ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಗೆ ತಾತ್ಕಾಲಿಕ ಬ್ರೇಕ್ ನೀಡಿದ ರಾಜ್ಯ ಸರ್ಕಾರ
ಬಯೋಮೆಟ್ರಿಕ್ ಹಾಜರಾತಿ ಬದಲಾಗಿ ಹಾಜರಾತಿ ಪುಸ್ತಕದಲ್ಲಿ ಹಾಜರಾತಿಯನ್ನು ಹಾಕುವಂತೆ ಅದನ್ನು ಆಯಾಯ ಇಲಾಖೆಯ ನೋಡಲ್ ಅಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಕ್ಕಳಲ್ಲಿ ಯುವಕರಲ್ಲಿ ಹೆಚ್ಚಾಗುತ್ತಿರುವ ಕೊರೊನಾದಿಂದ ಆತಂಕ ದ್ವಿಗುಣಗೊಂಡಿದೆ. ಅಲ್ಲದೆ ರಾಜ್ಯದ ಸಿಎಂ, ಸಚಿವರು ಸೇರಿದಂತೆ ಅನೇಕರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಸದ್ಯ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಗೆ ತಾತ್ಕಾಲಿಕವಾಗಿ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ.
ಮೊಟ್ಟ ಮೊದಲ ಬಾರಿಗೆ ಎಸ್.ಎಂ. ಕೃಷ್ಣ ಕಾಲದಲ್ಲಿ ಬಯೋಮೆಟ್ರಿಕ್ ಹಾಜರಾತಿ ವಿಧಾನ ಬಂತು. ಬಳಿಕ ಇದನ್ನು ಎಲ್ಲಾ ಕಡೆ ಜಾರಿ ಮಾಡಲಾಯಿತು. ಈಗ ಸರ್ಕಾರದಲ್ಲಿ ಬಯೋಮೆಟ್ರಿಕ್ ಪದ್ಧತಿ ಮಾತ್ರ ಇದೆ. ರಾಜ್ಯದ ಹಲವಾರು ಕಡೆ ಕೊರೊನಾ ಮತ್ತು ಒಮಿಕ್ರಾನ್ ಆತಂಕ ಹೆಚ್ಚಾಗಿದೆ. ಜೊತೆಗೆ ಸೋಂಕಿತರು ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯ ಹಾಗೂ ಇನ್ನಿತರ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದ ಅಧಿಕಾರಿ ಮತ್ತು ಸಿಬ್ಬಂದಿಗಳು ಬಯೋಮೆಟ್ರಿಕ್ ಹಾಜರಾತಿಯನ್ನು ನಮೂದಿಸುವುದಕ್ಕೆ ಮುಂದಿನ ಆದೇಶದವರೆಗೂ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ಸುತ್ತೋಲೆ ಕಳಿಸಿದೆ.
ಬಯೋಮೆಟ್ರಿಕ್ ಹಾಜರಾತಿ ಬದಲಾಗಿ ಹಾಜರಾತಿ ಪುಸ್ತಕದಲ್ಲಿ ಹಾಜರಾತಿಯನ್ನು ಹಾಕುವಂತೆ ಅದನ್ನು ಆಯಾಯ ಇಲಾಖೆಯ ನೋಡಲ್ ಅಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಲಾಗಿದೆ. ಇನ್ನು ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಕೂಡ ಇದೇ ರೀತಿ ಬಯೋಮೆಟ್ರಿಕ್ ಹಾಜರಾತಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸೂಚನೆ ನೀಡಿತ್ತು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜೀತೇಂದ್ರ ಸಿಂಗ್, ಟ್ವೀಟ್ ಮೂಲಕ ಸರ್ಕಾರಿ ನೌಕರರಿಗೆ ಉದ್ಯೋಗಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದರು.