Karnataka High Court: ಶಾಲೆಗಳಿಗೆ ಶಾಲು, ಹಿಜಾಬ್ ಬೇಡ: ಮೌಖಿಕ ಸೂಚನೆ ಕೊಟ್ಟು ಫೆ 14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2022 | 5:28 PM

ಪ್ರಕರಣದಲ್ಲಿ ಹಲವು ಸೂಕ್ಷ್ಮಗಳು ಇರುವ ಹಿನ್ನೆಲೆಯಲ್ಲಿ ವಿಸ್ತೃತ ವಿಚಾರಣೆಯ ಅಗತ್ಯವಿದೆ ಅಭಿಪ್ರಾಯಪಟ್ಟು, ಪ್ರಕರಣವನ್ನು ಸೋಮವಾರಕ್ಕೆ (ಫೆ.14) ಮುಂದೂಡಿತು

Karnataka High Court: ಶಾಲೆಗಳಿಗೆ ಶಾಲು, ಹಿಜಾಬ್ ಬೇಡ: ಮೌಖಿಕ ಸೂಚನೆ ಕೊಟ್ಟು ಫೆ 14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್​
ಹೈಕೋರ್ಟ್
Follow us on

ಬೆಂಗಳೂರು: ಕರ್ನಾಟಕದ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ಸಂಘರ್ಷ ಇದೀಗ ದೇಶದ ಗಮನ ಸೆಳೆದಿದೆ. ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್​ ಸರ್ಕಾರಿ ವಕೀಲರು ಹಾಗೂ ಅರ್ಜಿದಾರರ ವಕೀಲರ ವಾದಗಳನ್ನು ಆಲಿಸಿತು. ಪ್ರಕರಣದಲ್ಲಿ ಹಲವು ಸೂಕ್ಷ್ಮಗಳು ಇರುವ ಹಿನ್ನೆಲೆಯಲ್ಲಿ ವಿಸ್ತೃತ ವಿಚಾರಣೆಯ ಅಗತ್ಯವಿದೆ ಅಭಿಪ್ರಾಯಪಟ್ಟು, ಪ್ರಕರಣವನ್ನು ಸೋಮವಾರಕ್ಕೆ (ಫೆ.14) ಮುಂದೂಡಿತು. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳು ಶೀಘ್ರ ಆರಂಭವಾಗಬೇಕು. ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತುಗಳನ್ನು ಬಳಸುವಂತಿಲ್ಲ. ಕೇಸರಿ ಶಾಲು ಅಥವಾ ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗುವಂತಿಲ್ಲ ಎಂದು ನ್ಯಾಯಾಲಯವು ಮೌಖಿಕ ಆದೇಶದಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು. ಸೋಮವಾರದಿಂದ ಪ್ರತಿದಿನ ವಿಚಾರಣೆ ನಡೆಸುತ್ತೇವೆ. ಸದ್ಯಕ್ಕೆ ಮಧ್ಯಂತರ ಆದೇಶ ಕೊಡಲು ಇಚ್ಛಿಸುತ್ತೇವೆ. ವಿಚಾರಣೆ ಮುಂದಿಯುವವರೆಗೆ ಯಾವುದೇ ಧಾರ್ಮಿಕ ಗುರುತುಗಳನ್ನು ಬಳಸಬಾರದು. ರಾಜ್ಯದಲ್ಲಿ ಆದಷ್ಟೂ ಬೇಗ ಶಾಲಾ ಕಾಲೇಜುಗಳು ಮತ್ತೆ ಆರಂಭವಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹೇಳಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್, ಇಸ್ಲಾಂ ಧಾರ್ಮಿಕ ನಂಬಿಕೆಗಳ ಪ್ರಕಾರ ಪತಿ, ತಂದೆ, ಪತಿಯ ತಂದೆ, ಮಕ್ಕಳು ಸೇರಿದಂತೆ ಕೆಲ ನಿರ್ದಿಷ್ಟ ವ್ಯಕ್ತಿಗಳ ಎದುರು ಮಾತ್ರ ಮಹಿಳೆ ಹಿಜಾಬ್ ಧರಿಸದಂತೆ ಕಾಣಿಸಿಕೊಳ್ಳಲು ಅವಕಾಶವಿದೆ. ನಿರ್ದಿಷ್ಟಪಡಿಸಿದ ವ್ಯಕ್ತಿಗಳನ್ನು ಬಿಟ್ಟು ಉಳಿದವರ ಮುಂದೆ ಹಿಜಾಬ್ ಕಡ್ಡಾಯವಾಗಿದೆ. ಮದ್ರಾಸ್ ಹೈಕೋರ್ಟ್​ನ ವಿಭಾಗೀಯ ಪೀಠ ತೀರ್ಪು ಸಹ ಇದಕ್ಕೆ ಪೂರಕವಾಗಿದೆ. ಧರ್ಮಕ್ಕೆ ನಂಬಿಕೆಯೇ ಆಧಾರ ಎಂದು ಹೇಳಿದ ಅವರು ಜೊರಾಷ್ಟ್ರಿಯನ್ ಧರ್ಮದ ನಂಬಿಕೆ ರಾಷ್ಟ್ರಗೀತೆ ಹಾಡಲು ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಸುಪ್ರೀಂಕೋರ್ಟ್ ಸಹ ಗುರುತಿಸಿದೆ ಎಂದರು.

ಅರ್ಜಿದಾರರ ಪರ ವಾದ ಮಂಡಿಸಿದ ಮತ್ತೋರ್ವ ವಕೀಲ ಸಂಜಯ್ ಹೆಗ್ಡೆ, ಶಾಲೆಗಳಲ್ಲಿ ಮೊದಲು ಸಮವಸ್ತ್ರ ಎಂಬುದು ಇರಲಿಲ್ಲ. ತಮಿಳುನಾಡಿನಲ್ಲಿ ಮೊದಲಿಗೆ ಅದು ಶುರುವಾಯಿತು. 1995ರಲ್ಲಿ ಕರ್ನಾಟಕ ಸರ್ಕಾರ ನಿಯಮಗಳನ್ನು ರೂಪಿಸಿತು. ಸಮವಸ್ತ್ರವನ್ನು 5 ವರ್ಷಗಳಿಗೆ ಒಮ್ಮೆ ಬದಲಿಸಬೇಕು. ಕಾಯ್ದೆಯಲ್ಲಿ ಶಾಲೆಗಳಿಗೆ ಸಮವಸ್ತ್ರ ಸಂಬಂಧ ಕೆಲ ಸೂಚನೆಗಳಿವೆ. ಆದರೆ ಪಿಯು ಕಾಲೇಜುಗಳಿಗೆ ಸಮವಸ್ತ್ರ ಸಂಬಂಧ ಯಾವುದೇ ನಿಯಮಗಳಿಲ್ಲ. ಹೃದಯ ವೈಶಾಲ್ಯತೆ ಇಲ್ಲದೇ ಈ ದೇಶದ ಬೆಳವಣಿಗೆ ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಹಿಜಾಬ್ ವಿಚಾರ ದೊಡ್ಡದು ಮಾಡಿ ಮಕ್ಕಳು ಮನಸ್ಸು ಹಾಳು ಮಾಡಿದ್ದಾರೆ: ರೇಣುಕಾಚಾರ್ಯ ಆಕ್ರೋಶ
ಇದನ್ನೂ ಓದಿ: ಎಲ್ಲ ದೇಶವಿರೋಧಿ ಹುಳುಗಳು ಈಗ ಹೊರಗೆ ಬರ್ತಿವೆ: ಹಿಜಾಬ್ ವಿವಾದ ಕುರಿತು ಬಸನಗೌಡ ಯತ್ನಾಳ್

Published On - 5:03 pm, Thu, 10 February 22