
ಬೆಂಗಳೂರು, ಡಿಸೆಂಬರ್ 10: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ” (Karnataka Hate Speech and Hate Crimes Bill, 2025) ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಆಧಾರದಲ್ಲಿ ದ್ವೇಷದ ಭಾಷಣ ಮಾಡುವವರನ್ನು ನಿರ್ಬಂಧಿಸಲು ಮುಂದಾಗಿರುವ ರಾಜ್ಯ ಸರ್ಕಾರ, ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ಇಂದು (ಡಿಸೆಂಬರ್ 10) ಬೆಳಗಾವಿ ಅಧಿವೇಶನದಲ್ಲಿ (Belagavi winter session) ಈ ಮಸೂದೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಡಿಸಿದರು. ಆದರೆ ವಿಧೇಯಕಕ್ಕೆ ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ದು, ಚರ್ಚೆಯ ಸಂದರ್ಭದಲ್ಲಿ ವಿಧೇಯಕಕ್ಕೆ ಮತ್ತಷ್ಟು ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ ಅಥವಾ ಲಿಂಗದ ಆಧಾರದ ಮೇಲೆ ದ್ವೇಷದ ಭಾಷಣ ಮಾಡುವುದು ದ್ವೇಷಾಪರಾಧದ ವ್ಯಾಪ್ತಿಗೆ ಬರುತ್ತದೆ. ಅಲ್ಲದೆ, ಯಾವುದೇ ರೀತಿಯ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು ಸಹ ಇದರಲ್ಲಿ ಸೇರಿದೆ. ಯಾವುದೇ ಮಾಧ್ಯಮದ ಮೂಲಕ ದ್ವೇಷವನ್ನು ಉತ್ತೇಜಿಸುವುದು ಅಥವಾ ಪ್ರಚಾರ ಮಾಡುವುದಕ್ಕೆ ಈ ಮಸೂದೆಯ ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ.
ಈ ಮಸೂದೆಯು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ಸಮುದಾಯವನ್ನು ಗುರಿಯಾಗಿಸಿಲ್ಲವೆಂದು ಸ್ಪಷ್ಟಪಡಿಸಿರುವ ಸರ್ಕಾರ, ಇದು ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಮತ್ತು ದ್ವೇಷದ ಹರಡುವಿಕೆಯನ್ನು ತಡೆಯುತ್ತದೆ ಎಂದಿದೆ. ಭವಿಷ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಕಾನೂನು ಅನ್ವಯವಾಗಲಿದ್ದು, ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಪ್ರತಿಯೊಬ್ಬ ವ್ಯಕ್ತಿಯು ವೇದಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವಾಗ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ.
ಈ ಮಸೂದೆಯ ಅಡಿಯಲ್ಲಿ, ದ್ವೇಷ ಭಾಷಣ ಮಾಡುವವರಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಇದೇ ಅಪರಾಧವನ್ನು ಪುನರಾವರ್ತಿಸಿದರೆ ಎರಡು ವರ್ಷದಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50,000 ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಇಂತಹ ಕೃತ್ಯಗಳನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ದ್ವೇಷಾಪರಾಧದಿಂದ ಆಗಿರುವ ಹಾನಿಯ ತೀವ್ರತೆ ಪರಿಗಣಿಸಿರುವ ಸರ್ಕಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಿದ್ದು, ಈ ಅಪರಾಧಗಳ ವಿಚಾರಣೆಯನ್ನು ಜೆಎಂಎಫ್‌ಸಿ ನ್ಯಾಯಾಲಯ ನಡೆಸಲಿದೆ ಎಂದು ಹೆಳಲಾಗಿದೆ. ಈಗಿರುವ ಕಾನೂನಿನ ಪ್ರಕಾರ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 153A, ಸೆಕ್ಷನ್ 295A, ಸೆಕ್ಷನ್ 505 ಸೆಕ್ಷನ್‌ಗಳನ್ನು ದ್ವೇಷ ಭಾಷಣದ ವಿರುದ್ಧ ಬಳಸಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:47 pm, Wed, 10 December 25