PSI Scam: ಅಮಾನತ್ತಾದ ಅಮೃತ್ ಪೌಲ್ ವಿರುದ್ಧ ತನಿಖೆಗೆ ಸಿಎಂ ಡಿಕೆಶಿ ಗ್ರೀನ್ ಸಿಗ್ನಲ್!

ಕರ್ನಾಟಕದ ಬಹುದೊಡ್ಡ ಪಿಎಸ್ಐ ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದ್ದು, ಅಮಾನತ್ತಿನಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ವಿರುದ್ಧ ಇಲಾಖಾ ತನಿಖೆ ಆರಂಭವಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

PSI Scam: ಅಮಾನತ್ತಾದ ಅಮೃತ್ ಪೌಲ್ ವಿರುದ್ಧ ತನಿಖೆಗೆ ಸಿಎಂ ಡಿಕೆಶಿ ಗ್ರೀನ್ ಸಿಗ್ನಲ್!
ಎಡಿಜಿಪಿ ಅಮೃತ್ ಪೌಲ್
Edited By:

Updated on: Jul 11, 2026 | 11:51 AM

ಮುಖ್ಯಾಂಶಗಳು

  • ಪಿಎಸ್ಐ ಹಗರಣದಲ್ಲಿ ಅಮಾನತ್ತಾಗಿರುವ ಎಡಿಜಿಪಿ ಅಮೃತ್ ಪೌಲ್ ವಿರುದ್ಧ ಕೊನೆಗೂ ಇಲಾಖಾ ತನಿಖೆ
  • ತನಿಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಚಿವರೂ ಆದ ಸಿಎಂ ಡಿ.ಕೆ. ಶಿವಕುಮಾರ್ ಅನುಮೋದನೆ
  • ಅಖಿಲ ಭಾರತ ಸೇವೆ ನಿಯಮಗಳಡಿ ನೋಟಿಸ್ ಜಾರಿಯಾಗಿದ್ದು, ಹೇಳಿಕೆ ದಾಖಲಿಸಲು ಎಡಿಜಿಪಿಗೆ ಸೂಚನೆ

ಬೆಂಗಳೂರು, ಜುಲೈ 11: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ 545 ಪಿಎಸ್ಐ (PSI) ನೇಮಕಾತಿ ಅಕ್ರಮ ಹಗರಣವು ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಗರಣದ ಪ್ರಮುಖ ಆರೋಪಿಯಾಗಿ ಜೈಲು ಸೇರಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಸಸ್ಪೆಂಡೆಡ್ ಎಡಿಜಿಪಿ (ADGP) ಅಮೃತ್ ಪೌಲ್ ವಿರುದ್ಧ ಕೊನೆಗೂ ಇಲಾಖಾ ತನಿಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಅಧಿಕೃತ ಕ್ರಮ ಕೈಗೊಂಡಿದೆ.

ಚಾರ್ಜ್ ಶೀಟ್ ಸಲ್ಲಿಕೆಯಾಗಿ 4 ವರ್ಷದ ಬಳಿಕ ತನಿಕೆ

ಹಗರಣ ನಡೆದ ಅವಧಿಯಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ವಿರುದ್ಧ 2022 ರಲ್ಲೇ ಸಿಐಡಿ ಎಸ್‌ಐಟಿ ಪೊಲೀಸರು 1,406 ಪುಟಗಳ ದೋಷಾರೋಪ ಪಟ್ಟಿಯನ್ನು (ಚಾರ್ಜ್ ಶೀಟ್) ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಿದ್ದರು. ಚಾರ್ಜ್ ಶೀಟ್ ಸಲ್ಲಿಕೆಯಾಗಿ 4 ವರ್ಷ ಕಳೆದಿದ್ದರೂ ಇಲಾಖಾ ವಿಚಾರಣೆ ನಡೆದಿರಲಿಲ್ಲ. ಸದ್ಯ ಜುಲೈ 9 ರಂದು ಇಲಾಖಾ ವಿಚಾರಣೆಯ ಚಾರ್ಜ್ ಶೀಟ್ ಜಾರಿಯಾಗುವ ಮೂಲಕ ತನಿಖೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸಿಎಂ ಡಿ.ಕೆ. ಶಿವಕುಮಾರ್ ಅನುಮೋದನೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಇಲಾಖಾ ತನಿಖೆಗೆ ಅಧಿಕೃತ ಅನುಮೋದನೆ ನೀಡಿದ್ದಾರೆ. ಅಖಿಲ ಭಾರತ ಸೇವೆ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1969 ರ ನಿಯಮ 8(4) ರ ಅನ್ವಯ ಈ ಆಂತರಿಕ ತನಿಖೆ ಮುಂದುವರೆಯಲಿದೆ.

ತನಿಖಾ ಸಂಸ್ಥೆ ನೀಡಿದ್ದ ವರದಿ ಹಾಗೂ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ತಮ್ಮ ಮೇಲಿನ ಆರೋಪಗಳಿಗೆ ವಿವರಣೆ ನೀಡುವಂತೆ ಡಿಪಿಎಆರ್ ಇಲಾಖೆಯು ಅಮೃತ್ ಪೌಲ್‌ಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ. ಆರಂಭದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಹಾಗೂ ಉತ್ತರ ಕರ್ನಾಟಕದ ಎರಡು ಠಾಣೆಗಳಲ್ಲಿ ದಾಖಲಾಗಿದ್ದ ಈ ಪ್ರಕರಣ, ನಂತರ ಸಿಐಡಿ ಎಸ್‌ಐಟಿಗೆ ವರ್ಗಾವಣೆಯಾಗಿತ್ತು. ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರು ಈ ಹಗರಣದಲ್ಲಿ ಜೈಲು ಪಾಲಾಗಿದ್ದು, ಈಗ ಇಲಾಖಾ ವಿಚಾರಣೆ ತೀವ್ರಗೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us