ಅನಧಿಕೃತ ಕಟ್ಟಡ ನಿರ್ಮಿಸಿದ ಪ್ರಭಾವಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ; ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಂಡುಬಂದರೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಕಾಗದದ ಮೇಲಿನ ಕ್ರಮಕ್ಕಿಂತ ವಾಸ್ತವದಲ್ಲಿ ಕ್ರಮ ಕೈಗೊಳ್ಳಿ. ಪ್ರಭಾವಿಗಳ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಿ ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ವಿಚಾರವಾಗಿ ಪ್ರಭಾವಿಗಳ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಇಂದು ವಿಚಾರಣೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹಾಜರಾಗಿದ್ದು, 1,31,745 ಅನಧಿಕೃತ ಕಟ್ಟಡಗಳ ಸರ್ವೆ ನಡೆಸಲಾಗಿದೆ. ಈ ಪೈಕಿ 16,286 ಕಟ್ಟಡಗಳಿಗೆ ದಾಖಲೆ ನೀಡುವಂತೆ ನೋಟಿಸ್ ನೀಡಲಾಗಿದೆ. 2020ರಿಂದೀಚೆಗೆ 8,496 ಕಟ್ಟಡಗಳಿಗೆ ನಕ್ಷೆ ನೀಡಲಾಗಿದೆ. ಇವುಗಳಲ್ಲಿ 7,245 ಕಟ್ಟಡಗಳ ಸರ್ವೆ ನಡೆಸಲಾಗಿದೆ. 5,341 ಕಟ್ಟಡಗಳು ನಕ್ಷೆ ಉಲ್ಲಂಘಿಸಿರುವುದು ಪತ್ತೆಯಾಗಿದೆ.
ಈಗಾಗಲೇ ಬೆಂಗಳೂರಿನ 2,656 ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ವರದಿ ಸಲ್ಲಿಸಲು 3 ತಿಂಗಳ ಕಾಲಾವಕಾಶಕ್ಕೆ ಮನವಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಂಡುಬಂದರೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಕಾಗದದ ಮೇಲಿನ ಕ್ರಮಕ್ಕಿಂತ ವಾಸ್ತವದಲ್ಲಿ ಕ್ರಮ ಕೈಗೊಳ್ಳಿ. ಪ್ರಭಾವಿಗಳ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಿ ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳನ್ನು ಗುರುತಿಸಿ, ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಈ ಹಿಂದೆಯೇ ನ್ಯಾಯಾಲಯ ಖಡಕ್ ಆದೇಶಿ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಬಿಬಿಎಂಪಿ ನಕ್ಷೆ ಮಂಜೂರಾತಿ ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರಿನಲ್ಲಿ ನಿರ್ಮಿಸಿರುವ ಕಟ್ಟಡಗಳ ಸಮೀಕ್ಷೆ ಕಾರ್ಯವನ್ನು ನಡೆಸಿತ್ತು. ಹಾಗೇ, ನಿಯಮಗಳನ್ನು ಪಾಲಿಸದ ಮಾಲೀಕರಿಗೆ ನೋಟಿಸ್ ಕೂಡ ನೀಡಿತ್ತು. ಬಿಬಿಎಂಪಿಯು 2020ರಿಂದ 2021ರ ಜೂನ್ವರೆಗೆ 8496 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಿತ್ತು. ಇವುಗಳ ಪೈಕಿ 6148 ಕಟ್ಟಡಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿತ್ತು. ಇದರಲ್ಲಿ 5223 ಕಟ್ಟಡಗಳು ನಿಯಮ ಉಲ್ಲಂಘಿಸಿರುವುದು ದೃಢಪಟ್ಟಿತ್ತು.
ಇದನ್ನೂ ಓದಿ: ಅನಧಿಕೃತ ರೆಸಾರ್ಟ್ ತೆರವು ಮಾಡದಿದ್ದರೆ ನೀವೇ ಹೊಣೆ; 4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್
Mantri Mall: ಬಿಬಿಎಂಪಿ ಅಧಿಕಾರಿಗಳಿಂದ ಬೆಂಗಳೂರಿನ ಮಂತ್ರಿ ಮಾಲ್ಗೆ ಮತ್ತೆ ಬಿತ್ತು ಬೀಗ