SSLC Supplementary Exam 2022: ಮೇ 27ರಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ: ಬಿಸಿ ನಾಗೇಶ್
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ 2022: ಮೇ 27ರಿಂದ ಜೂನ್ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ವರ್ಷ ಶೇ 85.63ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ 8.53 ಲಕ್ಷ ವಿದ್ಯಾರ್ಥಿಗಳ ಪೈಕಿ 7.38 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಪೈಕಿ 145 ವಿದ್ಯಾರ್ಥಿಗಳು ಔಟ್ ಆಫ್ ಪಡೆದಿದ್ದಾರೆ. ಅನುತ್ತೀರ್ಣಗೊಂಡ (ಫೇಲ್ ಆದವರು) ವಿದ್ಯಾರ್ಥಿಗಳಿಗೆ ಮೇ 27ರಿಂದ ಜೂನ್ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಜೂನ್ 3ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಎಸ್ಎಸ್ಎಲ್ಸಿ ಫಲಿತಾಂಶ ಕುರಿತು ಮತ್ತಷ್ಟು ಮಾಹಿತಿ ಇಲ್ಲಿ ಕ್ಲಿಕ್ ಮಾಡಿ
2021-22ನೇ ಸಾಲಿನ 10ನೇ ತರಗತಿಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ನೀಡಿದರು. ಈ ಬಾರಿ ರಾಜ್ಯದಲ್ಲಿ 8,20,900 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 8,07,206 ವಿದ್ಯಾರ್ಥಿಗಳು ಹಾಜರಾಗಿದ್ದರು. 20,406 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ರಿಪೀಟರ್ಸ್ ಸೇರಿದಂತೆ 8,53,436 ಒಟ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶದ ವಿವರ ನೀಡಿದರು. 625ಕ್ಕೆ 625 ಅಂಕಗಳನ್ನು ಒಟ್ಟು 145 ಮಕ್ಕಳು ಪಡೆದಿದ್ದಾರೆ.
ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕೊರೊನಾ ಪಿಡುಗು ವ್ಯಾಪಿಸಿದ್ದ ಕಾರಣದಿಂದಾಗಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ ನಡೆದಿರಲಿಲ್ಲ. ಈ ವರ್ಷ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳ ಪೈಕಿ ಶೇ 85.63ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ. ಕಳೆದ ಹತ್ತುವರ್ಷಗಳ ಅಂಕಿಅಂಶಗಳನ್ನು ಪರಿಶೀಲಿಸಿದರೆ ಇದು ದಾಖಲೆಯ ಫಲಿತಾಂಶ ಎನಿಸಿದೆ. ಶೇ 90.29 ಬಾಲಕಿಯರು ಮತ್ತು ಶೇ 81.03ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. ಗ್ರೇಸ್ ಅಂಕಗಳ ಮೂಲಕ 40,061 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 145 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂದರೆ, 625ಕ್ಕೆ 625 ಅಂಕ ತೆಗೆದಿದ್ದಾರೆ.
ಈ ಬಾರಿ A+ ಗ್ರೇಡ್ನಲ್ಲಿ 1,18,875, A ಗ್ರೇಡ್ನಲ್ಲಿ 1,82,600, B+ನಲ್ಲಿ 1,73,528, B ಗ್ರೇಡ್ನಲ್ಲಿ 1,43,900 ಮಕ್ಕಳು ಪಾಸಾಗಿದ್ದಾರೆ. C+ನಲ್ಲಿ 87,801, C ಗ್ರೇಡ್ನಲ್ಲಿ 14,627 ಮಕ್ಕಳು ಪಾಸಾಗಿದ್ದಾರೆ. 91ರಿಂದ 100 ಅಂಕ ಗಳಿಸಿದ್ದರೆ A+ ಗ್ರೇಡ್, 81ರಿಂದ 90 ಅಂಕ ಗಳಿಸಿದ್ದ A ಗ್ರೇಡ್, 71ರಿಂದ 80 ಅಂಕ ಗಳಿಸಿದ್ದರೆ B+ ಗ್ರೇಡ್, 61ರಿಂದ 60 ಅಂಕವಿದ್ದರೆ B ಗ್ರೇಡ್, 51ರಿಂದ 60 ಅಂಕ ಗಳಿಸಿದ್ದರೆ C+ ಹಾಗೂ 35ರಿಂದ 50 ಅಂಕ ಪಡೆದಿದ್ದರೆ C ಗ್ರೇಡ್ ಎಂದು ವಿಂಗಡಿಸಲಾಗುತ್ತದೆ.
ನೂರಕ್ಕೆ ನೂರು ಫಲಿತಾಂಶ
1462 ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆ ತೆಗೆದುಕೊಂಡ ಎಲ್ಲ ಮಕ್ಕಳೂ ಪಾಸಾಗಿದ್ದಾರೆ. 467 ಅನುದಾನಿತ ಶಾಲೆಗಳು ಮತ್ತು 1991 ಅನುದಾನ ರಹಿತ ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಬಂದಿದೆ. ಎರಡು ಸರ್ಕಾರಿ ಶಾಲೆಗಳು, ಮೂರು ಅನುದಾನಿತ ಮತ್ತು 15 ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
Published On - 1:30 pm, Thu, 19 May 22