ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದುಗೊಳಿಸಲು ಕರ್ನಾಟಕ ಸರ್ಕಾರ ಆದೇಶ
ಕರ್ನಾಟಕ ಸರ್ಕಾರದ ಅಧೀನದಲ್ಲಿ 60 ಉದ್ದಿಮೆಗಳಿವೆ. ಈ ಪೈಕಿ 21ಕ್ಕೂ ಹೆಚ್ಚು ಉದ್ದಿಮೆಗಳು ಸತತ ನಷ್ಟ ಅನುಭವಿಸುತ್ತಿದ್ದವು.
ಬೆಂಗಳೂರು: ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದುಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈವರೆಗೆ ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ನಿರ್ವಹಿಸುತ್ತಿದ್ದ ವಿಷಯಗಳನ್ನು ಆರ್ಥಿಕ ಇಲಾಖೆಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ‘ಕರ್ನಾಟಕ ಸರ್ಕಾರವು ಸಚಿವಾಲಯದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದುಗೊಳಿಸಿ ಆದೇಶಿಸಿದೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿದ್ದ ವಿಷಯಗಳನ್ನು ಆರ್ಥಿಕ ಇಲಾಖೆಗೆ ವರ್ಗಾಯಿಸಿ ಆದೇಶಿಸಿದೆ‘ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ ಎಸ್.ಪರೀಟ ಸರ್ಕಾರದ ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರಕ್ಕೆ ತಲೆನೋವಾಗಿದ್ದ ನಷ್ಟದ ಉದ್ದಿಮೆಗಳು
ಕರ್ನಾಟಕ ಸರ್ಕಾರದ ಅಧೀನದಲ್ಲಿ 60 ಉದ್ದಿಮೆಗಳಿವೆ. ಈ ಪೈಕಿ 21ಕ್ಕೂ ಹೆಚ್ಚು ಉದ್ದಿಮೆಗಳು ಸತತ ನಷ್ಟ ಅನುಭವಿಸುತ್ತಿದ್ದವು. ಇಂಥವುಗಳ ಪೈಕಿ ಸುಮಾರು 10 ಉದ್ದಿಮೆಗಳಿಗೆ ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಸುಮಾರು ₹ 42 ಸಾವಿರ ಕೋಟಿಯಷ್ಟು ಹೂಡಿಕೆ ಮಾಡಿತ್ತು. ಆದರೂ ಇವುಗಳ ಕಾರ್ಯನಿರ್ವಹಣೆ ಸುಧಾರಿಸಿರಲಿಲ್ಲ. ಒಟ್ಟು ಲೆಕ್ಕಾಚಾರದಲ್ಲಿ ಸರ್ಕಾರಕ್ಕೆ ₹ 16 ಸಾವಿರ ಕೋಟಿಯಷ್ಟು ನಷ್ಟವಾಗಿತ್ತು.
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ಮೈಸೂರು ಶುಗರ್ಸ್, ಮೈಸೂರ್ ಪೇಪರ್ ಮಿಲ್ಸ್, ಹೆಸ್ಕಾಂ, ಜೆಸ್ಕಾಂ, ಚೆಸ್ಕಾಂ ಕಂಪನಿಗಳಿಗಾಗಿ ಸರ್ಕಾರ ಸಾಕಷ್ಟು ಹಣ ಹೂಡಿಕೆ ಮಾಡಿದೆ. ಆದರೂ ಈ ಕಂಪನಿಗಳು ಹಲವು ಕಾರಣಗಳಿಂದಾಗಿ ನಷ್ಟದಲ್ಲಿವೆ.
ನಷ್ಟ ಕುರಿತಂತೆ ಈ ಮೊದಲು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಕಚೇರಿಗೆ ಮಾಹಿತಿ ನೀಡಿದ್ದ ಆರ್ಥಿಕ ಇಲಾಖೆಯು, ‘ಮೂಲ ಸೌಕರ್ಯ ಮತ್ತುಉ ಉದ್ಯೋಗ ಸೃಷ್ಟಿಗೆ ಕಾರಣವಾಗಿದ್ದ ಕಂಪನಿಗಳಲ್ಲಿ ಸರ್ಕಾರವು ಹೂಡಿಕೆ ಮಾಡುವುದು ಅನಿವಾರ್ಯ ಎಂದು ಹೇಳಿತ್ತು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:30 pm, Wed, 8 June 22