Good News: ಮಾಜಿ ಕುಸ್ತಿಪಟುಗಳ ಮಾಸಾಶನ ಹೆಚ್ಚಿಸಿದ ಕರ್ನಾಟಕ ಸರ್ಕಾರ; ಇಲ್ಲಿದೆ ವಿವರ
ರಾಷ್ಟ್ರಮಟ್ಟದ ಕುಸ್ತಿಪಟುಗಳಿಗೆ 3000 ರಿಂದ 4000 ರೂಪಾಯಿಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ. ಅಂತಾರಾಷ್ಟ್ರೀಯ ಕುಸ್ತಿಪಟುಗಳಿಗೆ 4000 ರಿಂದ 5000 ರೂಪಾಯಿಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಜಾರಿ ಮಾಡಲಾಗಿದೆ.
ಬೆಂಗಳೂರು: ಮಾಜಿ ಕುಸ್ತಿಪಟುಗಳ ಮಾಸಾಶನ ಹೆಚ್ಚಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಮಾಜಿ ಕುಸ್ತಿಪಟುಗಳ ಮಾಸಾಶನವನ್ನು 1 ಸಾವಿರ ರೂಪಾಯಿ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ. 50 ವರ್ಷ ಮೇಲ್ಪಟ್ಟ ಮಾಜಿ ಪೈಲ್ವಾನರಿಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ. ಮಾಸಾಶನ ಹೆಚ್ಚಿಸುವುದಾಗಿ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಇದೀಗ ರಾಜ್ಯಮಟ್ಟದ ಕುಸ್ತಿಪಟುಗಳಿಗೆ 2500 ರಿಂದ 3500 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ರಾಷ್ಟ್ರಮಟ್ಟದ ಕುಸ್ತಿಪಟುಗಳಿಗೆ 3000 ರಿಂದ 4000 ರೂಪಾಯಿಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ. ಅಂತಾರಾಷ್ಟ್ರೀಯ ಕುಸ್ತಿಪಟುಗಳಿಗೆ 4000 ರಿಂದ 5000 ರೂಪಾಯಿಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಜಾರಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ: ಸಿಎಂ ಬೊಮ್ಮಾಯಿ
ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ಶೇ 2.75 ರಷ್ಟು ತುಟ್ಟಿಭತ್ಯೆ (Dearness Allowance) ಹೆಚ್ಚಿಸಲು ನಿರ್ಧರಿಸಲಾಗಿದೆ. ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಸರ್ಕಾರವು ₹ 1447 ಕೋಟಿ ವಾರ್ಷಿಕ ವೆಚ್ಚ ಭರಿಸಲಿದೆ. ಈ ಸಂಬಂಧ ಶೀಘ್ರ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಇಂದಷ್ಟೇ (ಏಪ್ರಿಲ್ 5) ತಿಳಿಸಿದ್ದಾರೆ.
ತುಟ್ಟಿಭತ್ಯೆಯನ್ನು ಶೇ 5ರಷ್ಟು ಹೆಚ್ಚಿಸಬೇಕು ಎಂದು ಸರ್ಕಾರಿ ನೌಕರರು ಮನವಿ ಮಾಡಿದ್ದರು. ಆದರೆ ಸರ್ಕಾರವು ಶೇ 2.75ರಷ್ಟು ತುಟ್ಟಿಭತ್ಯೆಗೆ ಸಮ್ಮತಿಸಿದೆ. ಈ ಹಿಂದಿನ ಮೂರು ಅವಧಿಗಳ ಹೆಚ್ಚಳದ ಲೆಕ್ಕಾಚಾರದಂತೆ ತುಟ್ಟಿಭತ್ಯೆ ಶೇ 11ರಷ್ಟು ಹೆಚ್ಚಾಗಿತ್ತು. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಮೂಲ ವೇತನ ₹ 17,000ರಿಂದ ₹ 67,550 ತನಕ ಇದೆ.
ಕೇಂದ್ರ ಸರ್ಕಾರವು ಕಳೆದ ಮಾರ್ಚ್ 30ರಂದು ತನ್ನ ನೌಕರರಿಗೆ ಶೇ 4ರಷ್ಟು ತುಟ್ಟಿಭತ್ಯೆ ಘೋಷಿಸಿತ್ತು. ಇದರಿಂದ 1.16 ಕೋಟಿ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಲಾಭವಾಗಿತ್ತು. ಕೇಂದ್ರ ಸರ್ಕಾರಿ ನೌಕರರ ಮೂಲವೇತನದ ಶೇ 31ರಷ್ಟು ತುಟ್ಟಿಭತ್ಯೆಯು ಇದೀಗ ಶೇ 34ಕ್ಕೆ ಏರಿಕೆಯಾಗಿತ್ತು. ಜುಲೈ 1, 2021ರಿಂದ ಪೂರ್ವನ್ವಯವಾಗುವಂತೆ ಕೇಂದ್ರ ಸರ್ಕಾರ ಈ ತುಟ್ಟಿಭತ್ಯೆ ಘೋಷಿಸಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹ 9,544.50 ಕೋಟಿ ಹೊರೆ ಬೀಳಲಿದೆ ಹಣಕಾಸು ಇಲಾಖೆ ತಿಳಿಸಿತ್ತು.
ಕೇಂದ್ರ ಸರ್ಕಾರದ ಘೋಷಣೆಯ ನಂತರ ರಾಜ್ಯ ಸರ್ಕಾರವೂ ನೌಕರರ ವೇತನ ಹೆಚ್ಚಿಸಬೇಕು ಎಂಬ ಬೇಡಿಕೆ ಪ್ರಬಲವಾಗಿ ಕೇಳಿಬಂದಿತ್ತು. ರಾಜ್ಯ ಸರ್ಕಾರಿ ನೌಕರರ ಪರಿಷ್ಕರಣೆಗಾಗಿ ಆಯೋಗ ರಚಿಸಬೇಕೆಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದರು. ಕಳೆದ ಹಲವು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರು ಈ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದರು.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ, 7ನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಮುಖ್ಯಮಂತ್ರಿಗಳ ನಿರ್ಧಾರವನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಸ್ವಾಗತಿಸಿತ್ತು.
ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳದ ಪ್ರಕ್ರಿಯೆ ಆರಂಭವಾದ ಬೆನ್ನಿಗೇ ಬಾಕಿ ಇರುವ ತುಟ್ಟಿಭತ್ಯೆಯ ಪಾವತಿ (DA arrears) ಬಗ್ಗೆ ಚರ್ಚೆ ಆರಂಭವಾಗಿತ್ತು. ತುಟ್ಟಿಭತ್ಯೆ ಬಾಕಿ ಪಾವತಿಯ ಕುರಿತು ಸರ್ಕಾರ ಶೀಘ್ರ ಆದೇಶ ಹೊರಡಿಸಲಿದೆ ಎಂಬ ಮಾತುಗಳ ಸರ್ಕಾರಿ ನೌಕರರ ವಲಯದಲ್ಲಿದೆ. ಈ ಅದೇಶದ ಅನ್ವಯ ಪ್ರತಿ ನೌಕರರಿಗೆ ಸರಾಸರಿ ₹ 2 ಲಕ್ಷದಷ್ಟು ಬಾಕಿ ಮೊತ್ತ ಸಿಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವೂ ಇಂಥದ್ದೇ ನಿರ್ಧಾರ ತೆಗೆದುಕೊಳ್ಳಬೇಕೆಂದು ಸರ್ಕಾರಿ ನೌಕರರು ಆಗ್ರಹಿಸುತ್ತಿದ್ದರು.
ಇದನ್ನೂ ಓದಿ: ಮನೋವೈಕಲ್ಯತೆ ಹೊಂದಿದವರಿಗೆ ನೀಡುವ ಮಾಸಾಶನ ಹೆಚ್ಚಳ: ಕರ್ನಾಟಕ ಸರ್ಕಾರ ಆದೇಶ
ಇದನ್ನೂ ಓದಿ: ಪೈಲ್ವಾನರ ಮಾಸಾಶನ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂಬ ಸಿ.ಸಿ.ಪಾಟೀಲ್ ಹೇಳಿಕೆಗೆ ‘ಮಾಸಾಶನ ಬಂದೇ ಇಲ್ಲ’ ಎಂದ ಪೈಲ್ವಾನರು