ಸುಪ್ರೀಂ ನಿರ್ದೇಶ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ: ವಿಮೆ ವಂಚನೆ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚನೆ

ಕರ್ನಾಟಕದಲ್ಲಿ ವಿಮೆ ವಂಚನೆ ಪ್ರಕರಣಗಳ ತನಿಖೆಗೆ ರಾಜ್ಯ ಮಟ್ಟದ ವಿಶೇಷ ತನಿಖಾ ತಂಡ ರಚಿಸಲಾಗಿದೆ. ವಿಮಾ ಕಂಪನಿಗಳಿಗೆ ಸಲ್ಲಿಕೆಯಾಗುವ ವಂಚನೆಪೂರಿತ ಕ್ಲೇಮ್‌ಗಳ ತಡೆಗೆ ಸುಪ್ರೀಂ ಕೋರ್ಟ್ ಆದೇಶ ಬೆನ್ನಲ್ಲೇ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ವಿಮೆ ವಂಚನೆಗಳನ್ನು ತಂಡ ತನಿಖೆ ಮಾಡಲಿದ್ದು, ರಾಜ್ಯಾದ್ಯಂತ ಕಾರ್ಯವ್ಯಾಪ್ತಿ ಹೊಂದಿದೆ.

ಸುಪ್ರೀಂ ನಿರ್ದೇಶ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ: ವಿಮೆ ವಂಚನೆ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚನೆ
ವಿಧಾನ ಸೌಧ
Image Credit source: Getty images
Edited By:

Updated on: Sep 23, 2026 | 5:01 PM

ಬೆಂಗಳೂರು, ಸೆಪ್ಟೆಂಬರ್​​ 23: ವಿಮಾ ಕಂಪನಿಗಳಿಗೆ ಸಲ್ಲಿಕೆಯಾಗುವ ವಂಚನೆಪೂರಿತ ಕ್ಲೇಮ್‌ಗಳ ಕುರಿತ ದೂರುಗಳನ್ನು ದಾಖಲಿಸಿಕೊಂಡು ತ್ವರಿತ ತನಿಖೆ ನಡೆಸಲು ಕರ್ನಾಟಕ ಸರ್ಕಾರವು ರಾಜ್ಯ ಮಟ್ಟದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿ ಬುಧವಾರ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನ ಬೆನ್ನಲ್ಲೇ ಎಸ್‌ಐಟಿ ರಚನೆ 

ವಿಮೆ ಕಂಪನಿಗಳ ವಿರುದ್ಧದ ವಂಚನೆಪೂರಿತ ಕ್ಲೇಮ್‌ಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ರಾಜ್ಯ ಮಟ್ಟದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸುವಂತೆ ಸುಪ್ರೀಂ ಕೋರ್ಟ್‌ ಎಸ್‌ಎಲ್‌ಪಿ (ಸಿವಿಲ್) ಸಂಖ್ಯೆ 5582/2023ರ ತೀರ್ಪಿನಲ್ಲಿ ನಿರ್ದೇಶನ ನೀಡಿತ್ತು. ಈ ಆದೇಶ ಹಿನ್ನೆಲೆ ರಾಜ್ಯ ಸರ್ಕಾರ ಇದೀಗ ಎಸ್‌ಐಟಿ ರಚಿಸಿ  ಆದೇಶ ಹೊರಡಿಸಿದೆ.

ಎಸ್‌ಐಟಿ ತಂಡದಲ್ಲಿ ಯಾರೆಲ್ಲಾ? 

ಪೊಲೀಸ್ ಮಹಾನಿರೀಕ್ಷಕರ (ಐಜಿಪಿ) ಹುದ್ದೆಯ ಅಧಿಕಾರಿಯನ್ನು ಈ ತಂಡದ ಅಧ್ಯಕ್ಷರನ್ನಾಗಿ ಹಾಗೂ ಸಿಐಡಿಯಿಂದ ನಾಮನಿರ್ದೇಶನಗೊಳ್ಳುವ ಪೊಲೀಸ್ ಅಧೀಕ್ಷಕರನ್ನು (ಎಸ್ಪಿ) ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಆಧಾರ್ ಕಾರ್ಡ್ ತಿದ್ದುಪಡಿ: ದುಡಿಮೆ ಬಿಟ್ಟು ಗಂಟೆಗಟ್ಟಲೇ ಕ್ಯೂ ನಿಂತ ಜನರು

ಇವರೊಂದಿಗೆ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ನಾಮನಿರ್ದೇಶನ ಮಾಡುವ ಒಬ್ಬ ಉಪ ಪೊಲೀಸ್ ಅಧೀಕ್ಷಕರು (ಡಿವೈಎಸ್‌ಪಿ) ಹಾಗೂ ಮೂವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು (ಪಿಐ) ಈ ತಂಡದ ಸದಸ್ಯರಾಗಿರುತ್ತಾರೆ.

 ಕರ್ನಾಟಕ ರಾಜ್ಯಾದ್ಯಂತ ಕಾರ್ಯವ್ಯಾಪ್ತಿ ಮತ್ತು ಅಧಿಕಾರ

ಈ ವಿಶೇಷ ತನಿಖಾ ತಂಡಕ್ಕೆ ಕರ್ನಾಟಕ ರಾಜ್ಯಾದ್ಯಂತ ವ್ಯಾಪ್ತಿ ಕಲ್ಪಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್), 2023ರ ಸೆಕ್ಷನ್ 2(1)(u) ಅಡಿಯಲ್ಲಿ ಇದನ್ನು ಪೊಲೀಸ್ ಠಾಣೆ ಎಂದು ಘೋಷಿಸಲಾಗಿದೆ. ಜೊತೆಗೆ, ತನಿಖಾ ತಂಡದ ಅಧಿಕಾರಿಗಳಿಗೆ ಸೆಕ್ಷನ್ 193ರ ಅನ್ವಯ ಸಂಬಂಧಪಟ್ಟ ನ್ಯಾಯಾಲಯಗಳಿಗೆ ಅಂತಿಮ ವರದಿ ಸಲ್ಲಿಸುವ ಅಧಿಕಾರವನ್ನೂ ನೀಡಲಾಗಿದೆ.

ಇದನ್ನೂ ಓದಿ: ಸದನದಲ್ಲಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ರಾಜೀನಾಮೆ ಕೋಲಾಹಲ: ಅಂಗೀಕಾರದ ಬಗ್ಗೆ ಸ್ಪಷ್ಟನೆ ಕೊಟ್ಟ ಸ್ಪೀಕರ್

ಇನ್ನು ನೂತನವಾಗಿ ರಚನೆಯಾಗಿರುವ ಈ ಎಸ್‌ಐಟಿ ತಂಡವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಕಾನೂನು ಮತ್ತು ಸುವ್ಯವಸ್ಥೆ) ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us