ಕರ್ನಾಟದಲ್ಲೂ ನ್ಯುಮೋನಿಯಾ ಭೀತಿ, ಕೇಂದ್ರದ ಸೂಚನೆ ಬೆನ್ನಲ್ಲೇ ಎಚ್ಚೆತ್ತ ತಾಂತ್ರಿಕ ಸಲಹಾ ಸಮಿತಿ
Pneumonia: ಕರ್ನಾಟಕಕ್ಕೆ ಮತ್ತೆ ಚೀನಾ ಸೋಂಕಿನ ಆತಂಕ ಎದುರಾಗಿದೆ. ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಸೋಂಕು ಹೆಚ್ಚಳವಾಗಿದ್ದರಿಂದ ಕೇಂದ್ರ ಆರೋಗ್ಯ ಇಲಾಖೆ, ಕರ್ನಾಟಕಕ್ಕೆ ಅಲರ್ಟ್ ಮಾಡಿದ್ದು, ಆಸ್ಪತ್ರೆಗಳನ್ನ ಸನ್ನದ್ಧವಾಗಿಡಲು ಸೂಚಿಸಿದೆ.
ಬೆಂಗಳೂರು, (ನವೆಂಬರ್ 27): ಜಗತ್ತಿಗೆ ಕೊರೊನಾ ಸೋಂಕು (Coronavirus) ಹಂಚಿಕೆ ಮಾಡಿ, ಅಲ್ಲೋಲ ಕಲ್ಲೋಲ ಮಾಡಿದ್ದ ಚೀನಾದಲ್ಲಿ(China) ಮತ್ತೊಂದು ಸಾಂಕ್ರಾಮಿಕ ರೋಗದ ಬಿರುಗಾಳಿ ಬೀಸಿದೆ. ಕೊರೊನಾದಿಂದ ಇನ್ನೂ ಚೇತರಿಸಿಕೊಳ್ಳದ ಚೀನಾದಲ್ಲಿ ಮತ್ತೆ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ನಿಗೂಢ ನ್ಯುಮೋನಿಯಾ(Pneumonia) ಚೀನಾ ಶಾಲೆಗಳನ್ನ ಒಕ್ಕರಿಸಿದ್ದು, ಮಕ್ಕಳು ವಿಲವಿಲ ಅಂತಾ ಒದ್ದಾಡುತ್ತಿದ್ದಾರೆ. ಪ್ರತಿನಿತ್ಯ ಅಂದಾಜು 7 ಸಾವಿರ ಮಕ್ಕಳಲ್ಲಿ ಸೋಂಕು ಪತ್ತೆಯಾಗುತ್ತಿದೆ. ಹೀಗಾಗಿ ಭಾರತದಲ್ಲಿ ಮುನ್ನಚ್ಚರಿಕೆ ಕ್ರಮ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಇನ್ನು ಕರ್ನಾಟಕಕ್ಕೂ ಸಹ ಕೇಂದ್ರ ಸರ್ಕಾರ ಅಲರ್ಟ್ ಮಾಡಿದ್ದು, ಆಸ್ಪತ್ರೆಗಳನ್ನ ಸನ್ನದ್ಧವಾಗಿಡಲು ಸೂಚಿಸಿದೆ.
ಆಸ್ಪತ್ರೆಗಳಲ್ಲಿ ಹಾಸಿಗೆ, ಜ್ವರಕ್ಕೆ ಸಂಬಂಧಿಸಿದಂತೆ ಔಷಧ ಹಾಗೂ ಲಸಿಕೆ, ಆಕ್ಸಿಜನ್, ಆ್ಯಂಟಿಬಯೋಟಿಕ್ ,ಪಿಪಿಇ ಕಿಟ್ ಹಾಗೂ ವೈರಸ್ ಟೆಸ್ಟ್ ಕಿಟ್ ಸಜ್ಜಾಗಿಡಲು ಸೂಚನೆ ನೀಡಿದೆ. ಈ ವೈರಸ್ ಕೊರೊನಾ ಗುಣಲಕ್ಷಣಗಳು ಹೊಂದಿದೆ. ಹೀಗಾಗಿ ಇನ್ ಫ್ಲುಯೆಂಜಾ ಮಾದರಿ ಜ್ವರ ಹಾಗೂ ಗಂಭಿರ ಸ್ವರೂಪದ ಉಸಿರಾಟತೊಂದರೆ ಪ್ರಕರಣಗಳ ಮೇಲೆ ನಿಗಾ ವಹಿಸುವಂತೆ ತಿಳಿಸಿದೆ.
ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡುವ ಸಾಧ್ಯತೆ
ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಕೇಂದ್ರದ ಸೂಚನೆಯನ್ನು ಕರ್ನಾಟಕ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಲು ಮುಂದಾಗಿದೆ. ಡಾ.ರವಿ ನೇತೃತ್ವದಲ್ಲಿ ಇಂದು ವರ್ಚುವಲ್ ಮೂಲಕ ಸಭೆ ಮಾಡಲಿದ್ದು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಜ್ಞರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಸಭೆ ಬಳಿಕ ನ್ಯುಮೋನಿಯಾ ಮಾದರಿಯ ಸೋಂಕಿಗೆ ರಾಜ್ಯದಲ್ಲಿ ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ