ವಿಧಾನಸೌಧದ ಸುತ್ತಮುತ್ತ 2 ಕಿ.ಮೀ ತನಕವೂ ನಿಷೇಧಾಜ್ಞೆ; ವಾಹನ ಸವಾರರೇ ಗಮನಿಸಿ
ವಿಧಾನಸೌಧದ ಹೊರಗೆ ಕೇಂದ್ರ ಸರ್ಕಾರದ ಕೃಷಿ ನೀತಿಯನ್ನು ವಿರೋಧಿಸಿ ರೈತರ ಪ್ರತಿಭಟನೆಯೂ ಜೋರಾಗಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅಧಿವೇಶನದ ವೇಳೆ ಮೆರವಣಿಗೆ, ಪ್ರತಿಭಟನೆಗಳ ಸಾಧ್ಯತೆ ಹೆಚ್ಚಾಗಿರುವುದರಿಂದ ವಿಧಾನಸೌಧದ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರುವುದಕ್ಕೆ ಪೊಲೀಸರು ನಿರ್ಧರಿಸಿದ್ದಾರೆ.
ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದೆ. ಇಂದಿನಿಂದ ಹತ್ತು ದಿನಗಳ ಕಾಲ ಅಂದರೆ ಸೆಪ್ಟೆಂಬರ್ 24ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಈ ವೇಳೆ ವಿವಿಧ ವಿಚಾರಗಳ ಮೂಲಕ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳೂ ಸಿದ್ಧವಾಗಿವೆ. ಇತ್ತ ವಿಧಾನಸೌಧದ ಹೊರಗೆ ಕೇಂದ್ರ ಸರ್ಕಾರದ ಕೃಷಿ ನೀತಿಯನ್ನು ವಿರೋಧಿಸಿ ರೈತರ ಪ್ರತಿಭಟನೆಯೂ ಜೋರಾಗಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅಧಿವೇಶನದ ವೇಳೆ ಮೆರವಣಿಗೆ, ಪ್ರತಿಭಟನೆಗಳ ಸಾಧ್ಯತೆ ಹೆಚ್ಚಾಗಿರುವುದರಿಂದ ವಿಧಾನಸೌಧದ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರುವುದಕ್ಕೆ ಪೊಲೀಸರು ನಿರ್ಧರಿಸಿದ್ದಾರೆ. ಪ್ರತಿ ದಿನ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೂ 144 ಸೆಕ್ಷನ್ ಜಾರಿಯಲ್ಲಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೃಷಿ ನೀತಿ ವಿರೋಧಿ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರೈತರು ಬಂದು ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಪ್ರಮುಖವಾಗಿ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಹಾಗೂ ರಾಮನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದಾರೆ. ಇವರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಚನೆಯಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧದ 2 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡಲಿರುವ ಪ್ರತಿಭಟನಾ ಮೆರವಣಿಗೆ ವಿಧಾನ ಸೌಧವನ್ನು ತಲುಪುವ ಮಾರ್ಗದಲ್ಲಿ ಪೊಲೀಸರು ಈಗಾಗಲೇ ಸಾಕಷ್ಟು ಬಿಗಿಭದ್ರತೆ ವಹಿಸಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ತಲುಪಿ ಅಲ್ಲಿಂದ ರಾಯಣ್ಣ ಫ್ಲೈ ಓವರ್ ಮೂಲಕ ಶೇಷಾದ್ರಿ ರೋಡ್ಗೆ ಬಂದು ಕೆ.ಆರ್ ಸರ್ಕಲ್ನಿಂದ ಅಂಬೇಡ್ಕರ್ ವೀದಿ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಿರುವ ರೈತರನ್ನು ಶೇಷಾದ್ರಿ ರಸ್ತೆಯ ಫ್ರೀಡಂ ಪಾರ್ಕ್ ಮುಂಭಾಗದಲ್ಲೇ ತಡೆಯಲು ಪೋಲಿಸರು ಸಿದ್ಧವಾಗಿದ್ದಾರೆ. ಹೀಗಾಗಿ ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ತಡೆಯಲು ನಿರ್ಧರಿಸಲಾಗಿದ್ದು, ಒಂದು ವೇಳೆ ಆ ಬ್ಯಾರಿಕೇಡ್ ಗಳನ್ನು ದಾಟಿ ರೈತರು ಮುತ್ತಿಗೆಗೆ ಮುಂದಾದಲ್ಲಿ ಮಹಾರಾಣಿ ಕಾಲೇಜು ಮುಂಭಾಗದಲ್ಲಿ ಮತ್ತೊಂದು ಸುತ್ತಿನ ಬ್ಯಾರಿಕೇಡ್ ವ್ಯವಸ್ಥೆ ಮಾಡಿಕೊಳ್ಳಲಿದ್ದಾರೆ.
ರೈತರ ಪ್ರತಿಭಟನೆ ಹಿನ್ನೆಲೆ ಶೇಷಾದ್ರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಗೊಳ್ಳಿ ರಾಯಣ್ಣ, ಓಕಳೀಪುರಂ ಅಂಡರ್ಪಾಸ್ನಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ನಿಂತಲ್ಲೇ ನಿಂತಿರುವ ಬಸ್ಗಳು, ಕಾರು, ಬೈಕ್ ಸವಾರರು ಮುಂದೆ ಹೋಗಲಾರದೇ ಪರದಾಡುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಕೂಡಾ ಬಿಗಿಯಾಗಿದ್ದು, ಡಿಸಿಪಿ, ಮೂವರು ಎಸಿಪಿ ಸೇರಿ 450 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸದ್ಯ ಮೌರ್ಯ ವೃತ್ತದ ಕಡೆ ಮಾರ್ಗ ಬದಲಿಸಿದ ಪೊಲೀಸರು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ; ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ವಿಧಾನಸೌಧಕ್ಕೆ ರೈತರ ಮುತ್ತಿಗೆ; ಕೇಂದ್ರದ ಕೃಷಿ ನೀತಿ ವಿರುದ್ಧ ಪ್ರತಿಭಟನೆ
Published On - 12:46 pm, Mon, 13 September 21