಿಸುವಂತೆ ಒತ್ತಾಯಿಸಿದ್ದಾರೆ.
ಮೆಟಾದಲ್ಲಿ ಕನ್ನಡದಲ್ಲಿ ಪೋಸ್ಟ್ ಮಾಡಲಾಗಿರುವ ವಿಷಯವನ್ನು ಇತರೆ ಭಾಷೆಗಳಿಗೆ ತರ್ಜುಮೆ ಮಾಡಿದಾಗ ಮೆಟಾದ ಸ್ವಯಂ ಅನುವಾದ ವ್ಯವಸ್ಥೆಯೂ ತಪ್ಪು ಭಾಷಾಂತರವನ್ನು ಒದಗಿಸುತ್ತಿದೆ. ಇದರಿಂದಾಗಿ ಸಂದೇಶದ ಮೂಲ ಅರ್ಥವೇ ಬದಲಾಗಿ, ಜನರಲ್ಲಿ ಗೊಂದಲ ಮತ್ತು ತಪ್ಪು ತಿಳುವಳಿಕೆಗಳು ಉಂಟಾಗುತ್ತಿವೆ. ಹೀಗಾಗಿ ಕನ್ನಡ ವಿಷಯಕ್ಕಾಗಿ ಸ್ವಯಂ-ಅನುವಾದ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮೆಟಾಗೆ ಪತ್ರ ಬರೆಯಲಾಗಿದೆ.
Faulty auto-translation of Kannada content on @Meta platforms is distorting facts & misleading users. This is especially dangerous when it comes to official communications.
My Media Advisor Shri K V Prabhakar has formally written to Meta urging immediate correction.
Social… pic.twitter.com/tJBp38wcHr
— Siddaramaiah (@siddaramaiah) July 17, 2025
ಮೆಟಾ ವೇದಿಕೆಗಳಲ್ಲಿ ಹಂಚಿಕೊಂಡ ಕನ್ನಡ ವಿಷಯವನ್ನು ಸ್ವಯಂ ಅನುವಾದದ ಮೂಲಕ ದೋಷಪೂರಿತ ಭಾಷಾಂತರವನ್ನು ಒದಗಿಸುತ್ತಿದೆ. ಇದು ಮೂಲ ಅರ್ಥವನ್ನು ವಿರೂಪಗೊಳಿಸುತ್ತಿದೆ. ಆ ಮೂಲಕ ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ. ಇದು ಸಾರ್ವಜನಿಕರ ತಿಳುವಳಿಕೆ ಮತ್ತು ನಂಬಿಕೆಯನ್ನು ಹಾಳು ಮಾಡುತ್ತದೆ. ಹೀಗಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ: Perplexity AI: ಏನಿದು ಪರ್ಪ್ಲೆಕ್ಸಿಟಿ ಪ್ರೊ?: ಏರ್ಟೆಲ್ ಬಳಕೆದಾರರು ಇದನ್ನು ಕ್ಲೈಮ್ ಮಾಡುವುದು ಹೇಗೆ?
ಮೆಟಾದ ಸ್ವಯಂ ಅನುವಾದ ವ್ಯವಸ್ಥೆ ನಿಖರವಾಗಿಲ್ಲ ಮತ್ತು ಕೆಲವು ಸಂದರ್ಭಗಳಲ್ಲಿ, ದಾರಿ ತಪ್ಪಿಸುವಂತಿರುತ್ತವೆ. ಇದು ಗಮನಾರ್ಹ ಅಪಾಯವನ್ನುಂಟು ಮಾಡುತ್ತದೆ. ವಿಶೇಷವಾಗಿ ಸಾರ್ವಜನಿಕ ಸಂವಹನಗಳು, ಅಧಿಕೃತ ಹೇಳಿಕೆಗಳು ಅಥವಾ ಮುಖ್ಯಮಂತ್ರಿ ಮತ್ತು ಸರ್ಕಾರದಿಂದ ಬರುವ ಪ್ರಮುಖ ಸಂದೇಶಗಳನ್ನು ತಪ್ಪಾಗಿ ಅನುವಾದಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಸಮಸ್ಯೆ ಸರಿ ಹೋಗುವವರೆಗೂ ಕನ್ನಡ ವಿಷಯಕ್ಕಾಗಿ ಸ್ವಯಂ-ಅನುವಾದ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ. ಕನ್ನಡ ಮತ್ತು ಇಂಗ್ಲಿಷ್ ನಡುವಿನ ಅನುವಾದಗಳ ಗುಣಮಟ್ಟ ಮತ್ತು ಸಂದರ್ಭೋಚಿತ ನಿಖರತೆಯನ್ನು ಹೆಚ್ಚಿಸಲು ಅರ್ಹ ಕನ್ನಡ ಭಾಷಾ ತಜ್ಞರು ಮತ್ತು ಭಾಷಾ ವೃತ್ತಿಪರರಿಂದ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯ ಸಿಎಂ ಕಚೇರಿ ಸಲಹೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:56 pm, Thu, 17 July 25